• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, June 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಾಮಾಜಿಕ ಬದಲಾವಣೆ-ಮೀಸಲಾತಿಯ ಪಾತ್ರ

ಸಾಂವಿಧಾನಿಕ ಉಪಕ್ರಮಗಳಿಂದ ಸಮಾಜ ಪಡೆದುಕೊಳ್ಳುವ ಔದಾತ್ಯಗಳಾದರೂ ಏನು ?

ಪ್ರತಿಧ್ವನಿ by ಪ್ರತಿಧ್ವನಿ
June 25, 2026
in Top Story, ಅಂಕಣ, ಇದೀಗ, ದೇಶ, ರಾಜಕೀಯ
0
ಸಾಮಾಜಿಕ ಬದಲಾವಣೆ-ಮೀಸಲಾತಿಯ ಪಾತ್ರ
Share on WhatsAppShare on FacebookShare on Telegram

ನಾ ದಿವಾಕರ, ಹಿರಿಯ ಲೇಖಕರು..

ADVERTISEMENT

(ಸಾಂವಿಧಾನಿಕ ಮೀಸಲಾತಿ-ಸಮಾಜ ಸುಧಾರಣೆ ಲೇಖನದ ಮುಂದುವರಿಕೆ)

ಸಾಮಾಜಿಕ ತಾರತಮ್ಯ ಹಾಗೂ ಆರ್ಥಿಕ ಅಸಮಾನತೆಗಳಿರುವ ಸಮಾಜಗಳಲ್ಲಿ ಶೋಷಿತ-ಅವಕಾಶವಂಚಿತ ಸಮುದಾಯಗಳನ್ನು ಸಾಮಾಜಿಕ ಪಿರಮಿಡ್ಡಿನ ತಳಪಾಯ ಎಂದೇ ನೋಡಲಾಗುತ್ತದೆ. ಇಲ್ಲಿನ ಸಮಾಜಗಳ ದುಡಿಮೆ ಮತ್ತು ಅವಿರತ ಶ್ರಮವೇ ದೇಶಗಳ ಆರ್ಥಿಕ ಅಭಿವೃದ್ಧಿಗೆ ಆಧಾರವಾದರೂ, ಈ ಉತ್ಪಾದಕೀಯ ಶಕ್ತಿಗಳನ್ನು (Productive forces) ಅಭಿವೃದ್ಧಿಯ ನೇರ ಫಲಾನುಭವಿಗಳಾಗಿ ಪರಿಗಣಿಸುವುದಿಲ್ಲ. ಬದಲಾಗಿ ಸಂಪತ್ತು ಸೃಷ್ಟಿಸುವ ಈ ಶ್ರಮಜೀವಿಗಳನ್ನು ಶಾಶ್ವತವಾಗಿ ದುಡಿಮೆಗಾರರಾಗಿಯೇ ಉಳಿಸಿ, ಅವರ ಜೀವನೋಪಾಯಕ್ಕೆ ಅಗತ್ಯವಾದ ಪರಿಕರಗಳನ್ನು, ಸೌಕರ್ಯ ಸೌಲಭ್ಯಗಳನ್ನು ಒದಗಿಸುವಂತಹ ಶಾಸನಗಳನ್ನು ಅಳವಡಿಸಲಾಗುತ್ತದೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಈ ಉಪಕ್ರಮಗಳನ್ನು ದೇಶಗಳ ಆರ್ಥಿಕ ಉನ್ನತಿಗೆ ಪೂರಕವಾಗಿ ರೂಪಿಸಲಾಗುತ್ತದೆ.

ಇಂತಹ ಉಪಕ್ರಮಗಳಿಗೆ ಗುರಿಯಾಗುವ ಜನಸಮುದಾಯಗಳು (Targeted Communities) ತಮ್ಮ ಜೀವನೋಪಾಯ ಮಾರ್ಗಗಳನ್ನು ಸರಾಗವಾಗಿ ಕಂಡುಕೊಳ್ಳುತ್ತವೆ ಹಾಗೂ ಕ್ರಮೇಣ ಈ ಸಮಾಜಗಳ ಸದಸ್ಯರ ಜೀವನ ಮಟ್ಟ ಸುಧಾರಣೆಯಾಗುತ್ತದೆ. ಆದರೆ ಈ ಸುಧಾರಣೆಗೆ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ಲಕ್ಷ್ಮಣರೇಖೆಯನ್ನು ವಿಧಿಸಲಾಗುತ್ತದೆ. ಸಾಮಾಜಿಕ ಮುಂಚಲನೆ ಮತ್ತು ಆರ್ಥಿಕ ಮೇಲ್‌ಚಲನೆಯಲ್ಲಿ ಈ ರೇಖೆಯನ್ನು ದಾಟಿ ಹೋಗಲು ಸಾಧ್ಯವಾಗದಂತೆ ಆರ್ಥಿಕ ನೀತಿಗಳನ್ನು ಸರ್ಕಾರಗಳು ಚಾಲ್ತಿಯಲ್ಲಿರಿಸುತ್ತವೆ. ಹಾಗಾಗಿಯೇ ಭಾರತದಲ್ಲೂ ಸಹ 80 ವರ್ಷಗಳ ಸ್ವಾವಲಂಬಿ ಆಡಳಿತ ಕಳೆದರೂ “ಬಡತನ ರೇಖೆಗಿಂತಲೂ ಕೆಳಗಿರುವ ” (Below Poverty Line) ಸಮುದಾಯಗಳು, ಸಾಪೇಕ್ಷವಾಗಿ ಕಡಿಮೆಯಾಗಿದ್ದರೂ,  ಹೆಚ್ಚಿನ ಸಂಖ್ಯೆಯಲ್ಲೇ ಕಾಣುತ್ತವೆ. ಇದನ್ನು ಅಭಿವೃದ್ಧಿಯ ಅನಿವಾರ್ಯತೆ ಎಂದೂ ಸಹ ವ್ಯಾಖ್ಯಾನಿಸಲಾಗುತ್ತದೆ.

ಎರಡನೆಯದಾಗಿ, ಹೀಗೆ ಆರ್ಥಿಕವಾಗಿ ಹಿಂದೂಡಲ್ಪಟ್ಟ (ಹಿಂದುಳಿದ ಎನ್ನುವುದು ಆಳುವ ವರ್ಗಗಳ ಪರಿಭಾಷೆ ) ಜನಸಮುದಾಯಗಳು ಒಂದು ಹಂತದವರೆಗೆ ಮಾತ್ರ ತಾಳ್ಮೆಯಿಂದ ನಿತ್ಯ ಬದುಕಿನ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯ. ಹಸಿವು, ಬಡತನ, ನಿರ್ವಸತಿ ಮತ್ತು ನಿರುದ್ಯೋಗದ ಸಮಸ್ಯೆಗಳು ಪರಾಕಾಷ್ಠೆಯ ಹಂತ ತಲುಪಿದಾಗ, ಈ ಸಮಾಜಗಳಲ್ಲಿರುವ ತಳಸ್ತರದ ಸದಸ್ಯರ ನಿತ್ಯ ಬದುಕು ಸಹ ದುಸ್ತರವಾಗುತ್ತದೆ. ಆಗ ಸಾಮಾಜಿಕ ಕ್ಷೋಭೆ ಸಹಜವಾಗಿ ಹೆಚ್ಚಾಗುತ್ತದೆ. ಇಲ್ಲಿ ಸೃಷ್ಟಿಯಾಗುವ ಹತಾಶೆ, ಆಕ್ರೋಶಗಳನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರಗಳು ಕೆಲವು ಸಾಂವಿಧಾನಿಕ ಉಪಕ್ರಮಗಳಿಗೆ ಮುಂದಾಗುತ್ತವೆ. ಈ ಸಮುದಾಯಗಳ ಸುಸ್ಥಿರ ಬದುಕಿಗೆ ಪೂರಕವಾದ ಶೈಕ್ಷಣಿಕ, ಔದ್ಯೋಗಿಕ ಅವಕಾಶಗಳನ್ನು ಸುಲಭವಾಗಿ ಒದಗಿಸುವುದು ಒಂದು ಮಾರ್ಗ. ಎರಡನೆಯದು ಈ ಸಮಾಜಗಳ ನಿತ್ಯ ಬದುಕಿಗೆ ತೊಂದರೆಯಾಗದಂತೆ ಸೌಲಭ್ಯ-ಸೌಕರ್ಯಗಳನ್ನು ನಿರಂತರವಾಗಿ ಒದಗಿಸುವುದು. ಈ ಜನಕಲ್ಯಾಣ ನೀತಿಗಳನ್ನೇ (Welfare Policies) ಭಾರತದ ರಾಜಕಾರಣದಲ್ಲಿ ʼ ಸಮಾಜವಾದ ʼ ಎಂದು ಭಾವಿಸಲಾಗುತ್ತಿದೆ.

