• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ-ಸಂವಿಧಾನವನ್ನು ಅಸ್ಥಿರಗೊಳಿಸುತ್ತಿರುವ ಕೋಮುವಾದಿ ಶಕ್ತಿಗಳು

ಪ್ರತಿಧ್ವನಿ by ಪ್ರತಿಧ್ವನಿ
May 22, 2026
in ಅಂಕಣ
0
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ
Share on WhatsAppShare on FacebookShare on Telegram

(ದಿನಾಂಕ 15 ಮೇ 2026ರಂದು ಡಾ ಬಿ.ಆರ್.‌ ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ
ದಲಿತ ಸಂಘರ್ಷ ಸಮಿತಿ (ಸಂಯೋಜಕ) ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ )
ನಾ ದಿವಾಕರ
ಭಾಗ 2
ಎಲ್ಲರೊಳಗಿರುವ ಮನು – ವಾದ
ಇಲ್ಲಿ ನಾನು ವ್ಯಾಪಕ ಬಳಕೆಯಲ್ಲಿರುವ ʼಮನುವಾದಿʼ ಪದವನ್ನು ಮರುವ್ಯಾಖ್ಯಾನಕ್ಕೊಳಪಡಿಸುತ್ತೇನೆ. ಇತ್ತೀಚಿನ ಸಾರ್ವಜನಿಕ ಸಂಕಥನಗಳಲ್ಲಿ ʼಮನುವಾದಿ ʼ ಎನ್ನುವುದು ಒಂದು ಕ್ಲೀಷೆಯಂತೆ ಬಳಕೆಯಾಗುತ್ತಿದೆ. ಬಿಜೆಪಿ ಅಥವಾ ಸಂಘಪರಿವಾರದ ಪರ ಇರುವ, ಹಿಂದೂ ಸನಾತನ ಧರ್ಮದ ಪರ ಇರುವ, ಮೇಲ್ಜಾತಿ ಹಿಂದೂಗಳನ್ನು ಪ್ರತಿನಿಧಿಸುವ ಮತ್ತು ಜಾತಿ ವ್ಯವಸ್ಥೆಯನ್ನು ಸಮರ್ಥಿಸುವ ಎಲ್ಲರನ್ನೂ ʼ ಮನುವಾದಿ ʼ ಎಂದು ಕರೆಯಲಾಗುತ್ತದೆ. ಅಂದರೆ ಮನುಸ್ಮೃತಿಯನ್ನು ಪರಿಪಾಲಿಸುವವರು ಎಂಬರ್ಥಲ್ಲಿ. ಒಂದು ಹಂತಕ್ಕೆ‌ ಇದು ಸರಿ. ಆದರೆ ಮುಸ್ಲಿಂ ಮೂಲಭೂತವಾದಲ್ಲಿರುವ ʼ ಮನುವಾದ ʼ , ತಳಸಮುದಾಯಗಳಲ್ಲೇ ಇರುವ ಮನುಸಂಹಿತೆಯ ಪಿತೃಪ್ರಧಾನತೆ, ನವ ಬೌದ್ಧರಲ್ಲೂ ಇರುವ ಪ್ರತ್ಯೇಕತೆ ಎಕೆ ಗಮನಕ್ಕೆ ಬರುವುದಿಲ್ಲ. ಮನುವಾದ ಎಂದರೆ ಕೇವಲ ಜಾತಿ-ಧರ್ಮಗಳಿಗೆ ಸೀಮಿತವಾಗುತ್ತದೆಯೇ ? ಖಂಡಿತವಾಗಿಯೂ ಇಲ್ಲ.
