ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಬಿಟ್ಕಾಯಿನ್ ಪ್ರಕರಣದಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಗೃಹ ಇಲಾಖೆ ರಿಲೀಫ್ ನೀಡಿದೆ.

ಅಧಿಕಾರಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲು ಅಗತ್ಯವಿರುವ ಪೂರ್ವಾನುಮತಿಯನ್ನು ಗೃಹ ಇಲಾಖೆ ನೀಡದ ಕಾರಣ, ಸಿಐಡಿ ಎಸ್ಐಟಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದೆ. ಇದರಿಂದ ಶ್ರೀಧರ್ ಪೂಜಾರ್ (ಡಿವೈಎಸ್ಪಿ – DySP), ಚಂದ್ರಾಧರ್ (ಪೊಲೀಸ್ ಇನ್ಸ್ಪೆಕ್ಟರ್), ಡಿ.ಎಂ. ಪ್ರಶಾಂತ್ ಬಾಬು (ಪೊಲೀಸ್ ಇನ್ಸ್ಪೆಕ್ಟರ್), ಲಕ್ಷ್ಮೀ ಕಾಂತಯ್ಯ (ಪೊಲೀಸ್ ಇನ್ಸ್ಪೆಕ್ಟರ್) ಸಿಐಡಿ ಇವರ ವಿರುದ್ಧ ಎಸ್ಐಟಿ ನಡೆಸುತ್ತಿದ್ದ ತನಿಖೆಯ ಚಾರ್ಜ್ಶೀಟ್ನಿಂದ ಸದ್ಯಕ್ಕೆ ಕೈಬಿಡಲಾಗಿದೆ.

2020-21ರಲ್ಲಿ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮೂಲಕ ಅಕ್ರಮವಾಗಿ ಬಿಟ್ಕಾಯಿನ್ ವರ್ಗಾವಣೆ ಮಾಡಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಅಧಿಕಾರಿಗಳ ವಿರುದ್ಧ ತನಿಖೆ ನಡೆದಿತ್ತು.

ಈ ಅಧಿಕಾರಿಗಳು, ಸೈಬರ್ ತಜ್ಞ ಸಂತೋಷ್ ಕುಮಾರ್ ಜೊತೆ ಶಾಮೀಲಾಗಿ, ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಎಂಬುವರ ಕ್ರಿಪ್ಟೋ ವ್ಯಾಲೆಟ್ಗಳನ್ನು ದುರ್ಬಳಕೆ ಮಾಡಿಕೊಂಡಿದ್ದರು. ಈ ಮೂಲಕ ಬರೋಬ್ಬರಿ 1 ಕೋಟಿ 83 ಲಕ್ಷದ 624 ರೂಪಾಯಿ ಮೌಲ್ಯದ ಬಿಟ್ಕಾಯಿನ್ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದರು ಎನ್ನುವ ಆರೋಪದ ಮೇಲೆ ಎಸ್ಐಟಿ ತನಿಖೆ ನಡೆಸಿತ್ತು. ಆದರೆ, ಗೃಹ ಇಲಾಖೆಯಿಂದ ಅಭಿಯೋಜನೆಗೆ ಅನುಮತಿ ಸಿಗದ ಕಾರಣ ಅಧಿಕಾರಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಎಸ್ಐಟಿ ಬಿ-ರಿಪೋರ್ಟ್ ಸಲ್ಲಿಸಿದೆ.

ಇದೇ ವೇಳೆ, ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಸೈಬರ್ ತಜ್ಞ ಸಂತೋಷ್ ಕುಮಾರ್ ವಿರುದ್ಧ ತನಿಖೆ ಮುಂದುವರಿದಿದೆ. ಅವರ ವಿರುದ್ಧ ಬಿಟ್ಕಾಯಿನ್ ಅಕ್ರಮ ವರ್ಗಾವಣೆ, ವಂಚನೆ ಹಾಗೂ ಸಾಕ್ಷ್ಯ ತಿರುಚಿದ ಆರೋಪಗಳ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲೂ ಮತ್ತೆ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.