ತಾರತಮ್ಯ ಸರಿಪಡಿಸುವ ಹಾದಿಯಲ್ಲಿ

ಈ ಆಡಳಿತಾತ್ಮಕ ಚೌಕಟ್ಟಿನಲ್ಲಿ ರೂಪುಗೊಳ್ಳುವುದು ಶೋಷಿತ ತಳಸಮುದಾಯಗಳಿಗೆ ಕಲ್ಪಿಸಲಾಗುವ ಶೈಕ್ಷಣಿಕ-ಔದ್ಯೋಗಿಕ ಮೀಸಲಾತಿ ಎಂಬ ಸಾಂವಿಧಾನಿಕ ಸೌಲಭ್ಯ. ಪಶ್ಚಿಮ ರಾಷ್ಟ್ರಗಳಲ್ಲಿ ಇದನ್ನು ಸಕಾರಾತ್ಮಕ ತಾರತಮ್ಯ (Polsitive Discrimination)  ಅಥವಾ ಧೃಡೀಕರಣ ಕ್ರಮ (Affirmative Action) ಎಂದು ಕರೆಯಲಾಗುತ್ತದೆ. ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಏಕಾಂಗಿ ಹೋರಾಟದ ಫಲಶ್ರುತಿ ಭಾರತದ ತಳಸಮುದಾಯಗಳು (ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತಿತರ ಶೋಷಿತ ಸಮಾಜಗಳು) ಈ ಮೀಸಲಾತಿಯ ಫಲಾನುಭವಿಗಳಾಗಿ  80 ವರ್ಷಗಳನ್ನು ಕಳೆದಿವೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಇದು ಅನಿವಾರ್ಯ ಕ್ರಮವೂ ಆಗುತ್ತದೆ. ಭಾರತದ ಸಂವಿಧಾನ ಒಂದು ನೆಲೆಯಲ್ಲಿ ಇದೇ ಲಕ್ಷಣಗಳನ್ನು ಹೊಂದಿರುವುದರಿಂದ, ಮೀಸಲಾತಿ ಮತ್ತು ಜನ ಕಲ್ಯಾಣ ಆರ್ಥಿಕತೆ ಅನಿವಾರ್ಯವಾಗಿತ್ತೆಂಬುದು ನಿರ್ವಿವಾದ ಸತ್ಯ.

ಆಳ್ವಿಕೆಯಲ್ಲಿ ಪ್ರಾತಿನಿಧ್ಯ , ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಸೂಕ್ತ ಅವಕಾಶ ಈ ಮೂರು ಮೀಸಲಾತಿ ಕಲ್ಪನೆಯ ಆಧಾರ ಸ್ತಂಭಗಳು. ಭಾರತದಲ್ಲಿ ವ್ಯಾಪಾರ-ವಾಣಿಜ್ಯ ಕ್ಷೇತ್ರಗಳಲ್ಲಿ ಇದೇ ಸೂತ್ರವನ್ನು ಅಳವಡಿಸಿರುವುದು ಅಪರೂಪ. ಇತ್ತೀಚೆಗೆ ಕರ್ನಾಟಕ ಸರ್ಕಾರ ಬಾರ್‌ ಲೈಸೆನ್ಸ್‌ಗಳನ್ನು ಮಂಜೂರು ಮಾಡುವಲ್ಲಿ ಮೀಸಲಾತಿಯನ್ನು ಘೋಷಿಸಿದೆ. ವಸತಿ ನಿವೇಶನಗಳು, ಪೆಟ್ರೋಲ್ ಬಂಕ್‌ಗಳು ಇನ್ನಿತರ ವಲಯಗಳಲ್ಲೂ ಸಹ ತಳಸಮುದಾಯಗಳಿಗೆ ಮೀಸಲಾತಿಯನ್ನು ವಿಸ್ತರಿಸಲಾಗುತ್ತದೆ. ಅದರೆ ಈ ವಾಣಿಜ್ಯ ಉಪಕ್ರಮಗಳು ನಿಲುಕುವುದು ದಲಿತರಲ್ಲಿ ಕೊಂಚ ಆರ್ಥಿಕ ಮೇಲ್‌ ಚಲನೆಯನ್ನು ಕಂಡಿರುವ ಗುಂಪುಗಳಿಗೆ ಮಾತ್ರ. ಇನ್ನೂ ಕೆಳಸ್ತರದಲ್ಲಿರುವವರಿಗೆ ಶಿಕ್ಷಣ, ಉದ್ಯೋಗ ಮತ್ತು ಆಳ್ವಿಕೆಯ ಪ್ರಾತಿನಿಧ್ಯ (Representation in Governance) ಅಥವಾ ರಾಜಕೀಯ ಪ್ರಾತಿನಿಧ್ಯ (Political Representation) ಮುಖ್ಯವಾಗುತ್ತದೆ.

ಸಮಾಜ ಮತ್ತು ಸುಧಾರಣೆ

ಈ ಹಿನ್ನೆಲೆಯಲ್ಲಿ “ ಸಾಮಾಜಿಕ ಬದಲಾವಣೆಯಲ್ಲಿ ಮೀಸಲಾತಿಯ ಪಾತ್ರ ” ಎಂಬ ವಿಷಯವನ್ನು ಚರ್ಚೆಗೊಳಪಡಿಸಿದಾಗ, ಮೂಲತಃ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಮೀಸಲಾತಿಯನ್ನು ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಈ ಮೂರೂ ನೆಲೆಗಳಲ್ಲಿ ವ್ಯಾಖ್ಯಾನಿಸುವಾಗ, ಬದಲಾವಣೆಯ ಸ್ವರೂಪ ಮತ್ತು ಆದ್ಯತೆಗಳು ಬದಲಾಗುತ್ತಾ ಹೋಗುತ್ತವೆ. ಈ ಮೂರೂ ವಲಯಗಳಲ್ಲಿ ಕಾಣುವ ಫಲಾನುಭವಿಗಳ ಆಯ್ಕೆ, ಆದ್ಯತೆ , ಜವಾಬ್ದಾರಿ ಮತ್ತು ಬಾಧ್ಯತೆಗಳು ಭಿನ್ನವಾಗಿಯೇ ಕಾಣುತ್ತವೆ. ಅಂತಿಮ ಗುರಿಯಾಗಿ ಸಮಾನತೆ, ಸಮ ಸಮಾಜವೇ ಕಂಡರೂ ಸಹ, ಇದನ್ನು ಸಾಕಾರಗೊಳಿಸುವ ಹಾದಿಯಲ್ಲಿ ಫಲಾನುಭವಿಗಳು ನಿರ್ವಹಿಸಬೇಕಾದ ಜವಾಬ್ದಾರಿಯುತ ಪಾತ್ರ ಭಿನ್ನವಾಗಿರುತ್ತದೆ.  ʼ ಸಾಮಾಜಿಕ ಬದಲಾವಣೆ ʼಯನ್ನು ವಿಶಾಲ ಹಂದರದಲ್ಲಿಟ್ಟು (Broader Canvas) ನೋಡುವಾಗ ʼ ಸಮಾಜ ʼದ ವ್ಯಾಪ್ತಿಯೂ ಹಿಗ್ಗುತ್ತದೆ.