ಮನುಸ್ಮೃತಿಯ ಸಂಹಿತೆಗಳು ಕೇವಲ ಜಾತಿಗಳ ನಡುವಿನ ತಾರತಮ್ಯಗಳನ್ನು ಹಿಗ್ಗಿಸುವ, ಮೇಲು ಕೀಳುಗಳನ್ನು ಅಧಿಕೃತಗೊಳಿಸುವ ನಿಯಮಗಳಲ್ಲ. ಇದನ್ನೂ ಮೀರಿ ನೋಡಿದಾಗ ಅಲ್ಲಿ ಮಹಿಳಾಧೀನತೆ, ಪುರುಷಾಧಿಪತ್ಯ, ಸಾಮಾಜಿಕ ಯಜಮಾನಿಕೆ, ಸಾಂಸ್ಕೃತಿಕ ಆಧಿಪತ್ಯ, ಆರ್ಥಿಕ ಪಾರಮ್ಯ ಇವೆಲ್ಲವೂ ಇದೆ ಅಲ್ಲವೇ ? ಇವೆಲ್ಲದರ ಮೂಲ ಪಿತೃಪ್ರಧಾನತೆ (Patriarchy) ಮತ್ತು ಊಳಿಗಮಾನ್ಯ ಪದ್ಧತಿಯಲ್ಲಿದೆ. ದಲಿತ ಸಮಾಜಗಳಲ್ಲೇ ಎಷ್ಟು ಪ್ರಮಾಣದಲ್ಲಿ ಈ ಪಿತೃಪ್ರಧಾನತೆಯನ್ನು, ಯಜಮಾನಿಕೆಯನ್ನು ಭೇದಿಸಿ ಹೊರಬರಲು ಸಾಧ್ಯವಾಗಿದೆ.

ADVERTISEMENT

ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ನಾವು, ಅಂದರೆ ಮಾರ್ಕ್ಸ್‌ವಾದಿಗಳು, ಅಂಬೇಡ್ಕರ್‌ವಾದಿಗಳು ಎಷ್ಟು ಮುನ್ನಡೆ ಸಾಧಿಸಿದ್ದೇವೆ ? ಈ ವೇದಿಕೆಯಲ್ಲೇ ಮಹಿಳೆಯರ ಉಪಸ್ಥಿತಿ ಇಲ್ಲ. ಸಭಾಂಗಣದಲ್ಲಿ ಬೆರಳೆಣಿಕಯಷ್ಟಿದ್ದಾರೆ. ಈ ಲೋಪವನ್ನು ಮೀರಲು ನಾವೇಕೆ ವಿಫಲರಾಗುತ್ತಿದ್ದೇವೆ ? ನಮ್ಮಲ್ಲಿರುವ ಈ ಪುರುಷಾಧಿಪತ್ಯದ ಧೋರಣೆ ಮನುವಾದ ಅಲ್ಲವೇ ?

ಅಂಬೇಡ್ಕರ್‌ ಅವರ ತತ್ವ ಒಳಗೊಳ್ಳುವಿಕೆ, ಮನುಸ್ಮೃತಿಯ ತತ್ವ ಹೊರಗಿಡುವುದು. ಕೋಮುವಾದಿಗಳ ಕಾರ್ಯಾಚರಣೆಯ ಮೂಲ ಉದ್ದೇಶ, ಗುರಿ ಇರುವುದು ಈ ಒಳಗೊಳ್ಳುವಿಕೆಯನ್ನು ಭಂಗಗೊಳಿಸುವುದು, ಆದಷ್ಟೂ ಸಮಾಜಗಳನ್ನು ಹೊರಗಿಡುವಿಕೆಯ ಕಡೆಗೆ ಸೆಳೆಯುವುದು. ಆಂತರಿಕವಾಗಿ ಇದು ಮಹಿಳೆಯರಿಗೂ ಅನ್ವಯಿಸುವಂತಹ ನಿಯಮ. ಹಾಗಾಗಿಯೇ ಕಮ್ಯುನಿಸ್ಟ್‌ ಪಕ್ಷಗಳು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಬೌದ್ಧ ಸಂಘಗಳು, ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘ-ಸಂಸ್ಥೆಗಳು ಯಾವ ಸ್ತರದಲ್ಲೂ ಮಹಿಳಾ ಪ್ರಾತಿನಿಧ್ಯಕ್ಕೆ ಮಾನ್ಯತೆ ಕೊಟ್ಟೇ ಇಲ್ಲ. ನೂರು ವರ್ಷ ಪೂರೈಸಿರುವ ಕಮ್ಯನಿಸ್ಟ್ ಚಳುವಳಿಯಲ್ಲಿ ಈವರೆಗೂ ಕಾರ್ಮಿಕ ಸಂಘಟನೆಯಲ್ಲಾಗಲೀ, ಪಕ್ಷದಲ್ಲಾಗಲೀ ಪ್ರಧಾನ ಕಾರ್ಯದರ್ಶಿ ಪಟ್ಟವನ್ನು ಮಹಿಳೆ ಪಡೆದಿಲ್ಲ.. ದಲಿತ ಚಳುವಳಿಯಲ್ಲೂ ಇದನ್ನು ಗುರುತಿಸಬಹುದು. ಆದರೂ ನಾವೆಲ್ಲರೂ ಶಾಸನ ಸಭೆಗಳಲ್ಲಿ ಶೇಕಡಾ 33ರ ಮಹಿಳಾ ಮೀಸಲಾತಿಗಾಗಿ ದನಿ ಎತ್ತುತ್ತಿದ್ದೇವೆ !! ಸಂವಿಧಾನ ಮತ್ತು ಬಹುತ್ವವನ್ನು ಅಸ್ಥಿರಗೊಳಿಸುತ್ತಿರುವುದು ಕೋಮುವಾದಿ ಶಕ್ತಿಗಳೇ ಹೌದಾದರೂ, ಈ ಕೋಮುವಾದಿಗಳನ್ನು ನಿರ್ವಚಿಸುವಾಗ ಮೇಲೆ ಹೇಳಿದ ಬಹುತ್ವ ವಿರೋಧಿ ಧೋರಣೆಗಳನ್ನೂ ನಾವು ಗಮನಿಸಬೇಕಲ್ಲವೇ ?

