ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 10, 2026ರಂದು ಭಾರತೀಯ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುವ ಹಂತದಲ್ಲಿದ್ದಾರೆ. ಈ ದಿನ ಅವರು ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ದಿನಗಳ ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಯಾಗಿ ಹೊರಹೊಮ್ಮಲಿದ್ದಾರೆ.ಭಾರತದ ಮೊದಲ ಚುನಾಯಿತ ಪ್ರಧಾನಿ ಜವಹರಲಾಲ್ ನೆಹರು ಅವರು 1952ರ ಮೊದಲ ಲೋಕಸಭಾ ಚುನಾವಣೆಯ ಬಳಿಕ ಅಧಿಕಾರ ಸ್ವೀಕರಿಸಿ 1964ರ ಮೇ 27ರಂದು ನಿಧನರಾಗುವವರೆಗೂ 4,397 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಈ ದಾಖಲೆ ಕಳೆದ 72 ವರ್ಷಗಳಿಂದ ಅಜೇಯವಾಗಿ ಉಳಿದಿತ್ತು.

ಇನ್ನು ನರೇಂದ್ರ ಮೋದಿ ಅವರು 2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಜೂನ್ 9, 2026ರಂದು ಅವರ ಅಧಿಕಾರಾವಧಿ 4,397 ದಿನಗಳನ್ನು ತಲುಪಲಿದ್ದು, ನೆಹರೂ ಅವರ ದಾಖಲೆಯನ್ನು ಸರಿಗಟ್ಟಲಿದೆ. ಜೂನ್ 10ರಂದು 4,398ನೇ ದಿನಕ್ಕೆ ಕಾಲಿಡುವ ಮೂಲಕ ಮೋದಿ ಹೊಸ ದಾಖಲೆ ನಿರ್ಮಿಸಲಿದ್ದಾರೆ.ಕಳೆದ ಕೆಲವು ವರ್ಷಗಳಲ್ಲಿ ಮೋದಿ ಹಲವು ಐತಿಹಾಸಿಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2025ರ ಜುಲೈನಲ್ಲಿ ಅವರು ಇಂದಿರಾಗಾಂಧಿ ಅವರ ಸತತ ಅಧಿಕಾರಾವಧಿಯ ದಾಖಲೆಯನ್ನು ಹಿಂದಿಕ್ಕಿದ್ದರು. ಈಗ ನೆಹರೂ ಅವರ ದಾಖಲೆಯನ್ನೂ ಮೀರಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದ್ದಾರೆ.

ಆದಾಗ್ಯೂ, ಭಾರತದ ಪ್ರಧಾನಿಗಳ ಒಟ್ಟು ಅಧಿಕಾರಾವಧಿಯ ಲೆಕ್ಕದಲ್ಲಿ ನೆಹರೂ ಇನ್ನೂ ಮೊದಲ ಸ್ಥಾನದಲ್ಲಿದ್ದಾರೆ. 1947ರ ಆಗಸ್ಟ್ 15ರಂದು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಅವರು, 1964ರವರೆಗೆ ಸುಮಾರು 6,131 ದಿನಗಳ ಕಾಲ ದೇಶವನ್ನು ಮುನ್ನಡೆಸಿದ್ದರು.ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಲೋಕಸಭೆ ಅಥವಾ ಸಾರ್ವತ್ರಿಕ ಚುನಾವಣೆಗಳು ನಡೆದಿರಲಿಲ್ಲ. 1946ರಲ್ಲಿ ರಚನೆಯಾದ ಸಂವಿಧಾನ ಸಭೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದರಿಂದ ನೆಹರೂ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ನಂತರ 1947ರ ಆಗಸ್ಟ್ 15ರಂದು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಅವರು ಪ್ರಮಾಣವಚನ ಸ್ವೀಕರಿಸಿದರು.

ಭಾರತದ ಮೊದಲ ಸಾರ್ವತ್ರಿಕ ಚುನಾವಣೆ 1951-52ರಲ್ಲಿ ನಡೆಯಿತು. ಅದರಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿತು. ಇದರ ಬಳಿಕ 1952ರ ಮೇ 13ರಂದು ನೆಹರೂ ಚುನಾಯಿತ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಮೋದಿ ಮೂರನೇ ಬಾರಿ ಪ್ರಧಾನಿಯಾದರು. ಈ ಮೂಲಕ ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಜಯಗಳಿಸಿ ಕೇಂದ್ರದಲ್ಲಿ ಸರ್ಕಾರ ರಚಿಸಿದ ಮೊದಲ ಕಾಂಗ್ರೆಸ್ಸೇತರ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.