ಈ ಸಂದರ್ಭದಲ್ಲಿ, ಸಾಂವಿಧಾನಿಕ ಮೀಸಲಾತಿಯನ್ನು ಸಾಮಾಜಿಕ ಬದಲಾವಣೆಗಳ ನೆಲೆಯಲ್ಲಿ ನೋಡುವುದಕ್ಕೂ ಮುನ್ನ ʼ ಸಮಾಜ ಸುಧಾರಣೆಯ ʼ ದಿಕ್ಕಿನಲ್ಲಿ ನೋಡಿದರೆ ಬಹುಶಃ ನಿರಾಸೆಯಾಗುತ್ತದೆ. ಏಕೆಂದರೆ 80 ವರ್ಷಗಳ ಸ್ವತಂತ್ರ ಚರಿತ್ರೆಯ ಭಾರತದಲ್ಲಿ ʼಸಮಾಜ ಸುಧಾರಕರುʼ ಉದಯಿಸಿಲ್ಲ. ಸುಧಾರಣೆಯ ಮಾರ್ಗಗಳನ್ನು ಸೂಚಿಸುವ ಚಿಂತಕರು ಅಪಾರ ಸಂಖ್ಯೆಯಲ್ಲಿದ್ದಾರೆ. ಆದರೆ ಸುಧಾರಣೆಯ ಕ್ರಮಗಳನ್ನು ನಿರ್ದೇಶಿಸುವ ಅಥವಾ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಉದಾತ್ತ ವ್ಯಕ್ತಿತ್ವವನ್ನು ಸ್ವತಂತ್ರ ಭಾರತ ರೂಪಿಸಲಾಗಿಲ್ಲ. ಇದಕ್ಕೆ ಸಮಾಜಶಾಸ್ತ್ರೀಯ ಕಾರಣಗಳು ಸಾಕಷ್ಟಿರಬಹುದು. ಮೇಲ್ನೋಟಕ್ಕೆ ಕಾಣುವ ವಾಸ್ತವವೆಂದರೆ, ಕಳೆದ ಏಳೆಂಟು ದಶಕಗಳ ಬೌದ್ಧಿಕ ಚಿಂತನೆಗಳಲ್ಲಿ ಅನುಕರಣೆ, ಅನುಸರಣೆಯ ಧೋರಣೆಯೇ ಪ್ರಧಾನವಾಗಿ ಕಾಣುತ್ತದೆ.

ಚಾರಿತ್ರಿಕ ದರ್ಶನಗಳ ಬೆನ್ನಟ್ಟಿ

ಮಾರ್ಕ್ಸ್‌, ಲೋಹಿಯಾ, ಅಂಬೇಡ್ಕರ್‌, ಗಾಂಧಿ, ಪೆರಿಯಾರ್‌, ನಾರಾಯಣಗುರು ಹೀಗೆ ಸ್ವಾತಂತ್ರ್ಯಪೂರ್ವ ಚಿಂತಕರ ವಿಚಾರಧಾರೆಗಳನ್ನು ಸಮಕಾಲೀನ ಸಮಾಜಕ್ಕೆ ಅನ್ವಯಿಸಿಕೊಂಡು ಅನುಸರಿಸುವುದು ಅಥವಾ ಸಾಂಸ್ಥಿಕವಾಗಿ ಅನುಕರಿಸುವುದು ನಾವು ಗುರುತಿಸಬಹುದಾದ ಸಾಮಾನ್ಯ ಲಕ್ಷಣ. ಈ ತತ್ವ-ಸಿದ್ದಾಂತಗಳಿಗೆ ಆತುಕೊಂಡ ಸಂಘಗಳು ವ್ಯಕ್ತಿಗಳು ತಮ್ಮ ಸುತ್ತಲೂ ನಿರ್ಮಿಸಿಕೊಂಡ ಬೇಲಿಗಳ ಹೊರತಾಗಿಯೂ ಭಿನ್ನ ಆಲೋಚನೆಗಳಿಗೆ ತೆರೆದುಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಮಾತ್ರ. ಹಿಂದುತ್ವ ರಾಜಕಾರಣದ ಫ್ಯಾಸಿಸ್ಟ್‌ ಭೂತ ಇದನ್ನು ಅನಿವಾರ್ಯವಾಗಿಸಿದೆ. ಇದರಿಂದಾಚೆ ನೋಡಿದಾಗ, ನಿರ್ದಿಷ್ಟ ʼ ವಾದಗಳ ʼ ಅನುಸರಣೆಯಲ್ಲೂ ನಾವು ಕಟ್ಟಿಕೊಂಡ ಭದ್ರಗೋಡೆಗಳು (Safety Walls) ಬಾಹ್ಯ ಜಗತ್ತಿನ ವಿಚಾರಧಾರೆಗಳಿಗೆ ಇರಬೇಕಾದ ಗವಾಕ್ಷಿಗಳನ್ನೂ ಸಹ ಮುಚ್ಚಿಬಿಟ್ಟಿದ್ದವು.

ತತ್ಪರಿಣಾಮವಾಗಿ ದಾರ್ಶನಿಕರ ಸೈದ್ಧಾಂತಿಕ ವಿಚಾರಧಾರೆಗಳ ಮುಖಾಮುಖಿಯಾಯಿತೇ ಹೊರತು ಅನುಸಂಧಾನ ಆಗಲಿಲ್ಲ. Vs (ವಿರುದ್ಧವಾಗಿ) ಎಂಬ ಪದ ತಾತ್ವಿಕ ಸಂವಾದಗಳಲ್ಲಿ ಸಾಮಾನ್ಯ ಲಕ್ಷಣವಾಯಿತು. ಈ ಬೌದ್ಧಿಕ ವಾತಾವರಣದಲ್ಲಿ (Intellectual Ecosystem)  ʼ ಸಮಾಜ ʼದ ಕಲ್ಪನೆಯೇ ಸಂಕುಚಿತವಾಗುತ್ತಾ ಹೋಯಿತು. ಶ್ರೇಣೀಕೃತ ಜಾತಿ ವ್ಯವಸ್ಥೆಯ ಪ್ರಭಾವಕ್ಕೊಳಗಾಗಿ ನಮ್ಮಲ್ಲಿ ಬ್ರಾಹ್ಮಣ ಸಮಾಜ, ವೀರಶೈವ ಸಮಾಜ, ದಲಿತ ಸಮಾಜ (ಅದರೊಳಗೆ ಹೊಲೆಯ-ಮಾದಿಗ ಸಮಾಜ) , ಮುಸ್ಲಿಂ-ಕ್ರೈಸ್ತ ಸಮಾಜ ಹೀಗೆ ಜಾತಿ, ಮತ ಧರ್ಮಗಳ ಚೌಕಟ್ಟುಗಳಲ್ಲಿ ʼ ಸಮಾಜ ʼ ಎಂಬ ವಿಶಾಲ ಕಲ್ಪನೆಯನ್ನು ಹಿಡಿದಿಡಲಾಯಿತು. ತತ್ಪರಿಣಾಮವಾಗಿ ʼ ಸಮಾಜ ಸುಧಾರಣೆ ʼ ಎನ್ನುವುದು ಸಮಗ್ರತೆಯನ್ನು ಪಡೆದುಕೊಳ್ಳಲೇ ಇಲ್ಲ. ಈ ಕೋಶೀಕರಣ (Cellularisation) ಪ್ರವೃತ್ತಿಯೇ ಇಂದಿಗೂ ಸಹ ಭಾರತೀಯ ಸಮಾಜವನ್ನು ವಿಘಟಿತ ರೂಪದಲ್ಲೇ ಕಾಪಾಡಿಕೊಂಡು ಬಂದಿದೆ.