ಸಮಾಜ ಸಮುದಾಯ ಮತ್ತು ಪ್ರಜ್ಞೆ
ಸಾಮಾಜಿಕ ಸ್ಥಿತ್ಯಂತರಗಳು ನಮ್ಮ ಸ್ವ-ಪ್ರಜ್ಞೆಯನ್ನು ಎಷ್ಟರ ಮಟ್ಟಿಗೆ ಪಲ್ಲಟಗೊಳಿಸುತ್ತವೆ, ಅಸ್ವಸ್ಥತೆಗೆ ಈಡುಮಾಡುತ್ತವೆ ಎಂದರೆ, ಇತ್ತೀಚಿನ ಒಳಮೀಸಲಾತಿ ಹೋರಾಟದ ಸಂದರ್ಭದಲ್ಲಿ ರಾತ್ರೋರಾತ್ರಿ ʼ ದಲಿತ ಪ್ರಜ್ಞೆ ʼ ಕಳೆದುಹೋಗಿ, ʼ ಬಲದ ಪ್ರಜ್ಞೆ ʼ ಮತ್ತು ʼ ಎಡದ ಪ್ರಜ್ಞೆ ʼ ಅಥವಾ ಹೊಲೆಯರ ಮತ್ತು ಮಾದಿಗರ ಪ್ರಜ್ಞೆ ಆಕ್ರಮಿಸಿಕೊಂಡಿದ್ದವು.ʼ ನಾವು ದಲಿತರು ʼ ಎನ್ನುವ ಬದಲು ನಾವು ಹೊಲೆಯರು, ನಾವು ಮಾದಿಗರು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತೇವೆ, ಅವರಿಗೆ ಎಂದಿಗೂ ಸೋಲುವುದಿಲ್ಲ ಎಂಬ ಮಾತುಗಳು ಏಕೀಕೃತ ʼ ದಲಿತ ಪ್ರಜ್ಞೆಯನ್ನು ʼ ಒಮ್ಮೆಲೆ ಒಡೆದುಹಾಕಿದ್ದವು. ಬಾಬಸಾಹೇಬ್‌ ಅಂಬೇಡ್ಕರ್‌ ಹೋರಾಡಿದ್ದೇ ನಮ್ಮ ಸಮುದಾಯಕ್ಕಾಗಿ ಎಂಬ ದನಿಯೂ ಕೇಳಿಬಂತು.
