ಸಿನಿಮಾ ನಟ, ನಟಿಯರ ಬಗ್ಗೆ ಆಗಾಗ ಒಂದಷ್ಟು ವದಂತಿಗಳು ಬರೋದು ಸಹಜ. ಅಷ್ಟೇ ಅಲ್ಲ, ಕೆಲವರ ಬಗ್ಗೆಯಂತೂ ತುಂಬಾ ಅಸಹ್ಯವಾಗಿ ಬಿಂಬಿಸಲಾಗುತ್ತೆ. ಇದು ಬಿಡಿ, ಚೆನ್ನಾಗಿದ್ದವರ ಬಗ್ಗೆಯೂ ನಿಧನ ಅನ್ನುವ ಸುದ್ದಿ ಹರಿದಾಡಿ ಸಾಕಷ್ಟು ಗೊಂದಲ ಉಂಟುಮಾಡಿದ ಉದಾಹರಣೆಗಳು ಸಾಕಷ್ಟಿವೆ. ಆ ಸಾಲಿಗೆ ಸೇರಿದ ಸುದ್ದಿ ಅಂದರೆ ಅದು ನಟ ದೊಡ್ಡಣ್ಣ ಅವರದು.

ಹೌದು, ದೊಡ್ಡಣ್ಣ ಅವರ ಬಗ್ಗೆ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅವರ ಸಾವಿನ ಸುದ್ದಿಯೊಂದು ಓಡಾಡಿತ್ತು. ಎಲ್ಲರೂ ಆತಂಕದಲ್ಲಿದ್ದರು. ಆ ಸುದ್ದಿ ನಿಜಾನಾ ಅನ್ನೋ ಪ್ರಶ್ನೆ ಮಾಡಿದ್ದರು. ಅದರೆ, ಅದು ಸುಳ್ಳು ಅಂತ ಗೊತ್ತಾಯ್ತು. ಜೊತೆಗೆ ಸ್ವತಃ ದೊಡ್ಡಣ್ಣ ಅವರೇ ಸ್ಪಷ್ಟನೆ ಕೊಟ್ಟಿದ್ದರು. ಅದಾದ ಮೇಲೆ ಶುಕ್ರವಾರ ಬೆಳಗ್ಗೆ ಮತ್ತೊಂದು ಅದೇ ರೀತಿಯ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಾರಿಯೂ ದೊಡ್ಡಣ್ಣ ಮತ್ತದೇ ಸ್ಪಷ್ಟನೆ ಕೊಟ್ಟಿದ್ದರು.

ಸಾವಿನ ಸುದ್ದಿ ವದಂತಿ ಬೆನ್ನಲ್ಲೇ ಕಂಟಕ ಪರಿಹಾರಕ್ಕಾಗಿ ನಟ ದೊಡ್ಡಣ್ಣ ಅವರು ಆಂಜನೇಯ ದೇವರ ಮೊರೆ ಹೋಗಿದ್ದಾರೆ. ಕಂಟಕ ಪರಿಹಾರಕ್ಕಾಗಿ ದೊಡ್ಡಣ್ಣ ಕುಟುಂಬ ಸಮೇತ ಮಹಾಲಕ್ಷ್ಮಿ ಲೇಔಟ್ನ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದೇ ಇದಕ್ಕೆಲ್ಲ ಕಾರಣ, ಆದಾಗ್ಯೂ ದೊಡ್ಡಣ್ಣ ವಿಡಿಯೋ ಮೂಲಕ ನಾನು ಆರೋಗ್ಯವಾಗಿದ್ದೇನೆ.

ಬೆಳಗ್ಗೆ ನಾನು ಎದ್ದೇಳುವ ಮುಂಚೆಯೇ ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಅದು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಇರುವವರೆಗೆ ನಾನು ಚೆನ್ನಾಗಿರುತ್ತೇನೆ ಎಂಬ ನಂಬಿಕೆ ಇದೆ. ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರನ್ನು ಸುಮ್ಮನೆ ಬಿಡುವುದಿಲ್ಲ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ದೊಡ್ಡಣ್ಣ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.






