ಬೆಂಗಳೂರು : ಇಂದು ಬೆಳಂಬೆಳಿಗ್ಗೆ ತ್ರಿವಳಿ ಕೊಲೆಗೆ ರಾಜ್ಯ ರಾಜಧಾನಿ ಬೆಚ್ಚಿಬಿದ್ದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ತಾಯಿ, ಅಜ್ಜಿ ಹಾಗೂ ಮಾವನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ನಗರದ ಕೊಟ್ಟಿಗೆ ಪಾಳ್ಯದಲ್ಲಿ ನಡೆದಿರುವ ಈ ಘಟನೆಯಲ್ಲಿ ಆರೋಪಿ 34 ವರ್ಷದ ಪ್ರಶಾಂತ್ ಎನ್ನುವವನು ತಾನು ನೇಣಿಗೆ ಶರಣಾಗಿದ್ದಾನೆ. ಈತ ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದ ಎಂಬುವುದು ಪ್ರಾಥಮಿಕ ಮೂಲಗಳ ಮಾಹಿತಿಯಾಗಿದೆ. ಆದರೆ ತನಿಖೆಯಿಂದಲೇ ಪ್ರಕರಣದ ವಾಸ್ತವತೆ ಬಯಲಿಗೆ ಬರಬೇಕಿದೆ.

ಇನ್ನೂ ಮೃತ ಆರೋಪಿ ಪ್ರಶಾಂತ್ ತಾಯಿ ನಂಜಮ್ಮ ಗಾರ್ಮೆಂಟ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ನೇಣಿಗೆ ಶರಣಾಗಿರುವ ಆರೋಪಿ ಪ್ರಶಾಂತ್ ಮೈತುಂಬ ಸಾಲ ಮಾಡಿಕೊಂಡಿದ್ದ. ಈ ಕಾರಣಕ್ಕಾಗಿ ದಿನಾಲೂ ಮನೆಯಲ್ಲಿ ಜಗಳ ಮಾಡುತ್ತಿದ್ದನು. ಹೀಗಾಗಿ ಈ ಘಟನೆಗೆ ಕಾರಣನಾಗಿದ್ದಾನೆ ಎನ್ನುವುದು ಸದ್ಯದ ಮಾಹಿತಿಯಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