ಇದನ್ನು ಏಕೆ ಪ್ರಸ್ತಾಪಿಸುತ್ತಿದ್ದೇನೆ ಎಂದರೆ, ಕೋಮುವಾದಿ ಶಕ್ತಿಗಳು ಭಾರತದ ಬಹುತ್ವ-ಸಂವಿಧಾನವನ್ನು ಅಸ್ಥಿರಗೊಳಿಸುತ್ತಿದ್ದರೆ ಅದಕ್ಕೆ ಒಂದು ಕಾರಣ ಈ ವಿಘಟಿತ ವರ್ಗ ಪ್ರಜ್ಞೆಯಲ್ಲಿದೆ. ಮೀಸಲಾತಿ ಮುಂತಾದ ಸಾಂವಿಧಾನಿಕ ಸೌಲಭ್ಯಗಳು ಜಾತಿ ಶ್ರೇಣಿಯನ್ನು ವರ್ಗ ಪ್ರಜ್ಞೆಯ ಮೂಲಕ ಅಡ್ಡಡ್ಡಲಾಗಿ ಸೀಳುತ್ತಲೇ ಹೋಗುತ್ತದೆ. ಇದು ಬಲಪಂಥೀಯ ರಾಜಕೀಯ ಮತ್ತು ಕೋಮುವಾದಿ ಧೃವೀಕರಣಕ್ಕೆ ಅತ್ಯುತ್ತಮ ಸರಕಾಗಿ ಪರಿಣಮಿಸುತ್ತದೆ. ಅತೃಪ್ತ ಎಡ ಅಥವಾ ಬಲ ಸಮುದಾಯವನ್ನು ದಾರಿ ತಪ್ಪಿಸುವುದು ಸುಲಭವಾಗುತ್ತದೆ. ಅಂಬೇಡ್ಕರ್‌ ಗತಿಸಿ ಏಳು ದಶಕಗಳು ಕಳೆದರೂ ವಿಶಾಲ ಭಾರತದ (Pan Indian ) ಸಮಾನ ದಲಿತ ಪ್ರಜ್ಞೆ (Common Dalit Consciousness) ಏಕೆ ರೂಪುಗೊಂಡಿಲ್ಲ ? ಇತ್ತೀಚಿನ ಒಳಮೀಸಲಾತಿ ಹೋರಾಟದಲ್ಲಿ ಇದಕ್ಕೆ ಉತ್ತರವಿದೆ.

ಕೋಮುವಾದದ ಬಲವರ್ಧನೆ
ಈ ತಾತ್ವಿಕ ದ್ವಂದ್ವಗಳ ನಡುವೆ ಕೋಮುವಾದಿಗಳು ಏಕೆ ಬಲಗೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಮುಖಾಮುಖಿಯಾಗಬೇಕಿದೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿಯೂ ಇದೆ. ಹೌದು, ಭಾರತದಲ್ಲಿ ಆಹಾರ ಮೂಲಭೂತ ಹಕ್ಕು ಎಂದು ಸಂವಿಧಾನದಲ್ಲಿ ಇದನ್ನು ನಿರ್ದಿಷ್ಟವಾಗಿ ಉಲ್ಲೇಖಿಸದೆ ಹೋದರೂ, ಭಾರತದ ಸುಪ್ರೀಂ ಕೋರ್ಟ್ ಆಹಾರದ ಹಕ್ಕು ವಿಧಿ 21 ರ ಅಡಿಯಲ್ಲಿ ಜೀವಿಸುವ ಹಕ್ಕಿನ ಅವಿಭಾಜ್ಯ ಅಂಗವಾಗಿದು, ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಭಾಗವಾಗಿದೆ ಎಂದು ತೀರ್ಪು ನೀಡಿದೆ. ಆದರೆ ಧಾರ್ಮಿಕ ಮೂಲಭೂತವಾದಕ್ಕೆ ಉತ್ತೇಜನ ನೀಡುವಂತಹ ಆಹಾರ ಪದ್ಧತಿಯ ಮೇಲಿನ ನಿಷೇಧಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಈ ಅಧಿಕಾರವನ್ನು ನಿರ್ದೇಶಕ ತತ್ವಗಳ ಮೂಲಕ ಸರ್ಕಾರಗಳಿಗೆ ನೀಡಲಾಗಿದೆ. ಹಾಗಾಗಿಯೇ ಗೋಹತ್ಯೆ ನಿಷೇಧ ಸುಲಭವಾಗುತ್ತದೆ. ಹಾಗೆಯೇ ಯಾವುದೇ ಧರ್ಮವನ್ನು ಆಯ್ಕೆ ಮಾಡುವ ಹಕ್ಕು ಪ್ರಜೆಗಳಿಗೆ ಇದ್ದರೂ, ಮತಾಂತರ ನಿಷೇಧಿಸುವ ಅಧಿಕಾರವನ್ನು ಸರ್ಕಾರಗಳಿಗೆ ನೀಡಲಾಗಿದೆ.