ಹಾಗಾಗಿ ʼ ಸಮಾಜ ಸುಧಾರಕರು ʼ ಎಂದಾಕ್ಷಣ ನಾವು ಚರಿತ್ರೆಯತ್ತ ಹೊರಳುತ್ತೇವೆ. ಅಲ್ಲಿಂದಲೇ ಹೆಕ್ಕಿ ತೆಗೆದ ಆದರ್ಶಗಳನ್ನು ಸಮಕಾಲೀನಗೊಳಿಸುತ್ತಾ ವರ್ತಮಾನದ ಜನಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗುತ್ತೇವೆ. ಅಂಬೇಡ್ಕರ್‌, ಪೆರಿಯಾರ್‌ ಅಥವಾ ನಾರಾಯಣಗುರು ಸುಧಾರಿಸಲು ಪ್ರಯತ್ನಿಸಿದ ಹಿಂದೂ ಸಮಾಜ ಈಗ ರೂಪಾಂತರಗೊಂಡು, ತನ್ನದೇ ಆದ ಹೊಸ ಭೂಮಿಕೆಗಳನ್ನು ಸೃಷ್ಟಿಸಿಕೊಂಡಿರುವುದನ್ನು ಪರಾಮರ್ಶಿಸಲು ನಾವು ಮುಂದಾಗುತ್ತಿಲ್ಲ. ಕೆಲವು ಪ್ರಾಚೀನ ಅನಿಷ್ಠ ಪದ್ಧತಿಗಳು (ಅಸ್ಪೃಶ್ಯತೆ, ಮಹಿಳಾಧೀನತೆ ಅಥವಾ ಪುರುಷಾಧಿಪತ್ಯ, ಜಾತಿ-ಮತ ಶ್ರೇಷ್ಠತೆ ಇತ್ಯಾದಿ) ಜಾರಿಯಲ್ಲಿದ್ದರೂ, ನಿತ್ಯ ಬದುಕಿನಲ್ಲಿ ಇವೆಲ್ಲವೂ ಕಾಣಿಸಿಕೊಳ್ಳುವ ರೂಪ ಮತ್ತು ಮಾದರಿ ಭಿನ್ನವಾಗಿವೆ. ಗ್ರಾಮೀಣ-ನಗರ, ಸುಶಿಕ್ಷಿತ-ಅನಕ್ಷರಸ್ತ , ಹಿಂದುಳಿದ-ಮುಂದುವರೆದ, ಬಡವ-ಶ್ರೀಮಂತ, ಕರ್ಮಠ-ಆಧುನಿಕ ಹೀಗೆ ವಿಭಿನ್ನ ನೆಲೆಗಳಲ್ಲಿ ಸಾಮಾಜಿಕ ವೈರುಧ್ಯಗಳು ನಮ್ಮ ನಡುವೆ ಜೀವಂತವಾಗಿವೆ.

ಬದಲಾವಣೆಯ ಭಿನ್ನ ಮಗ್ಗುಲುಗಳು

ಈ ಸಂದಿಗ್ಧ ವಾತಾವರಣದಲ್ಲೇ ನಾವು ಸಾಮಾಜಿಕ ಬದಲಾವಣೆಯ ವಿಭಿನ್ನ ಮಗ್ಗುಲುಗಳನ್ನೂ ಪರಾಮರ್ಶಿಸಬೇಕಿದೆ. ಸಾಮಾಜಿಕ ಬದಲಾವಣೆ ಒಂದು ಭೌತಿಕ ವಸ್ತುನಿಷ್ಠ (Objective) ವಿದ್ಯಮಾನ, ಮೀಸಲಾತಿಯ ಪಾತ್ರ ವ್ಯಕ್ತಿನಿಷ್ಠವಾಗಿ (Subjective) ನೋಡಬೇಕಾದ ಜವಾಬ್ದಾರಿ, ಬಾಧ್ಯತೆ ಮತ್ತು ನೈತಿಕತೆಯ ವಿದ್ಯಮಾನ.  ಇವೆರಡನ್ನೂ ಮುಖಾಮುಖಿಯಾಗಿಸಿದಾಗ, ಮೀಸಲಾತಿಯಿಂದಲೇ ಸಾಮಾಜಿಕ ಬದಲಾವಣೆ ನಿರೀಕ್ಷಿಸುವುದು ಅಪೇಕ್ಷಣೀಯವೇ ? ಮೀಸಲಾತಿಯ ಫಲಾನುಭವಿ ಸಮುದಾಯಗಳು ಸಾಮಾಜಿಕ ಜವಾಬ್ದಾರಿಯ ಜವಾಬ್ದಾರಿಯನ್ನು ಹೊತ್ತಿರಲೇಬೇಕೇ ? ಹೊಣೆಗಾರಿಕೆಯನ್ನು ಯಾವ ಯಾವ ನೆಲೆಗಳಲ್ಲಿ ನಿರ್ವಚಿಸಲು ಸಾಧ್ಯ ? ಬದಲಾವಣೆಯನ್ನು ವ್ಯಕ್ತಿಗತ ದೃಷ್ಟಿಯಿಂದ ನೋಡಬೇಕೋ ಇಡೀ ಸಮುದಾಯದ ದೃಷ್ಟಿಯಿಂದಲೋ ? ಈ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಈ ಎಲ್ಲ ಪ್ರಶ್ನೆಗಳನ್ನೂ ಒಂದೇ ಆವರಣದಲ್ಲಿಟ್ಟು ನೋಡಿದಾಗ ʼಸಾಮಾಜಿಕ ಬದಲಾವಣೆ ʼಯ ಸಕಾರಾತ್ಮಕ ಆಯಾಮಗಳತ್ತ (Positive Dimensions) ಗಮನಹರಿಯುತ್ತದೆ. ತತ್ವಶಾಸ್ತ್ರೀಯ ನೆಲೆಯಲ್ಲಿ ನೋಡಿದಾಗ ʼ ಬದಲಾವಣೆ ʼ (Change) ಎನ್ನುವುದು ʼ ಸುಧಾರಣೆಯ ʼ (Reform) ಮೊದಲ ಸೋಪಾನವಾಗಿ ಕಾಣುತ್ತದೆ. ಈ ಬದಲಾವಣೆಯನ್ನು ಇಡೀ ಸಮಾಜಗಳ ಚೌಕಟ್ಟಿನಲ್ಲಿ ಗುರುತಿಸುವಾಗ, ಸಮಾಜದ ಸದಸ್ಯರ ಬೌದ್ಧಿಕ ಆಲೋಚನೆ, ಚಿಂತನೆಯ ಮಾದರಿ, ಸಮಷ್ಟಿ ಪ್ರಜ್ಞೆ, ಸಮನ್ವಯ ಕಲ್ಪನೆ ಹಾಗೂ ಪರಾನುಭೂತಿ ಇವೆಲ್ಲವೂ ಮುಖ್ಯ ಲಕ್ಷಣಗಳಾಗಿ ಕಾಣುತ್ತವೆ. ಈ ವ್ಯಕ್ತಿ ಲಕ್ಷಣಗಳು ಸಾಮುದಾಯಿಕ ಲಕ್ಷಣವಾಗಿ ಕಾಣುವುದು ಶೈಕ್ಷಣಿಕ ಬೆಳವಣಿಗೆ, ಬೌದ್ಧಿಕ ಪ್ರಸರಣ ಮತ್ತು ಪರಸ್ಪರ ಸಂವಹನಗಳ ಮೂಲಕ.

