ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರ, ಕೋಲ್ಕತಾದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮೊಟ್ಟೆ ನೀಡುವುದನ್ನು ಕೈಬಿಡಲು ನಿರ್ಧರಿಸಿದೆ. ರಾಜ್ಯದಲ್ಲಿ ಇನ್ನು ಮುಂದೆ ಇಸ್ಕಾನ್‌ನ ಅನ್ನಮಿತ್ರ ಫೌಂಡೇಶನ್ ಸಸ್ಯಾಹಾರಿ ಬಿಸಿಯೂಟವನ್ನು ಪೂರೈಸಲಿದೆ.

ಪಶ್ಚಿಮ ಬಂಗಾಳ ಸರ್ಕಾರ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ತಯಾರಿಕೆಯನ್ನು ಇಸ್ಕಾನ್ (ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್) ಗೆ ವಹಿಸಿದ್ದು, ಬಿಸಿಯೂಟದಲ್ಲಿ ಮೊಟ್ಟೆಯ ಬದಲು ಪನೀರ್, ಸೋಯಾಬೀನ್, ಬೇಳೆಕಾಳು ಸೇರಿದಂತೆ ಪ್ರೋಟೀನ್‌ಯುಕ್ತ ಸಸ್ಯಾಹಾರಿ ಆಹಾರಗಳನ್ನು ನೀಡಲು ಇಸ್ಕಾನ್ ಸಂಸ್ಥೆ ನಿರ್ಧರಿಸಿದೆ.

ಸದ್ಯ ಬಿಜೆಪಿ ಸರ್ಕಾರದ ಈ ನಿರ್ಧಾರವನ್ನು ತೃಣಮೂಲ ಕಾಂಗ್ರೆಸ್ ನಾಯಕರು ಸೇರಿದಂತೆ ಅನೇಕರು ವಿರೋಧಿಸುತ್ತಿದ್ದು, ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಅದೇನೇ ಇರಲಿ ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಿಜೆಪಿ ಆಡಳಿತದ ಬಹುಪಾಲು ರಾಜ್ಯಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮೊಟ್ಟೆ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ವರದಿಗಳು ಹೇಳುತ್ತಿದೆ.

ದೇಶದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಹಲವಾರು ರಾಜ್ಯಗಳಲ್ಲಿ ಶಾಲಾ ಮಧ್ಯಾಹ್ನದ ಊಟದ ಕಾರ್ಯಕ್ರಮಗಳಲ್ಲಿ ಮೊಟ್ಟೆಗಳನ್ನು ಪರಿಚಯಿಸಲಾಯಿತು. ಆದರೆ ಇಂದು, ಭಾರತದ ಎಲ್ಲಾ ರಾಜ್ಯಗಳಲ್ಲಿ ಮೊಟ್ಟೆಗಳನ್ನು ನೀಡಲಾಗುತ್ತಿಲ್ಲ. ಬಿಜೆಪಿ ಆಡಳಿತವಿರುವ ಅಸ್ಸಾಂ, ಒಡಿಶಾ, ಉತ್ತರಾಖಂಡ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಪ್ರಸ್ತುತ ಶಾಲಾ ಬಿಸಿಯೂಟದಲ್ಲಿ ಮೊಟ್ಟೆ ನೀಡಲಾಗುತ್ತಿದ್ದು, ಉಳಿದಂತೆ ಯಾವ ರಾಜ್ಯದಲ್ಲೂ ಮಕ್ಕಳಿಗೆ ಮೊಟ್ಟೆ ನೀಡುತ್ತಿಲ್ಲ. ಇನ್ನು ಬಿಜೆಪಿ ಆಡಳಿತವಿರದ ಕರ್ನಾಟಕ , ಕೇರಳ , ತಮಿಳುನಾಡು , ತೆಲಂಗಾಣ, ಹಿಮಾಚಲ ಪ್ರದೇಶ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕಾರ್ಯಕ್ರಮ ಮುಂದುವರಿದಿದೆ.

ಇದು ಗಮನಿಸಬೇಕಾದ ಅಂಶವಾಗಿದ್ದು, ಬಿಜೆಪಿಗೆ ಮೊಟ್ಟೆ ಅಂದ್ರೆ ಅಲರ್ಜಿನಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಮೊಟ್ಟೆಯು ಉತ್ತಮ ಗುಣಮಟ್ಟದ ಪ್ರೋಟೀನ್ ಹಾಗೂ ಇತರ ಪೋಷಕಾಂಶಗಳು ಸಮೃದ್ಧವಾಗಿರುವ ಅತ್ಯಂತ ಕೈಗೆಟುಕುವ ದರದಲ್ಲಿ ಸಿಗುವ ಆಹಾರವಾಗಿದ್ದು, ಇದು ಶಾಲಾ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸೂಪರ್‌ಫುಡ್ ಆಗಿದೆ. ಆದರೆ ಇದೀಗ ಈ ವಿಚಾರವನ್ನು ರಾಜಕೀಯವಾಗಿ ಹಾಗೂ ಸಾಮಾಜಿಕ ಸಮಸ್ಯೆಯಾಗಿ ನೋಡಲಾಗುತ್ತಿದೆ. ಯಾಕೆಂದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆಡಳಿತ ಬರುತ್ತಿದ್ದಂತೆ ಶಾಲಾ ಮಕ್ಕಳಿಗೆ ಕೊಡುತ್ತಿದ್ದ ಮೊಟ್ಟೆ ರದ್ದು ಮಾಡಲಾಗಿದ್ದು, ಬಿಜೆಪಿಗರು ಮಕ್ಕಳ ಮೇಲೆ ಸಸ್ಯಹಾರವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ಪಕ್ಷಗಳು ಆರೋಪಿಸುತ್ತಿದೆ. ಅದೇನೆ ಇರಲಿ ರಾಜಕೀಯ ಪಕ್ಷಗಳು ಮೊಟ್ಟೆ ಸಸ್ಯಹಾರವೋ, ಮಾಂಸಹಾರವೋ ಎನ್ನುವ ಲೆಕ್ಕಾಚಾರಗಳನ್ನು ಬದಿಗಿಟ್ಟು, ಮಕ್ಕಳ ಆರೋಗ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ.