ಈ ನಿರ್ದೇಶಕ ತತ್ವಗಳ ಸಾಂವಿಧಾನಿಕ ನಿಯಮಗಳನ್ನು ಬಳಸುವ ಅಧಿಕಾರ ಚುನಾಯಿತ ಸರ್ಕಾರಗಳಿಗೆ ಇರುತ್ತದೆ. ಕೋಮುವಾದಿಗಳಿಗೆ ಇಂತಹ ನಿಷೇಧಗಳೇ ರಾಜಕೀಯ ಆಹಾರವಾಗುವುದನ್ನು ನೋಡುತ್ತಲೇ ಇದ್ದೇವೆ. ಆದರೂ ದೇಶದ ಬಹುಪಾಲು ದಲಿತ ವರ್ಗ ಬಿಜೆಪಿಗೆ ಬೆನ್ನೆಲುಬಾಗಿ ನಿಂತಿರುವುದನ್ನು ಎಲ್ಲ ಚುನಾವಣೆಗಳಲ್ಲೂ ಗಮನಿಸುತ್ತಿದ್ದೇವೆ. ಈ ನಿಷೇಧ ಹೇರುವ ಕಾನೂನುಗಳನ್ನು ಬಿಜೆಪಿ ಆಳ್ವಿಕೆಯ ರಾಜ್ಯ/ಕೇಂದ್ರದಲ್ಲಿ ಯಾವ ದಲಿತ ಶಾಸಕ/ಸಂಸದರೂ ವಿರೋಧಿಸಿಲ್ಲ. ಹಿಂದೂ ಅಸ್ಮಿತೆ ಅಥವಾ ಹಿಂದುತ್ವದ ರಾಜಕೀಯ ಅಸ್ಮಿತೆ ಇಲ್ಲಿ ದಲಿತ ಪ್ರಜ್ಞೆಯನ್ನು ನುಂಗಿಹಾಕುತ್ತದೆ. ಈ ಸೈದ್ಧಾಂತಿಕ ನೆಲೆಯಲ್ಲಿ ಸರ್ಕಾರಗಳು ಜಾರಿಗೊಳಿಸುವ ಸಾಮಾನ್ಯ ದಲಿತ ವಿರೋಧಿ ಕಾನೂನುಗಳು ಅಡೆತಡೆ ಇಲ್ಲದೆ, ಪ್ರತಿರೋಧ ಇಲ್ಲದೆ ಜಾರಿಯಾಗುತ್ತಿರುತ್ತವೆ. ಕರ್ನಾಟಕದಲ್ಲೇ ಇದನ್ನು ನೋಡಿದ್ದೇವೆ.

ಗೋಹತ್ಯೆ, ಮತಾಂತರ ನಿಷೇಧಗಳ ವಿರುದ್ಧ ಹೋರಾಟದಲ್ಲಿ ಅಂಬೇಡ್ಕರ್‌ ಅವರನ್ನು ಅನುಸರಿಸುವ, ಆರಾಧಿಸುವ ಪ್ರತಿ ಸಂಘಟನೆಯೂ ಪಾಲ್ಗೊಂಡಿದ್ದರೆ ಹೇಗಿರುತ್ತಿತ್ತು ? ಮತಾಂತರ ಮತ್ತು ಮೀಸಲಾತಿಯ ತಾಕಲಾಟದಲ್ಲಿ ಪ್ರವೇಶಿಸುವ ದಲಿತ ಸಂಘಟನೆಗಳು, ಮತಾಂತರದ ಮೂಲಕ ಅನ್ಯ ಧರ್ಮವನ್ನು ಆಯ್ಕೆಮಾಡುವ ತಮ್ಮದೇ ಸಮುದಾಯದ ಸದಸ್ಯರ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಏಕೆ ಮುಂದೆ ಬರುವುದಿಲ್ಲ ? ಏಕೆಂದರೆ ದಲಿತ ಸಂಘಟನೆಗಳಲ್ಲಿ ಐಕ್ಯತೆಯ ಕೊರತೆ ಇದೆ. ಎಲ್ಲರೂ ಅಂಬೇಡ್ಕರ್‌ ಅನುಯಾಯಿಗಳೇ, ಎಲ್ಲರೂ ಸಂವಿಧಾನ ನಿಷ್ಠೆ ಇರುವವರೇ, ಎಲ್ಲರೂ ಬಹುತ್ವದ ಪ್ರತಿಪಾದಕರೇ ಆದರೆ ಒಳಗಿರುವ ವಿವಿಧ ಗುಂಪುಗಳನ್ನು, ಬಣಗಳನ್ನು ಪ್ರತಿನಿಧಿಸುವವರಲ್ಲಿ ಅಂಬೇಡ್ಕರ್‌ ಅಕ್ಷರಶಃ ಪ್ರತಿಮೆಯಾಗಿಬಿಡುತ್ತಾರೆ. ಸ್ವಾರ್ಥ ರಾಜಕಾರಣ ಮೂಲ ಸಿದ್ಧಾಂತವಾಗಿಬಿಡುತ್ತದೆ. ಈ ಪ್ರತಿಮೆಯ ಸುತ್ತ ಆವರಿಸಿಕೊಳ್ಳುವ ಆರಾಧನೆ, ಆಚರಣೆಗಳು ತಾತ್ವಿಕ ನೆಲೆಗಳನ್ನು ಹಂತಹಂತವಾಗಿ ನಿರ್ನಾಮ ಮಾಡುತ್ತಲೇ ಇರುತ್ತವೆ.