ಸಂವಿಧಾನದ ಚೌಕಟ್ಟಿನಲ್ಲಿ

ಹಾಗಾಗಿ ಸಾಂವಿಧಾನಿಕ ಮೀಸಲಾತಿಯ ಪಾತ್ರ ಎಂದಾಗ ನಮಗೆ ಬಹಳ ಮುಖ್ಯವಾಗಿ ಕಾಣುವುದು ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆದು ವೈಯುಕ್ತಿಕ ಪ್ರಗತಿ-ಮುನ್ನಡೆ ಸಾಧಿಸುವ ಸಮಾಜದ ಸದಸ್ಯರು. ಈ ಸದಸ್ಯರು ಪಡೆದುಕೊಳ್ಳುವ ವಿಶೇಷ ಸವಲತ್ತುಗಳು ಬಾಧ್ಯತೆಗಳೊಂದಿಗೇ (Liabilities) ಬರುವುದಿಲ್ಲ ಆದರೆ ನೈತಿಕ ನೆಲೆಯಲ್ಲಿ ನೋಡಿದಾಗ, ಸಮಾಜದ ಉಳಿದ ಸದಸ್ಯರಲ್ಲಿ ಅರಿವು ಮೂಡಿಸುವ, ಸಾಮಾಜಿಕ ಪ್ರಜ್ಞೆಯನ್ನು ರೂಢಿಸುವ ಜವಾಬ್ದಾರಿಯೊಂದಿಗೆ ಬರುತ್ತದೆ. ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಸಮಾಜಮುಖಿ ಧೋರಣೆ, ಸಹಾನುಭೂತಿ ಮತ್ತು ಸೌಹಾರ್ದತೆಯ ಭಾವನೆ ಇವೆಲ್ಲವನ್ನೂ ಕಲಿತ-ವಿದ್ಯಾವಂತ-ಉದ್ಯೋಗಸ್ಥ ಜನರೇ ವಂಚಿತ ಜನರಿಗೆ ತಲುಪಿಸಬೇಕಾಗುತ್ತದೆ. ತಾವು ಪಡೆದ ಶೈಕ್ಷಣಿಕ ಅರಿವು ನಷ್ಟವಾಗದಂತೆ, ಭ್ರಷ್ಟವಾಗದಂತೆ ಕಾಪಾಡುವ ನೈತಿಕ ಜವಾಬ್ದಾರಿ ಮೀಸಲಾತಿಯ ಫಲಾನುಭವಿಗಳ ಮೇಲಿರುತ್ತದೆ.

ಇದು ಅನ್ಯ ಜಾತಿಗಳ ಜನರಲ್ಲೂ ಇರಬೇಕಾದುದೇ ಆದರೂ, ಮೀಸಲಾತಿಯ ಸೌಲಭ್ಯ ಪಡೆದವರು ತಮ್ಮ ಸುತ್ತಲಿನ ಸಮಾಜದಲ್ಲಿ ಕಾಣುವ ವಾಸ್ತವಗಳು ಭೀಕರವಾಗಿರುತ್ತವೆ, ಭಿನ್ನವಾಗಿರುತ್ತವೆ. ಈ ವಾಸ್ತವಗಳನ್ನು ಅರಿತು, ಸಮಾಜದ ಉನ್ನತಿಗೆ ಶ್ರಮಿಸುವಾಗ, ತಾವು ಪಡೆದ ಬೌದ್ಧಿಕ ಜ್ಞಾನವನ್ನು ತಳಮಟ್ಟದವರೆಗೂ ವಿಸ್ತರಿಸಿ, ಸಾಮಾನ್ಯ ಜನರಲ್ಲೂ ಜಾಗೃತಿ-ಅರಿವು ಮೂಡಿಸುವ ಪ್ರಯತ್ನ ಮಾಡಬೇಕಾಗುತ್ತದೆ. ತಮ್ಮ ಗತ ಜೀವನದ ಭೀಕರ ಕ್ಷಣಗಳು ಭವಿಷ್ಯದ ಪೀಳಿಗೆಯಲ್ಲಿ ಗೋಚರಿಸಕೂಡದು ಎಂಬ ಪ್ರಜ್ಞೆ ನಮ್ಮೊಳಗಿರಬೇಕಾಗುತ್ತದೆ. ಸಾಮಾಜಿಕ ಬದಲಾವಣೆ ಚುನಾಯಿತ ಸರ್ಕಾರಗಳಿಂದ ಆಗುವುದಿಲ್ಲ ಅಥವಾ ಗ್ರಾಂಥಿಕ ಸಂವಿಧಾನದ ಅನುಸರಣೆಯಿಂದಲೂ ಆಗುವುದಿಲ್ಲ. ಸಾಂವಿಧಾನಿಕ ಆಶಯಗಳನ್ನು ತಳಸಮಾಜದ ಪ್ರತಿ ವ್ಯಕ್ತಿಗೂ ಮನದಟ್ಟಾಗುವಂತೆ ಅರ್ಥೈಸಿ ಮುಟ್ಟಿಸುವುದರಿಂದ ಇದು ಸಾಧ್ಯವಾಗುತ್ತದೆ.

ನಾಗರಿಕ ಜವಾಬ್ದಾರಿಯ ನೆಲೆಯಲ್ಲಿ

ಈ ಕೆಲಸವನ್ನು ಮಾಡಬೇಕಾದವರು ಯಾರು ? ವಾಸ್ತವವಾಗಿ ಇದು ತಮ್ಮನ್ನು ಸ್ವತಃ ಪ್ರಗತಿಶೀಲ ನಾಗರಿಕತೆಯ ಭಾಗ ಎಂದು ಪರಿಭಾವಿಸುವ ಸಮಾಜದ ಪ್ರತಿ ಸದಸ್ಯರ ಕರ್ತವ್ಯ. ಆದರೆ ಮೊದಲೇ ಹೇಳಿದಂತೆ ಭಾರತದಲ್ಲಿ ಸಮಾಜ ಏಕಶಿಲಾ ರೂಪದಲ್ಲಿ (Monolithic form) ಕಾಣುವುದಿಲ್ಲ. ಹಾಗಾಗಿ ವಿಭಿನ್ನ ಸಮಾಜಗಳಲ್ಲಿರುವ ಸದಸ್ಯರು ತಮ್ಮೊಳಗಿನ ವಿದ್ವತ್ತನ್ನು, ಬೌದ್ಧಿಕ ಸಂಪತ್ತನ್ನು ಮತ್ತು ಚಿಕಿತ್ಸಕ ಗುಣಗಳನ್ನು ಅವಲಂಬಿಸುತ್ತಾರೆ. ಈ ಗುಣಗಳನ್ನು ಸಾಂವಿಧಾನಿಕ ಮೀಸಲಾತಿಯ ಮುಖಾಂತರ ಮತ್ತು ಸ್ವಂತ ಪರಿಶ್ರಮದಿಂದ ಸಂಪಾದಿಸಿದ ಸಮಾಜದ ಒಂದು ವರ್ಗ, ಇತರ ವರ್ಗಗಳೊಡನೆ ನಿರಂತರ ಸಂಪರ್ಕ ಸಾಧಿಸಿ, ಮಾತು, ಚರ್ಚೆ, ಸಂವಾದ ಮತ್ತು ಸಾರ್ವಜನಿಕ ಸಂಕಥನಗಳ ಮೂಲಕ ʼ ಸಾಮಾಜಿಕ ಪ್ರಜ್ಞೆ ʼ (Social Consciousness) ಮೂಡಿಸಬೇಕಾಗುತ್ತದೆ.

ಬದಲಾವಣೆ ಏಕಾಏಕಿ ಸಂಭವಿಸುವುದಿಲ್ಲ. ತಳಮಟ್ಟದ ಸಮಾಜದಲ್ಲಿ ಅನಕ್ಷರಸ್ಥರು ಬದಲಾವಣೆಯ ಆಲೋಚನೆಗೇ ತೆರೆದುಕೊಳ್ಳದ ಹಾಗೆ ಮೂಢ ನಂಬಿಕೆಗಳು, ಮೌಢ್ಯಾಚರಣೆಗಳು, ಧಾರ್ಮಿಕ ಅಂಧ ವಿಶ್ವಾಸ ಮತ್ತು ಸಾಂಸ್ಕೃತಿಕ ನಿರ್ಬಂಧಗಳನ್ನು ಮೇಲ್ಜಾತಿ ಸಮಾಜಗಳು ಸೃಷ್ಟಿಸುತ್ತಲೇ ಇರುತ್ತವೆ. ವರ್ತಮಾನದ ಭಾರತದಲ್ಲಿ ಇವೆಲ್ಲವೂ ಸಾಂಸ್ಥೀಕರಣಕ್ಕೊಳಗಾಗಿವೆ (Institutionalised) . ಇದನ್ನು ಬ್ರಾಹ್ಮಣೀಕರಣ, ಸಂಸ್ಕೃತೀಕರಣ (Sanskritisation) ಅಥವಾ ವೈದಿಕೀಕರಣ ಎಂದು ವಿಮರ್ಶಾತ್ಮಕ ನೋಡುವುದಕ್ಕಿಂತಲೂ ಹೆಚ್ಚಿನ ಜವಾಬ್ದಾರಿ ಮೀಸಲಾತಿಯ ಫಲಾನುಭವಿಗಳಿಗೆ ಇದೆ. ವ್ಯಕ್ತಿಯನ್ನು ಸಮಾಜದಿಂದ ವಿಮುಖಗೊಳಿಸುವ ಇಂತಹ ಬೌದ್ಧಿಕ ಚಿಂತನೆಗಳನ್ನು ಬೇರುಮಟ್ಟದಿಂದಲೇ ಉತ್ಪಾಟನೆ ಮಾಡುವುದು ಸಾಮಾಜಿಕ ಬದಲಾವಣೆಯ ಮೊದಲ ಸೋಪಾನವಾಗುತ್ತದೆ.

