ವಿಜಯಪುರ ಜಿಲ್ಲೆಯಲ್ಲಿ ಜಮೀನು ವಿವಾದ ಭೀಕರ ಮಾರಣಹೋಮಕ್ಕೆ ತಿರುಗಿದ್ದು, ಚಡಚಣ ತಾಲೂಕಿನ ಗೊವಿಂದಪುರ ಗ್ರಾಮದಲ್ಲಿ ನಡೆದ ದಾಳಿಯಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ರಾಜ್ಯಾದ್ಯಂತ ಬೆಚ್ಚಿಬೀಳುವಂತೆ ಮಾಡಿದೆ.ಶುಕ್ರವಾರ ಮಧ್ಯಾಹ್ನ ಸುಮಾರು 2ರಿಂದ 2.30ರ ಅವಧಿಯಲ್ಲಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದ್ದು, 15ರಿಂದ 20 ಜನರ ದುಷ್ಕರ್ಮಿಗಳ ಗುಂಪು ಏಕಾಏಕಿ ದಾಳಿ ನಡೆಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಹತ್ಯೆಗೀಡಾದವರನ್ನು ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ಚಂದ್ರಕಾಂತ @ ಚಂದು ನಿರಾಳೆ (55), ರಾಹುಲ್ ನಿರಾಳೆ (25), ಸಮರ್ಥ ನಿರಾಳೆ (23) ಹಾಗೂ ಶಬ್ಬೀರ ಅತ್ತಾರ (45) ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಅರವಿಂದ ಕಟಗೆ (72) ಮತ್ತು ಜೆಸಿಬಿ ಚಾಲಕ ಸಂದೀಪ ಮಾನೆ (33) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಮಾಹಿತಿ ಪ್ರಕಾರ, ಸುಮಾರು 25 ಎಕರೆ ಜಮೀನು ವಿಚಾರವಾಗಿ ಕಳೆದ 15-16 ವರ್ಷಗಳಿಂದ ಎರಡು ಗುಂಪುಗಳ ನಡುವೆ ತೀವ್ರ ವೈಷಮ್ಯ ಮುಂದುವರಿದಿತ್ತು. ಇದೇ ಜಮೀನು ವಿಚಾರವಾಗಿ 2015ರಲ್ಲಿ ಚಡಚಣ ಪೋಲಿಸ್ ಸ್ಟೇಶನ್ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣವೂ ದಾಖಲಾಗಿತ್ತು.ಆ ಪ್ರಕರಣದಲ್ಲಿ ಕೆಲವರಿಗೆ ಶಿಕ್ಷೆಯಾಗಿದ್ದು, ಬಳಿಕ ಆರೋಪಿತರು ಗ್ರಾಮ ತೊರೆದಿದ್ದರು. ಹಲವು ವರ್ಷಗಳಿಂದ ವಿವಾದಿತ ಜಮೀನು ಬಿಕೋಯ್ದ ಸ್ಥಿತಿಯಲ್ಲಿತ್ತು. ಇತ್ತೀಚೆಗೆ ನಿರಾಳೆ ಕುಟುಂಬ ಜಮೀನನ್ನು ಖರೀದಿಸಿ ಕೃಷಿಗೆ ಸಜ್ಜುಗೊಳಿಸಲು ಮುಂದಾದ ವೇಳೆ ಮತ್ತೆ ಉದ್ವಿಗ್ನತೆ ಉಂಟಾಗಿದೆ ಎನ್ನಲಾಗಿದೆ.

ಜಮೀನಿನಲ್ಲಿ ಟ್ರ್ಯಾಕ್ಟರ್ ಮತ್ತು ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದ ವೇಳೆ ದುಷ್ಕರ್ಮಿಗಳು ಮೊದಲು ಖಾರದ ಪುಡಿ ಎರಚಿ, ಬಳಿಕ ಕಬ್ಬು ಕತ್ತರಿಸುವ ಕೊಯ್ತಾ, ಮಚ್ಚು ಹಾಗೂ ಇತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿರುವ ಶಂಕೆಯೂ ವ್ಯಕ್ತವಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಿದ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ “ಮೃತದೇಹಗಳ ಮೇಲ್ನೋಟ ಪರಿಶೀಲನೆಯಲ್ಲಿ ಬುಲೆಟ್ ಗಾಯಗಳು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಳಿಕವೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ” ಎಂದು ತಿಳಿಸಿದ್ದಾರೆ.

ಈ ಹತ್ಯಾಕಾಂಡದಲ್ಲಿ ಗ್ರಾಮದ ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ ಹಾಗೂ ಆತನ ಸಹಚರರ ಕೈವಾಡವಿದೆ ಎಂದು ನಿರಾಳೆ ಕುಟುಂಬದವರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.ಘಟನೆ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸೋಕೋ ತಂಡ ಹಾಗೂ ಬೆರಳು ಮುದ್ರೆ ತಜ್ಞರು ಸಾಕ್ಷ್ಯ ಸಂಗ್ರಹ ಕಾರ್ಯ ನಡೆಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂಡಿ ಉಪವಿಭಾಗದ ಪೊಲೀಸರು, ಡಿಎಆರ್ ಮತ್ತು ಕೆಎಸ್ಆರ್ಪಿ ತಂಡಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯಪುರದ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.






