ಪಣಜಿ: ಗೋವಾದ ಜನಪ್ರಿಯ ಬಾಗಾ ಬೀಚ್‌ನಲ್ಲಿ ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿ ಕರ್ನಾಟಕದ ಪ್ರವಾಸಿಗರೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ವಿಜಯಪುರ ಜಿಲ್ಲೆಯ ಸಾಹಸ್ ಅಶ್ಪಾಕ್ ಮಸಾಲಿ ಎಂದು ಗುರುತಿಸಲಾಗಿದೆ.

ಬೀಚ್‌ನಲ್ಲಿರುವ ಬಂಡೆಯ ಮೇಲೆ ಕುಳಿತಿದ್ದ ವೇಳೆ ಅಶ್ಪಾಕ್ ಆಯತಪ್ಪಿ ಬಿದ್ದಿದ್ದು, ಪ್ರಬಲ ಅಲೆಗಳು ಅಪ್ಪಳಿಸಿ ಸಮುದ್ರದೊಳಗೆ ಎಳೆದುಕೊಂಡು ಹೋಗಿವೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದು, ಹಲವು ಗಂಟೆಗಳ ಹುಡುಕಾಟದ ನಂತರ ಅಶ್ಪಾಕ್ ಅವರ ಮೃತದೇಹ ಪತ್ತೆಯಾಗಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಗಾರು ಅವಧಿಯಲ್ಲಿ ಸಮುದ್ರ ತೀರ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದರೂ ಕೂಡ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿರುವುದು ವಿಷಾದನೀಯವಾಗಿದೆ.

ಮುತ್ತತ್ತಿಯಲ್ಲಿ ಒಂದೇ ಕುಟುಂಬದ ಐವರು ಸಾ**
ಫೋಟೋ ತೆಗೆದುಕೊಳ್ಳಲು ಹೋಗಿ ಒಂದೇ ಕುಟುಂಬದ ಐವರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪ ನಡೆದಿದೆ. ಚನ್ನಪಟ್ಟಣದ ವಿಜಯಮ್ಮ (50), ಶ್ವೇತಾ (38), ಪ್ರಿಯಾಂಕಾ (28), ಚೈತ್ರಾ (20) ಮತ್ತು ಮಹೇಶ್ ಮೃತ ದುರ್ದೈವಿಗಳು.

ಕುಟುಂಬ ಮುತ್ತತ್ತಿಯ ಮುತ್ತತ್ತಿರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಮುಗಿಸಿ ಕಾವೇರಿ ನದಿ ತೀರಕ್ಕೆ ತೆರಳಿದ್ದಾರೆ. ನದಿ ಮಧ್ಯೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಹಲಗೂರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಐವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.