ಚರಿತ್ರೆ ವರ್ತಮಾನದ ಅನುಸಂಧಾನ

ಸಮಕಾಲೀನ ಸಮಾಜ ಸುಧಾರಕರು ಇಲ್ಲದಿರುವುದರಿಂದ ನಾವು ಮತ್ತೆಮತ್ತೆ ಚಾರಿತ್ರಿಕ ದಾರ್ಶನಿಕರಲ್ಲೇ ಈ ಹೊಸ ಆಲೋಚನಾ ವಿಧಾನಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ನಮ್ಮ ಸಂಸ್ಕೃತಿಯಷ್ಟೇ ವೈವಿಧ್ಯಮಯವಾಗಿರುವ ವರ್ತಮಾನದ ಸಾಮಾಜಿಕ ಬದುಕಿಗೆ ಈ ದಾರ್ಶನಿಕರ ಚಿಂತನೆಗಳು ಮನದಟ್ಟಾಗಬೇಕಾದರೆ ಇವರ ನಡುವೆ ನಾವೇ ಕಟ್ಟಿರುವ ಗೋಡೆಗಳನ್ನು ಮೊದಲು ಕೆಡವಬೇಕಾಗುತ್ತದೆ. ಇದರ ಜೊತೆಗೇ ನಮ್ಮ ಈ ಹಾದಿಗೆ ಅಡ್ಡಿಯಾಗಿರುವ ಎಲ್ಲ ರೀತಿಯ ಕರ್ಮಠ ಧೋರಣೆಗಳನ್ನು, ಅಂಧ ವಿಶ್ವಾಸವನ್ನು ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ಹಂತಹಂತವಾಗಿ ಕೆಡವುತ್ತಲೇ ಬರಬೇಕಾಗುತ್ತದೆ. ಸಾಮಾಜಿಕ ಬದಲಾವಣೆಯಲ್ಲಿ ಮೀಸಲಾತಿಯ ಪಾತ್ರ ಎಂದು ಹೇಳುವಾಗ, ಈ ಕೆಡವುವ ಕ್ರಿಯೆಯಲ್ಲಿ ಮೀಸಲಾತಿಯ ಫಲಾನುಭವಿಗಳೇ ಪ್ರಧಾನ ಕಾಲಾಳುಗಳಾಗಿ ಕ್ರಿಯಾಶೀಲರಾಗಬೇಕಾಗುತ್ತದೆ. ಈ ನೈತಿಕ ಜವಾಬ್ದಾರಿಗೆ ವಿಮುಖರಾಗುವ ವಿದ್ಯಾವಂತ-ಅನುಕೂಲಸ್ಥ ವ್ಯಕ್ತಿಗಳು ತಮ್ಮ ಸಾಂವಿಧಾನಿಕ ಕರ್ತವ್ಯಕ್ಕೂ ವಿಮುಖರಾಗುತ್ತಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ.

ಹೀಗೆ ವಿಮುಖವಾಗುವ, ನಿರ್ಲಿಪ್ತರಾಗಿ ಹಿತವಲಯದಲ್ಲಿ ಬದುಕು ಸವೆಸಲಿಚ್ಚಿಸುವ, ಸಾಮಾಜಿಕವಾಗಿ ನಿಷ್ಕ್ರಿಯವಾಗುವ, ಸಾಂಸ್ಕೃತಿಕವಾಗಿ ಮೇಲರಿಮೆಯನ್ನು ರೂಢಿಸಿಕೊಳ್ಳುವ ಮುಂದುವರೆದ ವರ್ಗಗಳೇ (Advanced Classes) ಅವಕಾಶವಂಚಿತ ಶೋಷಿತ ತಳಸಮುದಾಯಗಳ ಬೌದ್ಧಿಕ ಉನ್ನತಿ ಮತ್ತು ಭೌತಿಕ ಮುನ್ನಡೆಗೆ ತಡೆಗೋಡೆಯಾಗಿ  (Barricade) ಪರಿಣಮಿಸುತ್ತವೆ. ಈ ವರ್ಗಗಳಿಗೆ ಸಂವಿಧಾನ ಅಥವಾ ಅಂಬೇಡ್ಕರ್‌ ಮತ್ತಿತರರ ಗ್ರಾಂಥಿಕ ಉಲ್ಲೇಖಗಳೇ ಸಾಮಾಜಿಕ ಬದಲಾವಣೆಯ ರಥಚಕ್ರಗಳ ಹಾಗೆ ಕಾಣುತ್ತದೆ. ಸಂವಿಧಾನದ ಓದು, ಪಠಣ, ಅಂಬೇಡ್ಕರ್‌ ಅವರ ಆರಾಧನೆ ಇವೆಲ್ಲವೂ ಆದರಣೀಯವಾಗಿ ಕಾಣುವುದಾದರೂ, ತಳಮಟ್ಟದ ಸಮಾಜದ ನಿತ್ಯ ಜೀವನದಲ್ಲಿ ಸಾಮಾನ್ಯ ಜನರನ್ನು ಪರಿಣಾಮಕಾರಿಯಾಗಿ ತಲುಪಲು ಇದಾವುದೂ ನೆರವಾಗುವುದಿಲ್ಲ.

ಅಲ್ಲಿ ಬೇಕಾಗುವುದು ವೈಯುಕ್ತಿಕ ಆಸಕ್ತಿ, ವ್ಯಕ್ತಿಗತ ಪರಿಶ್ರಮ ಮತ್ತು ಸಂಘಟನಾತ್ಮಕ ಕ್ರಿಯಾಶೀಲತೆ. ಈ ಮೂರೂ ಗುಣಲಕ್ಷಣಗಳನ್ನು ರೂಢಿಸಿಕೊಂಡ ಸಾಂಸ್ಥಿಕ ಚೌಕಟ್ಟಿನಲ್ಲಿ (Institutional Framework) ಸಾಮಾಜಿಕ ಅರಿವು-ಪ್ರಜ್ಞೆಯನ್ನು ಮೂಡಿಸುವುದು ಮುಖ್ಯವಾಗುತ್ತದೆ. ಕರ್ನಾಟಕದ ಐದು ದಶಕಗಳ ದಲಿತ ಚಳುವಳಿಗಳನ್ನು ಗಮನಿಸಿದಾಗ, ನೂರಾರು ಸಂಘಟನೆಗಳು, ವ್ಯಕ್ತಿಗಳು ಮುಖಾಮುಖಿಯಾದರೂ, ಯಾವುದೇ ಸಂದರ್ಭದಲ್ಲಿ ಸಂಘಟನೆಗಳು “ ತಾಲ್ಲೂಕಿಗೊಂದು ಜಿಲ್ಲೆಗೊಂದು ಅಂಬೇಡ್ಕರ್‌ ಅಧ್ಯಯನ ಕೇಂದ್ರ ” ಸ್ಥಾಪಿಸಲು ಸರ್ಕಾರವನ್ನು ಆಗ್ರಹಿಸುವುದು ಕಾಣುವುದಿಲ್ಲ. ಇದು ಸಾಧ್ಯವಾಗಿದ್ದಿದ್ದರೆ, ಸಾಮಾಜಿಕ ಅರಿವು ಮೂಡಿಸುವ ಕ್ರಿಯೆಯನ್ನು ಸಾಮೂಹಿಕ ಜವಾಬ್ದಾರಿಯನ್ನಾಗಿ ಮಾಡಬಹುದಿತ್ತು. ಆಗ ಸಾಮಾಜಿಕ ಬದಲಾವಣೆ ಸಮಾಜದ ಜವಾಬ್ದಾರಿಯಾಗಿ ಕಾಣುವಂತೆ ಮಾಡುವ ಸಾಧ್ಯತೆಗಳಿದ್ದವು.

