ವಿಜಯ್ ಭರಮಸಾಗರ
ನಿರ್ದೇಶನ: ದೇವನೂರು ಚಂದ್ರು
ನಿರ್ಮಾಣ: ಲಹರಿ ವೇಲು, ನವೀನ್ ಮನೋಹರನ್, ಜಿ.ರಮೇಶ್, ಜಿ. ಆನಂದ್, ಚಂದ್ರು ಮನೋಹರನ್
ತಾರಾಗಣ: ವಿನಯ್ ರಾಜಕುಮಾರ್, ಲೂಸ್ ಮಾದ ಯೋಗಿ, ಮೇಘಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತಕುಮಾರ್, ಅಪರ್ಣ, ಅರುಣ್ ಸಾಗರ್ ಇತರರು.
ಇದು ಊರುಕೇರಿಯ ಕಥೆ. ಅದರಲ್ಲೂ ಈ ನೆಲದ ಸೊಗಡು, ಸೊಬಗು ತುಂಬಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಹಳ್ಳಿಗಾಡಿನ ಸಂಸ್ಕೃತಿ, ಆಚರಣೆ ಮೇಳೈಸಿದೆ. ಈ ಕಥೆಯ ವಿಶೇಷವೆಂದರೆ ಅದು ಚೆಂದದ ಹಳ್ಳಿ ಭಾಷೆ. ಕಥೆ ಸರಳವಾಗಿದೆ. ಆದರೆ, ಚಿತ್ರಕಥೆಯಲ್ಲೊಂದಷ್ಟು ವೇಗ ಇರಬೇಕಿತ್ತು. ಆದರೂ, ನಿರ್ದೇಶಕರ ಅಚ್ಚುಕಟ್ಟಿನ ನಿರೂಪಣೆ ಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತೆ. ನಿರ್ದೇಶಕರಲ್ಲಿ ಕಥೆಯ ಹಿಡಿತವಿದೆ. ಪಾತ್ರಗಳನ್ನು ಕಟ್ಟಿಕೊಡುವ ಜಾಣತನವಿದೆ. ಗ್ರಾಮ್ಯ ಭಾಷೆಯ ಅರಿವಿದೆ. ವಾಸ್ತವದ ನೋಟವೂ ಇದೆ. ಆ ಕಾರಣಕ್ಕೆ ಗ್ರಾಮಾಯಣ ರುಚಿಸುತ್ತಾ ಹೋಗುತ್ತೆ. ಮಾಸ್ ಪ್ರಿಯರಿಗೂ ಇಷ್ಟವಾಗುವ, ಕ್ಲಾಸ್ ಪ್ರೇಮಿಗಳಿಗೂ ಸೈ ಅನ್ನುವ ಕಥಾಹಂದರ ಹತ್ತಿರವಾಗುತ್ತೆ.
ಕಥೆ ಏನು?
