ಬೆಂಗಳೂರು: ಕೇಂದ್ರ ಸಚಿವ ಸ್ಥಾನ ಉಳಿಸಿಕೊಳ್ಳುವ ಉದ್ದೇಶದಿಂದ ಹೆಚ್ಡಿ ಕುಮಾರಸ್ವಾಮಿ ರಾಜಕೀಯ ಶರಣಾಗತಿಯಾಗಿದ್ದಾರೆ ಎನ್ನುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿಕೆಗೆ ಜೆಡಿಎಸ್ ತಿರುಗೇಟು ನೀಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿರುವ ಜೆಡಿಎಸ್, ಭೂತದ ಬಾಯಲ್ಲಿ ಭಗವದ್ಗೀತೆ. ಮಿಸ್ಟರ್ ವಸೂಲಿವಾಲಾ ರಣದೀಪ್ ಸಿಂಗ್ ಸುರ್ಜೇವಾಲಾ, ಜೆಡಿಎಸ್ ಬಗ್ಗೆ ಮಾತನಾಡುವ ಮುನ್ನ ಕಾಂಗ್ರೆಸ್‌ನ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಿ.

1997ರಲ್ಲಿ ಕುತಂತ್ರದಿಂದ ದೇವೇಗೌಡ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ದ್ರೋಹಿಗಳು ನೀವು. ಕಾಂಗ್ರೆಸ್ ಪಕ್ಷ ಮಾಡಿದ ಈ ಮಹಾದ್ರೋಹವನ್ನು ಕಳೆದ 30 ವರ್ಷದಿಂದ ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ಉತ್ತರಿಸಿ? 2019ರಲ್ಲಿ ಮೈತ್ರಿ ನಾಟಕವಾಡಿ, ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿ ಸರಕಾರ ಕೆಡವಿದ್ದೂ ನಿಮ್ಮದೇ ಕಾಂಗ್ರೆಸ್. ಕಾಂಗ್ರೆಸ್‌ನದ್ದು ಒಳಗೆ ಜಾತ್ಯತೀತತೆಯ ಮುಖವಾಡ, ಹೊರಗೆ ಜಾತಿ ವಿದ್ವೇಷದ ರಾಜಕಾರಣ.

ಮಾಜಿ ಪ್ರಧಾನಿಗಳಾದ ಶ್ರೀ ಪಿ.ವಿ.ನರಸಿಂಹರಾವ್ ಹಾಗೂ ಡಾ. ಮನಮೋಹನ್ ಸಿಂಗ್ ಅವರಂತಹ ನಾಯಕರನ್ನು ನಿಮ್ಮ ʼನಕಲಿ ಗಾಂಧಿʼ ಕುಟುಂಬ ಹೇಗೆ ಅಪಮಾನಿಸಿ, ಹೇಗೆಲ್ಲಾ ನಡೆಸಿಕೊಂಡಿತ್ತು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡಿಕೊಳ್ಳಿ ಮಿಸ್ಟರ್ ವಸೂಲಿವಾಲ.

ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡು, ಫಲಿತಾಂಶದ ಬಳಿಕ ಗೆದ್ದೆತ್ತಿನ ಬಾಲ ಹಿಡಿದ ನೀತಿಗೆಟ್ಟ ಕಾಂಗ್ರೆಸ್ಸಿಗರೇ, ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ದೇವೇಗೌಡರು ರಾಷ್ಟ್ರ ಕಂಡ ಮೇರು ನಾಯಕರು. ಕನ್ನಡ ನೆಲೆ ಕಂಡ ಏಕೈಕ ಪ್ರಧಾನಿ. ಇಮ್ಮಡಿ ಪುಲಕೇಶಿ ನಂತರ ಭರತಭೂಮಿಯನ್ನು ಆಳಿದ ಶ್ರೇಷ್ಠ ನಾಯಕರು. ಆ ಹಿರಿಯ ಜೀವದ ವಿಷಯದಲ್ಲಿ ರಾಜಕೀಯ ಮಾಡುವುದು ನಿಮ್ಮ ನೀಚತನದ ಪರಾಕಾಷ್ಠೆ.

ಕೇವಲ ವಸೂಲಿ ಮಾಡಿಕೊಂಡು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ಸುರ್ಜಿವಾಲ ಉರುಫ್ ವಸೂಲಿವಾಲ ದೇವೇಗೌಡರ ವಿಷಯ ಬಿಟ್ಟು ನಿಮ್ಮ ಪಾರ್ಟಿ, ಸರಕಾರದಲ್ಲಿ ನಡೆಯುತ್ತಿರುವ ಒಳಜಗಳ, ಒಳಸಂಚು ಹತ್ತಿಕ್ಕುವ ಕಡೆ ಗಮನ ಹರಿಸಿ ವಸೂಲಿವಾಲ ಎಂದು ಜೆಡಿಎಸ್ ಕಿಡಿಕಾರಿದೆ.






