ಕೊಪ್ಪಳ: ಮುನಿರಾಬಾದ್‌ನ ಐತಿಹಾಸಿಕ ತುಂಗಭದ್ರಾ ಜಲಾಶಯದಲ್ಲಿ ನೂತನ 18, 19, 20 ಮತ್ತು 21ನೇ ಕ್ರಸ್ಟ್ ಗೇಟ್‌ಗಳನ್ನು ಇಂದು ಲೋಕಾರ್ಪಣೆ ಮಾಡಲಾಯಿತು.

ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಜಂಟಿಯಾಗಿ ಕ್ರೆಸ್ಟ್ ಗೇಟ್‌ಗಳನ್ನು ಉದ್ಘಾಟಿಸಿದರು. ಈ ವೇಳೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಕೂಡ ಉಪಸ್ಥಿತರಿದ್ದರು.

ನೂತನ ಗೇಟ್‌ಗಳ ಉದ್ಘಾಟನೆಯನ್ನು ಜಂಟಿಯಾಗಿ ನೆರವೇರಿಸಿದ ಗಣ್ಯರು, ಗೇಟ್‌ಗಳ ಕಾರ್ಯವೈಖರಿಯನ್ನು ವೀಕ್ಷಿಸಿದರು. ಈ ವೇಳೆ ಜಲಾಶಯದ ಅಧಿಕಾರಿಗಳು ಗೇಟ್‌ಗಳ ತಾಂತ್ರಿಕ ಮಾಹಿತಿಯನ್ನು ವಿವರಿಸಿದರು. ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆಯಿಂದ ಜಲಾಶಯದ ನೀರು ನಿರ್ವಹಣಾ ಸಾಮರ್ಥ್ಯ ಹೆಚ್ಚಲಿದ್ದು, ಕೃಷಿ ಮತ್ತು ಕುಡಿಯುವ ನೀರಿನ ಪೂರೈಕೆಗೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಘಾಟನೆಗೂ ಮುನ್ನ ಮುನಿರಾಬಾದ್ ಐಆರ್‌ಬಿ ಅತಿಥಿ ಗೃಹದಲ್ಲಿ ಮೂರು ರಾಜ್ಯಗಳ ಸಿಎಂಗಳ ಸಭೆ ನಡೆದಿದ್ದು, ತುಂಗಭದ್ರಾ ಜಲಾಶಯದಲ್ಲಿ ಸುಮಾರು 36-38 ಟಿಎಂಸಿ ಹೂಳು ತುಂಬಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಇನ್ನು ಜಲಾಶಯದ ಸುಸ್ಥಿರತೆ ಹಾಗೂ ಸಮಾನಾಂತರ ಜಲಾಶಯ ನಿರ್ಮಾಣದ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.