ದೇವಪುರ ಅನ್ನುವ ಒಂದು ಊರು. ಅಲ್ಲಿ ಎಲ್ಲವೂ ಚಂದ. ಸೀನ (ಹೀರೋ) ಮತ್ತು ಒಂದಷ್ಟು ಜೀವದ ಗೆಳೆಯರ ಓಡಾಟ, ಒಡನಾಟ ನೋಡೋರಿಗೆ ಚಂದ. ಆ ಹಳ್ಳಿಯಲ್ಲೇ ಓಡಾಡಿಕೊಂಡಿರುವ ಕುಸುಮ (ನಾಯಕಿ) ಮೇಲೆ ನಾಯಕನಿಗೆ ಪ್ರೀತಿ. ಇಬ್ಬರ ಪ್ರೀತಿಯ ಟ್ರ್ಯಾಕ್ ಒಂದು ಕಡೆಯಾದರೆ, ಮತ್ತೊಂದು ಕಡೆ ಊರೊಳಗಿನ ಇನ್ನೊಂದು ಗುಂಪು. ಮಧ್ಯೆ ಒಂದಷ್ಟು ವಿಚಾರಕ್ಕೆ ಸಂಘರ್ಷ. ಅದು ತಾರಕಕ್ಕೇರಿದಾಗ ಏನೆಲ್ಲಾ ಆಗಿ ಹೋಗುತ್ತೆ ಅನ್ನೋದು ಕಥಾಹಂದರ. ಇಲ್ಲಿ ಒಂದಷ್ಟು ಪ್ರೀತಿ ಇದೆ, ಗೆಳೆತನವಿದೆ, ದ್ವೇಷವಿದೆ, ರಾಜಕೀಯ ತಂತ್ರವೂ ಇದೆ. ಮೋಸವಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಭಾವುಕತೆಯೂ ತುಂಬಿದೆ. ಒಂದು ಹಳ್ಳಿಯಲ್ಲಿ ಏನೆಲ್ಲಾ ಇರಬೇಕೋ ಎಲ್ಲವೂ ಇಲ್ಲಿದೆ. ಆದರೆ, ಒಬ್ಬ ಒಳ್ಳೆಯ ಹುಡುಗನ ಮೇಲೆ ಅವನ ಗೆಳೆಯರ ಮೇಲೆ ನಡೆಯುವ ಆರೋಪ ವಿಕೋಪಕ್ಕೆ ಹೋದಾಗ ನಡೆಯುವ ಗದ್ದಲ, ಗಲಾಟೆಯಿಂದ ಏನೆಲ್ಲಾ ಸನ್ನಿವೇಶಗಳು ಉದ್ಭವಿಸುತ್ತವೆ ಅನ್ನೋದು ಕಥೆ.

ಇಲ್ಲಿ ಹೈಲೆಟ್ ಅಂದರೆ, ಕಥೆ ಮತ್ತು ಲೊಕೇಷನ್. ಜೊತೆಗೆ ಆಯ್ಕೆ ಮಾಡಿರುವ ಪಾತ್ರ. ಆ ಪಾತ್ರಗಳಿಂದ ಬರುವ ಡೈಲಾಗು. ಒಂದೊಂದು ಪಾತ್ರ ಕೂಡ ತನ್ನದೇ ಆದ್ಯತೆ ಹೊಂದಿದೆ. ಅಲ್ಲೆಲ್ಲೋ ಮೋಟಾರ್ ಸರಿ ಮಾಡೋ ಗೆಳೆಯರ ಗುಂಪು. ಇನ್ನೆಲ್ಲೋ ಗಂಡಸಿನಂತೆ ಹೊಲ ಹೂಳುವ ಹುಡುಗಿ. ಇನ್ನೆಲ್ಲೋ ಓಡಾಡುವ ಅಮಾಯಕ. ಕಣ್ಣಿಗೆ ಕಂಡರೂ ಕಾಣದ ರೀತಿ ಕುಕೃತ್ಯ ಎಸಗುವ ರಾಜಕಾರಣಿ. ಊರೊಳಗೆ ಇರುವ ಐದು ರುಪಾಯಿ ಡಾಕ್ಟ್ರು. ಊರಿನ ಸುದ್ದಿಯನ್ನು ಫೋಟೊ ಸಮೇತ ಹಾಕಿಸೋ ಫೋಟೋಗ್ರಾಫರ್ ಇವೆಲ್ಲವೂ ನಮ್ಮ ನಿಮ್ಮ ನಡುವೆ ಕಾಣುವ ಪಾತ್ರಗಳಂತೆ. ಅವನ್ನು ಚಂದವಾಗಿ ಹೆಣೆದಿದ್ದಾರೆ ನಿರ್ದೇಶಕರು.
ಸಿನಿಮಾದಲ್ಲಿ ಡೈಲಾಗ್ಗಳಿಗೆ ಮಹತ್ವ ಇದೆ. ಅಲ್ಲಲ್ಲಿ ಕೇಳುವ ಸಂಭಾಷಣೆಯಲ್ಲಿ ಧಮ್ ಇದೆ. ಆದರೆ, ಚಿತ್ರಕತೆಯ ವೇಗಕ್ಕೆ ಇನ್ನಷ್ಟು ಧಮ್ ಇರಬೇಕಿತ್ತು. ಹೀರೋ ಹೇಳುವ ದುಡಿಯೋರ್ ಕೈಗೂ ಹೊಡೆಯೊರ ಕೈಗೂ ಬಾಳ ವ್ಯತ್ಯಾಸ ಐತೆ. ನನ್ನ ಕೈ ದುಡಿಯೋರ ಪರ. ಹೀಗೆ ಒಂದೊಂದು ಡೈಲಾಗ್ ಮಜಾ ಎನಿಸುತ್ತವೆ. ಕೆಲವೊಂದು ದೃಶ್ಯಗಳು ಹೊರಬಂದರೂ ಕಾಡುತ್ತಾ ಹೋಗುತ್ತವೆ.
ಸಿನಿಮಾದಲ್ಲಿ ಮಚ್ಚು ಝಳಪಳಿಸುತ್ತೆ. ಹಾಗಂತ, ಡಮ್ಮಿ ಅನಿಸಲ್ಲ. ರಿಯಲ್ ಹೊಡೆದಾಟ ದೃಶ್ಯಗಳು ಮಾಸ್ ಪ್ರಿಯರಿಗೆ ಖುಷಿಕೊಡುತ್ತವೆ. ಮೊದಲರ್ಧ ಲವ್ಲಿಯಾಗಿ ಸಾಗುವ ಕಥೆ ದ್ವಿತಿಯಾರ್ಧ ಗಟ್ಟಿಯಾಗಿ, ಗಂಭೀರತೆಗೆ ದೂಡುತ್ತಾ ಹೋಗುತ್ತೆ. ಚಿತ್ರಕಥೆ ಕೊಂಚ ವೇಗ ಕಮ್ಮಿ ಎನಿಸುತ್ತಿದ್ದಂತೆ, ಹಾಡುಗಳು ಬಂದು ವೇಗಕ್ಕೆ ಹೆಗಲು ಕೊಡುತ್ತವೆ. ಇನ್ನಷ್ಟು ಬಿಗಿಯಾದ ನಿರೂಪಣೆ ಮಾಡುವ ಅವಕಾಶವಿತ್ತು. ಗಟ್ಟಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಬಹುದಿತ್ತು. ಆದರೂ ಗ್ರಾಮಾಯಣದ ಸೊಬಗಿಗೆ ಅಡ್ಡಿ ಇಲ್ಲ.
ಯಾರು ಹೇಗೆ?
ಸಿನಿಮಾದಲ್ಲಿ ಸೀನನಾಗಿ ವಿನಯ್ ರಾಜಕುಮಾರ್ ಅಬ್ಬರಿಸಿದ್ದಾರೆ. ಈವರೆಗಿನ ಪಾತ್ರಕ್ಕಿಂತ ಅವರಿಗಿಲ್ಲಿ ವಿಭಿನ್ನ ಪಾತ್ರವಿದೆ. ಅವರ ಬಾಡಿಲಾಂಗ್ವೇಜ್, ಡೈಲಾಗ್ ಡಿಲವರಿ, ಸ್ಕ್ರೀನ್ ಎಪಿಯರೆನ್ಸ್ ಮೂಲಕ ಖುಷಿಪಡಿಸುತ್ತಾರೆ. ಇನ್ನು ಮೇಘಶೆಟ್ಟಿ ಕೂಡ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಕುಸುಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಎಮೋಷನ್ ದೃಶ್ಯದಲ್ಲಿ ಅವರಿಂದ ಇನ್ನಷ್ಟು ಎಫರ್ಟ್ ಬೇಕಿತ್ತು ಎನಿಸುತ್ತೆ. ಒಬ್ಬ ಹಳ್ಳಿ ಹುಡುಗಿಯಾಗಿ ಅದರಲ್ಲೂ ರೈತ ಕುಟುಂಬದ ಹುಡುಗಿಯಾಗಿ ಹೇಗೆ ಕಾಣಬೇಕು ಹಾಗೆಯೇ ಇದ್ದಾರೆ. ಗ್ಲಾಮರ್ ಪಕ್ಕಕ್ಕಿಟ್ಟು ಥೇಟ್ ಹಳ್ಳಿ ಹುಡುಗಿಯಾಗಿ ಇಷ್ಟವಾಗುತ್ತಾರೆ.
ಅಪರ್ಣ ಅವರನ್ನು ಇಲ್ಲಿಯವರೆಗೆ ಸ್ಪಷ್ಟ ಭಾಷೆಯ ಕಂಠದ ಕನ್ನಡತಿಯನ್ನಾಗಿ ನೋಡಿದ್ದೀರಿ. ನಟಿಯಾಗಿಯೂ ಸೈ. ಆದರೆ, ಇಲ್ಲಿ ಒಬ್ಬ ಮಗನ ತಾಯಿಯಾಗಿ ಕಾಡುತ್ತಾರೆ. ಹೊರಬಂದರೂ ಅವರ ಪಾತ್ರ ಕಾಡುತ್ತೆ. ಗೋಪಾಲಕೃಷ್ಣ ದೇಶಪಾಂಡೆ ಪಾತ್ರವನ್ನು ಜೀವಿಸಿದ್ದಾರೆ. ಇಡೀ ಸಿನಿಮಾದಲ್ಲಿ ಅವರ ಪಾತ್ರ ಹೈಲೆಟ್. ಉಳಿದಂತೆ ಅಚ್ಯುತಕುಮಾರ್ ಎಂದಿನಂತೆ ಇಷ್ಟವಾದರೆ,, ಜಹಂಗೀರ್ ನಗಿಸುವ ಮೂಲಕ ಗಂಭೀರತೆಗೂ ಕರೆದುಕೊಂಡು ಹೋಗುತ್ತಾರೆ. ಲೂಸ್ ಮಾದ ಯೋಗಿ ಕರಿಬೆಕ್ಕು ಪಾತ್ರದಲ್ಲಿ ಮಜವೆನಿಸುತ್ತಾರೆ. ಸಖತ್ ಬಹಳ ದಿನಗಳ ಬಳಿಕ ಬಂದರೂ ಅವರಿಲ್ಲಿ ಅಬ್ಬರಿಸಿದ್ದಾರೆ. ರಾಜಕಾರಣಿ ಯಾಗಿ ಅರುಣ್ ಸಾಗರ್ ಮೋಸ ಮಾಡಿಲ್ಲ.
ಸಂಗೀತದಲ್ಲಿ ಪೂರ್ಣಚಂದ್ರ ಅವರ ಸಂಪೂರ್ಣತೆ ಇದೆ. ಎರಡು ಹಾಡುಗಳು ಗುನುಗುವಂತಿವೆ. ದೇವರನ್ನು ಬೈಯೋ ಹಾಡು ಇಲ್ಲಿ ವಿಶೇಷ. ಸಂತೋಷ್ ರೈ ಪಾತಾಜೆ ಅವರ ಕೈಚಳಕದಲ್ಲಿ ಗ್ರಾಮಾಯಣದ ಸೊಬಗಿದೆ.
ಕೊನೆ ಮಾತು: ಸಿನಿಮಾ ಆರಂಭದಲ್ಲಿ ಭರವಸೆ ಮೂಡಿಸಿ ಕೊನೆಗೆ ಕೊಂಚ ನಿರಾಸೆ ಅನಿಸೋದು ದಿಟ. ಆದರೂ ಸೀತೆಯ ರಾಮಾಯಣ ಕೇಳಿದ್ದೀರಿ. ಸೀನನ ಗ್ರಾಮಾಯಣ ಮಿಸ್ ಮಾಡಬೇಡಿ ಅಂತ ಮುಲಾಜಿಲ್ಲದೆ ಹೇಳಲ್ಲಡ್ಡಿಯಿಲ್ಲ.






