ಬೆಂಗಳೂರು : ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಳಿಯ ಹಾಗೂ ಬೆಳಗಾವಿ ವಲಯ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ ಅವರ ನಿವಾಸದ ಇಡಿ ನಡೆಸಿದ ದಾಳಿ ಪ್ರಕರಣದಲ್ಲಿ ಮಹತ್ವದ ಮಾಹಿತಿಗಳು ಹೊರಬಿದ್ದಿವೆ.

ದಾಳಿ ಅಂತ್ಯಗೊಂಡ ಬಳಿಕ ಪತ್ರಿಕಾ ಪ್ರಕಟನೆಯ ಮೂಲಕ ಮಾಹಿತಿ ನೀಡಿದ ಇಡಿ ಅಧಿಕಾರಿಗಳು, ಶೋಧ ಕಾರ್ಯದ ವೇಳೆ ಒಟ್ಟು 13.3 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ದಾಳಿಯ ವೇಳೆ 5.5 ಕೋಟಿ ನಗದು, 7.8 ಕೋಟಿ ಮೌಲ್ಯದ ಚಿನ್ನಾಭರಣ, ಹಾಗೂ 3.3 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಇದಲ್ಲದೆ, ಕ್ಯಾಶ್ ಬುಕ್, ಆಸ್ತಿ ದಾಖಲೆಗಳು ಸೇರಿದಂತೆ ಹಲವು ಮಹತ್ವದ ಹಣಕಾಸು ದಾಖಲೆಗಳು ಇಡಿ ವಶಕ್ಕೆ ಸಿಕ್ಕಿವೆ. ವಶಪಡಿಸಿಕೊಂಡ ದಾಖಲೆಗಳ ಆಧಾರದ ಮೇಲೆ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ : “ಕಾಂಗ್ರೆಸ್ ಕಿಡಿಗೇಡಿಗಳು ಪೋಸ್ಟರ್ ಚಾಳಿ ಬಿಡದಿದ್ದರೆ ರಾಹುಲ್ ಗಾಂಧಿ ಮನೆಗೆ ಪೋಸ್ಟರ್ ಅಂಟಿಸುತ್ತೇವೆ”
ಈಗಾಗಲೇ ದಾಳಿಯ ಕುರಿತು ಇಡಿ ಅಧಿಕಾರಿಗಳು ಇನ್ನಷ್ಟು ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆಗಳಿವೆ. ಅಲ್ಲದೆ ಮಂಜುನಾಥ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜೊತೆ ವಿದೇಶದಲ್ಲಿ ಗಣಿಗಾರಿಕೆಯಲ್ಲಿ ಪಾಲುದಾರಿಕೆ ಹೊಂದಿರುವ ಬಗ್ಗೆ ದಾಖಲೆಗಳು ಅಧಿಕಾರಿಗಳಿಗೆ ಲಭ್ಯವಾಗಿವೆ ಎನ್ನಲಾಗಿದೆ.
ಹೀಗಾಗಿ ಮಂಜುನಾಥನಿಗೆ ಸುತ್ತಿಕೊಂಡಿರುವ ಇಡಿ ಉರುಳು ಜಾರಕಿಹೊಳಿ ಕುಟುಂಬಕ್ಕೂ ಅಂಟಿಕೊಳ್ಳುತ್ತಾ ಎಂಬ ಚರ್ಚೆಗಳು ಶುರುವಾಗಿವೆ. ಆದರೆ ಈ ಬಗ್ಗೆ ಪ್ರಾಥಮಿಕವಾಗಿ ಲಭ್ಯವಾಗಿರುವ ಮಾಹಿತಿಯು ಹಲವು ಸ್ಫೋಟಕ ಸಂಗತಿಗಳನ್ನು ಬಯಲಿಗೆ ತಂದಿದ್ದರೂ ಇಲಾಖೆಯಲ್ಲಿ ಯಾವೆಲ್ಲ ರೀತಿಯ ಹಗರಣಗಳು ನಡೆದಿವೆ ಎಂಬ ಬಗ್ಗೆಯೂ ಇಡಿ ಅಧಿಕಾರಿಗಳು ತನಿಖೆ ನಡೆಸುವ ಸಾಧ್ಯತೆಗಳಿವೆ.