ಸಂವಿಧಾನ ರಕ್ಷಣೆಯ ತಾತ್ವಿಕತೆ
ಸಂವಿಧಾನ ರಕ್ಷಣೆಗಾಗಿ ಪಣ ತೊಟ್ಟಿರುವ ನಾವು ಯೋಚಿಸಬೇಕಾದ್ದು, ಸಂವಿಧಾನ ಹೇಗೆ ಅಸ್ಥಿರವಾಗುತ್ತದೆ ? ಅದರ ಅಂತಃಸತ್ವವಾಗಿರುವ ಬಹುತ್ವ ಸಂಸ್ಕೃತಿಯನ್ನು ನಾಶಪಡಿಸುತ್ತಾ ಹೋದಂತೆ ಶಿಥಿಲವಾಗುತ್ತದೆ. ಇದನ್ನು ನಾಶಪಡಿಸಲು ಏನು ಮಾಡಬೇಕು ? ಧರ್ಮಗಳ ನಡುವೆ ದ್ವೇಷ ಬಿತ್ತಬೇಕು, ಜಾತಿಗಳ ನಡುವೆ ರಾಜಕೀಯ ವೈಮನಸ್ಯ ಮೂಡಿಸಬೇಕು, ಸಾಂಸ್ಕೃತಿಕವಾಗಿ ಏಕಸಂಸ್ಕೃತಿಯನ್ನು ಬಲಪಡಿಸಬೇಕು. ಇದಕ್ಕೆ ಜನಸಂಸ್ಕೃತಿಯ ನೆಲೆಗಳನ್ನೂ ಹಿಂದೂ ಸಂಸ್ಕೃತಿಯ ವಿಶಾಲ ಅಂಗಳದೊಳಗೆ ಸೇರಿಸಿಕೊಳ್ಳಬೇಕು. ಜನಪದೀಯ, ನೆಲಮೂಲ ಸಂಸ್ಕೃತಿಯ ಬಹುತ್ವದ ನೆಲೆಗಳೆಲ್ಲವನ್ನೂ ವೈದಿಕೀಕರಣಗೊಳಿಸುವ ಮೂಲಕ, ಬೃಹತ್‌ ಜನಸಮುದಾಯಗಳನ್ನು ವಿಶಾಲ ಧಾರ್ಮಿಕ ಬಯಲಿನೊಳಗೆ ಬಂಧಿಸಬೇಕು. ಇವೆಲ್ಲವನ್ನೂ ಸಾಧಿಸಬೇಕಾದರೆ ಆಂತರಿಕವಾಗಿ ಮತ-ಧರ್ಮ ಶ್ರೇಷ್ಠತೆಯ ಭಾವನೆಯನ್ನು ಜನಸಾಮಾನ್ಯರಲ್ಲಿ ಆಳವಾಗಿ ಬಿತ್ತಬೇಕು. ಈ ಎಲ್ಲ ಕಾಯಕಗಳಿಗೆ ಬೇಕಾದ ಮಾನವ ಸಂಪನ್ಮೂಲ ಒದಗುತ್ತಿರುವುದು ಎಲ್ಲಿಂದ ಎಂದು ಯೋಚಿಸಿದ್ದೇವೆಯೇ? ರಾಜಕೀಯವಾಗಿ ಶೋಷಿತ ತಳಸಮುದಾಯಗಳಿಂದಲೇ ಅಲ್ಲವೇ ?