ಫಲಾನುಭವಿ ಸಮಾಜದ ಜವಾಬ್ದಾರಿ

ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಪಡೆದು ಈಗ ತಮ್ಮದೇ ಆದ ವರ್ಗವನ್ನು ಸೃಷ್ಟಿಸಿಕೊಂಡಿರುವ ತಳಸಮಾಜದ ಸದಸ್ಯರು ಈ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದಿತ್ತು/ಮಾಡಬೇಕಿದೆ. ಎಲ್ಲ ಔದ್ಯೋಗಿಕ ವಲಯಗಳಲ್ಲೂ ಈ ಮುಂದುವರೆದ ವರ್ಗಗಳು ಗೃಹ ನಿರ್ಮಾಣ ಸೊಸೈಟಿ, ಕಾರ್ಮಿಕ ಸಂಘ, ಅಂಬೇಡ್ಕರ್‌ ಹೆಸರಿನ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಆಚರಣೆಗಳಿಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು, ಸಾಮಾಜಿಕ ಬದಲಾವಣೆಗೆ ಕೊಟ್ಟಿದ್ದಲ್ಲಿ ವರ್ತಮಾನದ ದಲಿತ ಯುವ ಜನಾಂಗವನ್ನು ಭಿನ್ನ ದಿಸೆಯಲ್ಲಿ ಕೊಂಡೊಯ್ಯಬಹುದಿತ್ತು . ಈ ವರ್ಗಗಳಲ್ಲಿ ಮೂಡಿದ ಮೇಲ್ವರ್ಗ ಪ್ರಜ್ಞೆ (Upper class Consciousness) ಮತ್ತು ಹಿತವಲಯದ ಸ್ವ ಹಿತಾಸಕ್ತಿಗಳು ಔದ್ಯೋಗಿಕ ಮೀಸಲಾತಿಯ ಔದಾತ್ಯವನ್ನೇ ಅಪಭ್ರಂಶಗೊಳಿಸಿರುವುದನ್ನು ನಾವು ಪ್ರತ್ಯಕ್ಷವಾಗಿ ನೋಡುತ್ತಿದ್ದೇವೆ. ವಿಶ್ವವಿದ್ಯಾಲಯಗಳ ಬೌದ್ಧಿಕ ವರ್ಗಗಳಿಗೂ ಇದನ್ನು ಅನ್ವಯಿಸಬಹುದು. ಇದರಲ್ಲಿ ಕೆಲವು ವ್ಯಕ್ತಿಗತ ಅಪವಾದಗಳು (Individual Exceptions) ಖಂಡಿತವಾಗಿಯೂ ಇವೆ ಆದರೆ ಒಟ್ಟಾರೆಯಾಗಿ ನೋಡಿದಾಗ ದೃಷ್ಟಿ ಮಬ್ಬಾಗುತ್ತದೆ.

ಮೀಸಲಾತಿಯ ಫಲಾನುಭವಿಗಳಾಗಲೀ, ದೇಶದ ಅಭಿವೃದ್ಧಿಯ ಫಲ ಪಡೆದವರಾಗಲೀ ಯುವ ಜನಾಂಗದೊಡನೆ ಸ್ಪಂದಿಸುವಾಗ ಹಂಚಬೇಕಿರುವುದು ಅನುಭವಗಳನ್ನು ಮತ್ತು ಅಭಿಪ್ರಾಯಗಳನ್ನೇ ಹೊರತು, ಪಡೆದುಕೊಂಡಿರುವ ಅಥವಾ ಸಂಗ್ರಹಿಸಿರುವ ಜ್ಞಾನವನ್ನು ಅಲ್ಲ . ಅನುಭಾವಿಕ ನೆಲೆಯಲ್ಲಿ ಮೂಡುವ ಅಭಿಪ್ರಾಯ/ಅಭಿವ್ಯಕ್ತಿಗಳನ್ನು ಭವಿಷ್ಯದ ಸಮಾಜಕ್ಕೆ ತಕ್ಕ ಹಾಗೆ ಹೇಗೆ ದಾಟಿಸುವುದು ಎನ್ನುವುದು ಹಿರಿಯ ಪೀಳಿಗೆಯ ಜಿಜ್ಞಾಸೆಯಾಗಬೇಕಿದೆ. ಇದಕ್ಕೆ ವ್ಯತಿರಿಕ್ತವಾಗಿ ಜ್ಞಾನದ ಹಂಚಿಕೆಯಲ್ಲಿ ತೊಡಗಿದಾಗ, ಯುವ ಮನಸ್ಸುಗಳ ದೃಷ್ಟಿಯಲ್ಲಿ ಅದು ಏಕತಾನತೆಯ ಬೋಧನೆಯಾಗಿ (Monotonous Lecture) ಕಾಣುತ್ತದೆ. ಇಲ್ಲಿ ಪ್ರತಿಕ್ರಿಯಾತ್ಮಕ ಸಂವಾದ ಇಲ್ಲದೆ ಹೋದರೆ, ಏಕಮುಖಿ ಬೋಧನೆ ಯುವ ಜನಾಂಗದ ಅರಿವಿನ ವಿಕಾಸಕ್ಕೆ ದೊಡ್ಡ ತಡೆಗೋಡೆಯಾಗಿಬಿಡುತ್ತದೆ.

ಅಂತಿಮ ಗುರಿ ಸಾಧನೆಯೆಡೆಗೆ

ಸಾಮಾಜಿಕ ಬದಲಾವಣೆಯಲ್ಲಿ ಮೀಸಲಾತಿಯ ಪರಿಣಾಮವನ್ನು ವಿಶ್ಲೇಷಿಸುವಾಗ ಜನಸಂಖ್ಯಾಧಾರಿತ ಅಂಕಿಸಂಖ್ಯೆಗಳಿಗಿಂತಲೂ ಮುಖ್ಯವಾಗುವುದು ಈ ಅರಿವಿನ ವಿಸ್ತಾರದ ವಿಭಿನ್ನ ಆಯಾಮಗಳು. ಶಿಕ್ಷಣ ಮತ್ತು ಉದ್ಯೋಗ ವಲಯಗಳಲ್ಲಿ ಭವಿಷ್ಯದ ತಲೆಮಾರುಗಳಿಗೆ ಅವಕಾಶಗಳು ಕುಸಿಯುತ್ತಲೇ ಹೋಗಿ ಒಂದು ಹಂತದಲ್ಲಿ ಇಲ್ಲವಾಗುವ ಸಾಧ್ಯತೆಗಳೂ ಇವೆ.  ಹಾಗೇನಾದರೂ ಆದರೆ  ತಳಸಮುದಾಯದ ಸಮಾಜಗಳಲ್ಲಿ ಸೃಷ್ಟಿಯಾಗಬಹುದಾದ ತಲ್ಲಣಗಳನ್ನು ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ ಭಾರತೀಯ ಸಮಾಜ ತನ್ನ ಜಾತಿ ಶ್ರೇಷ್ಠತೆಯ ಸಂಕೋಲೆಗಳಿಂದ ಆಗಲೂ ವಿಮೋಚನೆ ಪಡೆದಿರುವುದಿಲ್ಲ. ಈ ಸಂಭಾವ್ಯ ಸನ್ನಿವೇಶವನ್ನು ಮನಗಂಡು, ಸಾಮಾಜಿಕ ಬದಲಾವಣೆಗಳ ವಿಭಿನ್ನ ಮಗ್ಗುಲುಗಳನ್ನು ಚರ್ಚೆಗೊಳಪಡಿಸಬೇಕಿದೆ.

