ಬೆಂಗಳೂರು: ನಟಿ ಕೃಷಿ ತಾಪಂಡ ಅವರ ಗೆಳೆಯ ವೈಶಾಕ್ ರಾಜರಾಜೇಶ್ವರಿ ನಗರದ ನಟಿಯ ನಿವಾಸದಲ್ಲೇ ಆತ್ಮ** ಮಾಡಿಕೊಂಡಿದ್ದಾರೆ. ಉದ್ಯಮಿಗೆ ಬೆದರಿಕೆ ಪತ್ರ ಕಳುಹಿಸಿದ ಪ್ರಕರಣದಲ್ಲಿ ಜೈಲು ಸೇರಿದ್ದ ವೈಶಾಕ್ ಜಾಮೀನು ಪಡೆದು ಹೊರ ಬಂದ ಬಳಿಕ ಮಾನಸಿಕ ಖಿನ್ನತೆಗೆ ಜಾರಿದ್ದರು ಎನ್ನಲಾಗಿದೆ.

ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿರುವ ವೈಶಾಕ್ ನಿನ್ನೆ ಕೃಷಿ ತಾಪಂಡ ಇಲ್ಲದ ವೇಳೆ ಅವರ ನಿವಾಸದಲ್ಲೇ ತಂಗಿದ್ದರು. ಈ ವೇಳೆ ಕೃಷಿ ತಪಂಡಾಗೆ ಮೇಸೇಜ್ ಮಾಡಿದ್ದ ವೈಶಾಕ್, ನನಗೆ ಜೀವನವೇ ಸಾಕಾಗಿದೆ..ನನಗೆ ಬದುಕೋಕೆ ಇಷ್ಟ ಇಲ್ಲ ಎಂದು ಹೇಳಿಕೊಂಡಿದ್ದರು. ಈ ವೇಳೆ ಯಲಹಂಕದಲ್ಲಿದ್ದ ಕೃಷಿ, ಆ ರೀತಿ ಎಲ್ಲಾ ಯೋಚಿಸಬೇಡ. ನಾನು ಬರುತ್ತೇನೆ. ಇಬ್ಬರೂ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿ ಬರೋಣ ಮನಸ್ಸು ಹಗುರಾಗುತ್ತದೆ ಎಂದು ಧೈರ್ಯ ಹೇಳಿದ್ದರು ಎನ್ನಲಾಗಿದೆ.

ಈ ನಡುವೆ ಕೃಷಿ ಈ ವಿಷಯವನ್ನು ಕುಟುಂಬಸ್ಥರ ಗಮನಕ್ಕೆ ಕೂಡ ತಂದಿದ್ದು, ಮನೆಗೆ ಬರುವಷ್ಟರಲ್ಲಿ ವೈಶಾಕ್ ಆತ್ಮ**ಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ವೈಶಾಕ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪ್ರಕರಣದ ಕುರಿತು ರಾಜರಾಜೇಶ್ವರಿ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮನೆಯಲ್ಲಿ ಇಲ್ಲಿಯವರೆಗೂ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎನ್ನುವುದು ಪ್ರಾಥಮಿಕ ಮಾಹಿತಿಯಾಗಿದೆ.






