ಬೆಳಗಾವಿ : ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಒಂದೊಂದಾಗಿ ಅನಾಹುತಗಳು ಸಂಭವಿಸುತ್ತಿವೆ. ಈಗಾಗಲೇ ನಗರದ ವಿವಿಧ ಭಾಗಗಳು ಮಳೆಯ ನೀರಿನಿಂದ ಜಲಾವೃತವಾಗಿದ್ದಲ್ಲದೆ, ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆಯೇ ನಗರದ ಖಾಸ್‌ಬಾಗ್ ಪ್ರದೇಶದಲ್ಲಿ ನಿರಂತರ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ಬೃಹತ್ ಹುಣಸೆ ಮರ ಬಿದ್ದು ನಾಲ್ಕು ಮನೆಗಳಿಗೆ ಅಪಾರ ಹಾನಿಯಾಗಿರುವ ಘಟನೆ ನಡೆದಿದೆ.

ನಿರಂತರ ಮಳೆಯ ಹಿನ್ನೆಲೆಯಲ್ಲಿ ಹಳೆಯ ಮರದ ಬೇರಿಗೆ ನೀರು ತಗುಲಿ ಸುತ್ತಮುತ್ತಲೂ ಜವಳು ಪ್ರದೇಶ ನಿರ್ಮಾಣವಾಗಿದ್ದರಿಂದ ಬೃಹತ್ ಪ್ರಮಾಣದ ಮರ ಬಿದ್ದಿದೆ. ಇದರ ಪರಿಣಾಮ ಇಬ್ಬರಿಗೆ ಗಾಯಗಳಾಗಿದ್ದು, ನಾಲ್ಕು ಮನೆಯ ಸದಸ್ಯರು ಸ್ಪಲ್ಪದಲ್ಲೇ ಬಚಾವಾಗಿದ್ದಾರೆ. ಖಾಸ್‌ಬಾಗ್‌ನ ಉಪ್ಪಾರ ಗಲಿಯಲ್ಲಿ ನಡೆದಿರುವ ಈ ಅವಾಂತರಕ್ಕೆ ಸ್ಥಳೀಯರು ಶಾಕ್‌ಗೆ ಒಳಗಾಗಿದ್ದಾರೆ. ಬೆಳಗಿನ ಜಾವ ಎಂದಿನಂತೆ ಮರದ ಕೆಳಗೆ ದಿನನಿತ್ಯದ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಮರ ಬೀಳುವ ಲಕ್ಷಣ ಕಂಡು ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ : ಖಾಮಿನೈ ಅಂತ್ಯಸಂಸ್ಕಾರದಲ್ಲೇ ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹಟಾಮಿ ಪ್ರತಿಜ್ಞೆ! ಜಗತ್ತಿಗೆ ಇರಾನ್‌ನಿಂದ ಮತ್ತೊಂದು ಎಚ್ಚರಿಕೆ!
ಘಟನೆಯ ವೇಳೆ ಮನೆಯಲ್ಲಿದ್ದ ಕೆಲ ಅಗತ್ಯ ವಸ್ತುಗಳು ನಾಶವಾಗಿದ್ದು, ಬಡ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಸದ್ಯ ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಸಂತ್ರಸ್ತ ಕುಟುಂಬಸ್ಥರು ಸರ್ಕಾರ ಹಾಗೂ ಅಧಿಕಾರಿಗಳು ತಮಗೆ ಸೂಕ್ತ ಪರಿಹಾರ ನೀಡಬೇಕೆಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.
ಮರ ಬಿದ್ದ ರಭಸಕ್ಕೆ ಇಲ್ಲಿನ ನಿವಾಸಿ ಅನಿಲ್ ಮುಟ್ಕೇಕರ್ ಮನೆಯ ಗೋಡೆ ಕುಸಿದಿದ್ದು, ಆನಂದ್ ಭದ್ವಾಂಕರ್, ಏಕನಾಥ್ ಭದ್ವಾಂಕರ್, ಪ್ರಶಾಂತ್ ಗೋರ್ಲೆ ಮನೆಗಳ ಮುಂಭಾಕ್ಕೆ ಹಾನಿಯುಂಟಾಗಿದೆ. ನಗರದ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಸ್ಥಳಕ್ಕೆ ದೌಡಾಯಿಸಿ ಧರೆಗುರುಳಿರುವ ಬೃಹತ್ ಮರವನ್ನು ಕತ್ತರಿಸಿ ರಸ್ತೆಯಿಂದ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದಾರೆ.