ಯಾವ ದಿಕ್ಕಿನಲ್ಲಿ ಬದಲಾವಣೆಯಾದರೆ ವರ್ತಮಾನದ ಹಾಗೂ ಭವಿಷ್ಯದ ಯುವ ಜನಾಂಗ ಅಂಬೇಡ್ಕರ್‌ ಕನಸಿನ ಸಮ ಸಮಾಜವನ್ನು ಕಾಣಲು ಸಾಧ್ಯ ? ಇದು ಇಡೀ ಸಮಾಜವನ್ನು ಕಾಡಬೇಕಾದ ಪ್ರಶ್ನೆ ಆದರೆ ಮೀಸಲಾತಿಯ ಫಲಾನುಭವಿ ಸಮಾಜಗಳು ಈ ಪ್ರಶ್ನೆಯನ್ನು ಇನ್ನೂ ಗಂಭೀರವಾಗಿ ಪರಾಮರ್ಶಿಸಬೇಕಿದೆ. ಏಕೆಂದರೆ ಈ ಸಮಾಜಗಳಲ್ಲಿ ಅಂಬೇಡ್ಕರ್‌, ಫುಲೆ, ಪೆರಿಯಾರ್‌, ಕರ್ಮಠರಿಗೆ ಬೇಡವಾದರೂ , ಗಾಂಧಿ ಮತ್ತು ಮಾರ್ಕ್ಸ್‌ ಸದಾ ಜೀವಂತವಾಗಿರುತ್ತಾರೆ. ಇವರ ವಿಚಾರಧಾರೆಗಳೇ ಸಮಾಜದ ಸುಧಾರಣೆಯ ಬೌದ್ಧಿಕ ಪರಿಕರಗಳಾಗಿರುತ್ತವೆ. ಈ ಪರಿಕರಗಳು ಈಗಲೂ ನಮ್ಮ ನಡುವೆ ಇದೆ ಆದರೆ ಅವುಗಳನ್ನು ಬಳಸುವ ಮಾರ್ಗಗಳು ಕವಲುಗಳಾಗಿ ಒಡೆದುಹೋಗಿವೆ. ಈ ಕವಲು ದಾರಿಗಳನ್ನು ಸಮಾನಾಂತರವಾಗಲು ಬಿಡದೆ ಗುರಿ ತಲುಪುವ ಮುನ್ನ ಒಂದಾಗಿಸುವುದು  ನಮ್ಮ ಮುಂದಿನ ದೊಡ್ಡ ಜವಾಬ್ದಾರಿಯಾಗಿದೆ.

ಈ ಜವಾಬ್ದಾರಿಯನ್ನು ಅರಿತರೆ ʼ ಸಾಮಾಜಿಕ ಬದಲಾವಣೆ ʼ ಸಾಧ್ಯವಾದೀತು. ಸುಧಾರಣೆಯ ಗುರಿ ಬಹು ದೂರ ಇದೆ.

-೦-೦-೦-೦-೦-

Previous Post

ತ್ರಿವಳಿ ಮಖ್ಯಮಂತ್ರಿಗಳಿಂದ ತುಂಗಭದ್ರಾ ಜಲಾಶಯದ ಹೊಸ ಗೇಟ್‌ಗಳ ಉದ್ಘಾಟನೆ

Next Post

ಆರ್‌ಎಸ್‌ಎಸ್‌ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ: ಸಚಿವ ಪ್ರಿಯಾಂಕ್‌ ಖರ್ಗೆ

Related Posts

ಅನುಮತಿಯಿಲ್ಲದೆ ಖಾಸಗಿ ಫೋಟೋ-ವಿಡಿಯೋ ಹಂಚಿದರೆ ಜೈಲು ಗ್ಯಾರಂಟಿ!ಪೊಲೀಸರಿಗೆ ಹೊಸ ಮಾರ್ಗಸೂಚಿ
Top Story

ಅನುಮತಿಯಿಲ್ಲದೆ ಖಾಸಗಿ ಫೋಟೋ-ವಿಡಿಯೋ ಹಂಚಿದರೆ ಜೈಲು ಗ್ಯಾರಂಟಿ!ಪೊಲೀಸರಿಗೆ ಹೊಸ ಮಾರ್ಗಸೂಚಿ

by ಪ್ರತಿಧ್ವನಿ
June 25, 2026
0

ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ (Revenge Pornography), ಸೆಕ್ಸ್‌ಟಾರ್ಷನ್ (Sextortion) ಹಾಗೂ ಖಾಸಗಿ ವಿಡಿಯೋಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡುವ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವಂತೆ ಕರ್ನಾಟಕ ಪೊಲೀಸ್ ಇಲಾಖೆ...

Read moreDetails
Breaking: ಬೆಂಗಳೂರಿನಲ್ಲಿ ದರ್ಶನ್ ಪುತ್ರನ ಕಾರು ಅಪಘಾತ; ಸಾರ್ವಜನಿಕರ ಆಕ್ರೋಶ

ಮಳೆ ಆರ್ಭಟಕ್ಕೆ ಸಜ್ಜಾದ ಸರ್ಕಾರ; ಜಿಲ್ಲಾವಾರು ಸಚಿವರ ನೇಮಕ: ಯಾರಿಗೆ ಯಾವ್ಯಾವ ಹೊಣೆ ?

June 25, 2026
Breaking: ಬೆಂಗಳೂರಿನಲ್ಲಿ ದರ್ಶನ್ ಪುತ್ರನ ಕಾರು ಅಪಘಾತ; ಸಾರ್ವಜನಿಕರ ಆಕ್ರೋಶ

Breaking: ಬೆಂಗಳೂರಿನಲ್ಲಿ ದರ್ಶನ್ ಪುತ್ರನ ಕಾರು ಅಪಘಾತ; ಸಾರ್ವಜನಿಕರ ಆಕ್ರೋಶ

June 25, 2026
ಕೋಟಿ ಕೋಟಿ ಹಣ, ಅಪಾರ ಚಿನ್ನಾಭರಣ ಸೀಜ್ : ಅಬಕಾರಿ ಆಯುಕ್ತ ಮನಿ ಮಂಜುನಾಥ್‌ ಬಳಿ ಇಡಿಗೆ ಸಿಕ್ಕಿದ್ಧೇನು..?

ಕೋಟಿ ಕೋಟಿ ಹಣ, ಅಪಾರ ಚಿನ್ನಾಭರಣ ಸೀಜ್ : ಅಬಕಾರಿ ಆಯುಕ್ತ ಮನಿ ಮಂಜುನಾಥ್‌ ಬಳಿ ಇಡಿಗೆ ಸಿಕ್ಕಿದ್ಧೇನು..?

June 25, 2026
“ಕಾಂಗ್ರೆಸ್ ಕಿಡಿಗೇಡಿಗಳು ಪೋಸ್ಟರ್ ಚಾಳಿ ಬಿಡದಿದ್ದರೆ ರಾಹುಲ್ ಗಾಂಧಿ ಮನೆಗೆ ಪೋಸ್ಟರ್ ಅಂಟಿಸುತ್ತೇವೆ”

“ಕಾಂಗ್ರೆಸ್ ಕಿಡಿಗೇಡಿಗಳು ಪೋಸ್ಟರ್ ಚಾಳಿ ಬಿಡದಿದ್ದರೆ ರಾಹುಲ್ ಗಾಂಧಿ ಮನೆಗೆ ಪೋಸ್ಟರ್ ಅಂಟಿಸುತ್ತೇವೆ”

June 25, 2026
Next Post
ಆರ್‌ಎಸ್‌ಎಸ್‌ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ: ಸಚಿವ ಪ್ರಿಯಾಂಕ್‌ ಖರ್ಗೆ

ಆರ್‌ಎಸ್‌ಎಸ್‌ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ: ಸಚಿವ ಪ್ರಿಯಾಂಕ್‌ ಖರ್ಗೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada