ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕೆಲವರು ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಚಿತ್ರದ ಶೈಲಿ ಮತ್ತು ದೃಶ್ಯಾವಳಿಗಳ ಬಗ್ಗೆ ಟೀಕೆ ಮಾಡಿದ್ದರು. ಇದೀಗ ಈ ವಿವಾದಕ್ಕೆ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಟೀಸರ್ ಅನ್ನೋದು ಕೇವಲ ಒಂದು ಆಹ್ವಾನ ಮಾತ್ರ. ಅದನ್ನೇ ಇಡೀ ಸಿನಿಮಾ ಎಂದು ಅರ್ಥೈಸಬಾರದು. ಪ್ರೇಕ್ಷಕರ ಗಮನ ಸೆಳೆಯಲು ಟೀಸರ್ ಅನ್ನು ಆ ರೀತಿಯಲ್ಲಿ ರೂಪಿಸಲಾಗಿದೆ. ಆದರೆ ಚಿತ್ರದ ಕಥೆ ಮತ್ತು ವಿಷಯ ಸಂಪೂರ್ಣ ಬೇರೆ ಇದೆ” ಎಂದು ಸ್ಪಷ್ಟಪಡಿಸಿದರು.
“ವಿದೇಶಿ ಪ್ರೇಕ್ಷಕರೂ ಈಗ ಕನ್ನಡ ಸಿನಿಮಾಗಳನ್ನು ನೋಡುತ್ತಿದ್ದಾರೆ. ಅವರ ಅಭಿರುಚಿಗೆ ತಕ್ಕಂತೆ ಚಿತ್ರಗಳನ್ನು ಪ್ರಸ್ತುತಪಡಿಸುವ ಅಗತ್ಯ ಇದೆ. ಅದಕ್ಕಾಗಿಯೇ ಟೀಸರ್‌ಗೆ ಅಂತಾರಾಷ್ಟ್ರೀಯ ಶೈಲಿ ನೀಡಲಾಗಿದೆ” ಎಂದರು.

ಟೀಸರ್ ಬಗ್ಗೆ ಕೇಳಿಬಂದ ಟೀಕೆಗಳಿಗೆ ಉತ್ತರಿಸಿದ ಪುಷ್ಪಾ ಅರುಣ್ ಕುಮಾರ್, “ಯಶ್ ಅಭಿನಯದ ಯಾವ ಸಿನಿಮಾದಲ್ಲಾದರೂ ಅಶ್ಲೀಲತೆ ಇದೆ ಎಂದು ಹೇಳಬಹುದು? ಜನರು ಕುಟುಂಬ ಸಮೇತರಾಗಿ ಅವರ ಸಿನಿಮಾಗಳನ್ನು ನೋಡಿದ್ದಾರೆ. ಟೀಸರ್ ನೋಡಿ ತೀರ್ಪು ಕೊಡಬೇಡಿ” ಎಂದು ಹೇಳಿದರು.ಇಂದಿನ ಯುವ ಪ್ರೇಕ್ಷಕರ ಅಭಿರುಚಿ ಬದಲಾಗಿದ್ದು, ನಿರ್ದೇಶಕರು ಅದಕ್ಕೆ ತಕ್ಕಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. “ಹಿಂದಿನ ಕಾಲದ ಶೈಲಿಯ ಸಿನಿಮಾಗಳನ್ನು ಈಗಿನ ಯುವಕರು ಅಷ್ಟಾಗಿ ನೋಡುವುದಿಲ್ಲ. ಅವರಿಗೆ ಇಷ್ಟವಾಗುವ ರೀತಿಯಲ್ಲಿ ಕಥೆ ಮತ್ತು ಪ್ರಸ್ತುತಿ ಇರಬೇಕು” ಎಂದು ಅಭಿಪ್ರಾಯಪಟ್ಟರು.
ಕನ್ನಡ ಚಿತ್ರರಂಗದಲ್ಲಿ ವಲ್ಗರ್ ಸಿನಿಮಾಗಳು ಬರುತ್ತಿವೆ ಎಂಬ ಆರೋಪಕ್ಕೂ ಅವರು ತಿರುಗೇಟು ನೀಡಿದರು. “ಮಚ್ಚು-ಲಾಂಗು ಇರುವ ಆ್ಯಕ್ಷನ್ ಸಿನಿಮಾಗಳನ್ನೇ ಇಂದಿನ ಯುವಕರು ಹೆಚ್ಚು ಇಷ್ಟಪಡುತ್ತಾರೆ. ಹಾಗೆಂದರೆ ಅವು ಅಶ್ಲೀಲ ಅನ್ನೋದಿಲ್ಲ. ಪ್ರೇಕ್ಷಕರ ಬೇಡಿಕೆಯಂತೆ ಸಿನಿಮಾಗಳು ರೂಪುಗೊಳ್ಳುತ್ತಿವೆ” ಎಂದು ಹೇಳಿದರು.ತಮ್ಮ ನಿರ್ಮಾಣದ ಕೊತ್ತಲವಾಡಿ ಚಿತ್ರದ ಉದಾಹರಣೆ ನೀಡಿದ ಅವರು, “ಅದು ಒಂದು ಸಾಂಸಾರಿಕ ಸಿನಿಮಾ. ಆದರೆ ಥಿಯೇಟರ್ ಸಿಗಲಿಲ್ಲ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳೂ ಬರುತ್ತಿವೆ” ಎಂದು ಹೇಳಿದರು.

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಿನಿಮಾಗಳು ನಿರ್ಮಾಣವಾಗುತ್ತಿರುವುದರ ಬಗ್ಗೆ ಮಾತನಾಡಿದ ಅವರು, “ಕನ್ನಡದಲ್ಲಿ ಯಶ್ ದೊಡ್ಡ ಸಿನಿಮಾ ಮಾಡುತ್ತಿದ್ದಾರೆ. ತಮಿಳಿನ ವಿಜಯ್ ಅವರ ‘ಜನನಾಯಗನ್’ ಕೂಡ ದೊಡ್ಡ ಚಿತ್ರವೇ. ನಮ್ಮ ಕನ್ನಡದಲ್ಲಿ ಇಂತಹ ದೊಡ್ಡ ಸಿನಿಮಾಗಳು ಬರುತ್ತಿರುವುದು ಹೆಮ್ಮೆಪಡುವ ವಿಷಯ” ಎಂದು ಹೇಳಿದರು.






