ಬೆಂಗಳೂರು: ಬಾಕಿ ಇರುವ ಸಂಚಾರ ಉಲ್ಲಂಘನೆ ಇ-ಚಲನ್ ದಂಡಗಳ ಮೇಲೆ ಕರ್ನಾಟಕ ಸರ್ಕಾರ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸಿದ್ದು, ಜೂನ್ 21ರಿಂದ ಜುಲೈ 10ರವರೆಗೆ ವಾಹನ ಸವಾರರಿಗೆ ಈ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ ಖರ್ಗೆ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ ಜಾಗೃತಿ ಮೂಡಿಸುತ್ತಿರುವ ಗೃಹ ಸಚಿವರೇ ಸ್ವತಃ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸಚಿವರ ಅಧಿಕೃತ ವಾಹನ ಎಂದು ಹೇಳಲಾದ KA42 GA 0099 ಸಂಖ್ಯೆಯ ಕಾರಿನ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇವೆ ಎಂದು ಬಿಜೆಪಿ ಆರೋಪಿಸಿದೆ. ವಾಹನವು ನಿಗದಿತ ವೇಗ ಮೀರಿಸಿ ಚಲಿಸಿದ್ದು ಹಾಗೂ ಸೀಟ್‌ಬೆಲ್ಟ್ ಧರಿಸದೇ ಸಂಚರಿಸಿರುವುದು ಕ್ಯಾಮೆರಾಗಳಲ್ಲಿ ದಾಖಲಾಗಿದೆ ಎಂದು ವಿರುದ್ಧ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ.

ಈ ಬಗ್ಗೆ ಬಿಜೆಪಿ ತನ್ನ ಸಾಮಾಜಿಕ ಜಾಲತಾಣ ಪೋಸ್ಟ್ ಮಾಡಿದ್ದು, ʼಸಂಚಾರ ನಿಯಮಗಳು ಎಲ್ಲರ ಜೀವನಾಡಿ ಎಂಬ ನಿಮ್ಮ ಮಾತನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ ಪ್ರಿಯಾಂಕ್ ಖರ್ಗೆ ಅವರೇ! ಆದರೆ… ಸೀಟ್‌ಬೆಲ್ಟ್ ಧರಿಸುವುದು ಮತ್ತು ವೇಗದ ಮಿತಿ ನಿಯಮಗಳು ನಿಮಗೆ ಅನ್ವಯಿಸುವುದಿಲ್ಲವೇ? ನಿಮ್ಮ KA42 GA 0099 ವಾಹನವು ಅತಿ ವೇಗ ಹಾಗೂ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದೆ. ಒಟ್ಟು ₹2,500 ಮೊತ್ತದ 4 ಚಲನ್‌ಗಳು ಬಾಕಿ ಉಳಿದಿವೆ, ಈ 50% ರಿಯಾಯಿತಿಯನ್ನು ಪಡೆದುಕೊಳ್ಳಲು ಮತ್ತು ನಿಮ್ಮ ಬಾಕಿಗಳನ್ನು ಆದಷ್ಟು ಬೇಗ ಪಾವತಿಸಲು ನಾವು ಸೂಚಿಸುತ್ತೇವೆ ಎಂದು ಲೇವಡಿ ಮಾಡಿದೆ. ಸದ್ಯ ಬಿಜೆಪಿಯ ಈ ಆರೋಪಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.







