ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ್ದ ವೇಳೆ, ಅವರ ಸಂಚಾರ ಮಾರ್ಗದ ಸಮೀಪ ಸ್ಫೋಟಕ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಬಳಿ ನಡೆದ ಈ ಘಟನೆಗೆ ಸಂಬಂಧಿಸಿ, ಕರ್ತವ್ಯಲೋಪದ ಆರೋಪದ ಮೇಲೆ ಓರ್ವ ಪಿಎಸ್ಐ, ಓರ್ವ ಎಎಸ್ಐ ಹಾಗೂ ನಾಲ್ವರು ಕಾನ್ಸ್ಟೇಬಲ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಬೆಂಗಳೂರು ದಕ್ಷಿಣ ಎಸ್ಪಿ ಶ್ರೀನಿವಾಸ ಗೌಡ ಆದೇಶ ಹೊರಡಿಸಿದ್ದಾರೆ.

ಮೇ 10ರಂದು ಪ್ರಧಾನಿ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ಆಶ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದರು. ಅವರು ತೆರಳಬೇಕಿದ್ದ ಮಾರ್ಗದ ಸಮೀಪ ಬೆಳಿಗ್ಗೆ ಸುಮಾರು 9 ಗಂಟೆ ವೇಳೆಗೆ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿತ್ತು.
ಭದ್ರತಾ ಕರ್ತವ್ಯದಲ್ಲಿದ್ದ ಪೇದೆಯೊಬ್ಬರು ರಸ್ತೆ ಬದಿಯಲ್ಲಿ ಬಿದ್ದಿದ್ದ ಬಾಕ್ಸ್ ಗಮನಿಸಿದ್ದು, ತಕ್ಷಣವೇ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ ಬಾಕ್ಸ್ ಪರಿಶೀಲಿಸಿದಾಗ ಅದರೊಳಗೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದವು.ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಪ್ರಧಾನಿ ಸಂಚಾರ ಮಾರ್ಗವನ್ನು ಸಂಪೂರ್ಣವಾಗಿ ಮರು ತಪಾಸಣೆ ನಡೆಸಿದ್ದರು.

ಭದ್ರತಾ ದೃಷ್ಟಿಯಿಂದ ಸಂಪೂರ್ಣ ಕ್ಲಿಯರೆನ್ಸ್ ದೊರಕಿದ ನಂತರವೇ ಪ್ರಧಾನಿ ಮೋದಿ ಅವರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು.ಘಟನೆಯ ವೇಳೆ ಭದ್ರತಾ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಸಂಬಂಧಿತ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಇದೀಗ ಅಮಾನತು ಕ್ರಮ ಕೈಗೊಳ್ಳಲಾಗಿದೆ.