ಸಂವಿಧಾನ ಅಸ್ಥಿರವಾಗುತ್ತಿದೆ, ಬಹುತ್ವ ನಾಶವಾಗುತ್ತಿದೆ ಎಂದು ಹುಯಿಲೆಬ್ಬಿಸುವ ಮುನ್ನ ಆ ವಿನಾಶದ ಪ್ರಕ್ರಿಯೆಯಲ್ಲಿ ಅಂಬೇಡ್ಕರರನ್ನು ಆರಾಧಿಸುವವರೂ ಇರುವುದನ್ನು ಗಮನಿಸಬೇಕಲ್ಲವೇ ? ಏಕೆ ಹೀಗಾಗುತ್ತಿದೆ ? ಏಕೆಂದರೆ ನಮಗೆ ಅಂಬೇಡ್ಕರ್‌ ಅರ್ಥವಾಗಿಲ್ಲ ಅಥವಾ ನಾವು ಅರ್ಥಮಾಡಿಕೊಂಡಿಲ್ಲ ಅಥವಾ ನಮಗೆ ಹೇಗೆ ಬೇಕೋ ಹಾಗೆ ಅರ್ಥೈಸಿಕೊಂಡಿದ್ದೇವೆ, ಅಲ್ಲವೇ ? ನಮಗೆ ಅಂಬೇಡ್ಕರ್‌ ಮತ್ತು ಅವರ ತತ್ವಗಳನ್ನು ಸಂವಿಧಾನದ ನೆಪದಲ್ಲಾದರೂ ಅಂತರೀಕರಣಗೊಳಿಸಿಕೊಳ್ಳಲು (Internalise) ಸಾಧ್ಯವಾಗುತ್ತಿಲ್ಲ ಹಾಗಾಗಿಯೇ ಕರ್ನಾಟಕದಲ್ಲಿ ನೂರೈವತ್ತು ದಲಿತ ಸಂಘಟನೆಗಳಿವೆ. ತಮಾಷೆ ಎಂದರೆ ʼ ದಸಂಸ ಅಂಬೇಡ್ಕರ್‌ವಾದಿ ʼ ಎಂತಲೂ ಇದೆ. ಇನ್ನೇನಾಗಿರಲು ಸಾಧ್ಯ ? ಯೋಚಿಸಬೇಕಲ್ಲವೇ ?
ಭಾರತದಲ್ಲಿ ದಲಿತ ಚಳುವಳಿಗಳ ಈ ಅನೈಕ್ಯತೆ ಅಥವಾ ವಿಘಟನೆಯೇ ಕೋಮುವಾದಿ ಶಕ್ತಿಗಳ ಮೂಲ ಇಂಧನ ಮತ್ತು ಆಹಾರವಾಗಿರುವುದನ್ನು ಇನ್ನಾದರೂ ಗುರುತಿಸಬೇಕಿದೆ.

ಅಂಬೇಡ್ಕರ್‌ ಕಟ್ಟುವ ಸಿದ್ಧಾಂತವನ್ನು ನಂಬಿದವರು. ನಾವು ಅವರ ಹೆಸರಿನಲ್ಲಿ ಕೆಡವುವವರೊಡನೆ ಕೈಜೋಡಿಸುತ್ತಿದ್ದೇವೆ. ಅವರು ಗೋಡೆಗಳನ್ನು ಕೆಡವಿದರು ನಾವು ಇನ್ನೂ ಎತ್ತರದ ಗೋಡೆಗಳನ್ನು ಎಬ್ಬಿಸುತ್ತಿದ್ದೇವೆ. ಏಕೆ ಹೀಗೆ ? ಏಕೆಂದರೆ ನಮ್ಮೊಳಗೆ ಮನು ಜೀವಂತವಾಗಿದ್ದಾನೆ. ಅವನ ಸಂಹಿತೆಗಳಾದ ಪಿತೃಪ್ರಧಾನತೆ , ಊಳಿಗಮಾನ್ಯತೆ, ಯಜಮಾನಿಕೆಯ ಮನಸ್ಥಿತಿ, ಮಹಿಳಾಧೀನತೆ/ಪುರುಷಾಧಿಪತ್ಯ ಇವೆಲ್ಲವೂ ಮೌಲ್ಯಗಳ ರೂಪದಲ್ಲಿ ನಮ್ಮೊಳಗೆ ಆಳವಾಗಿ ಬೇರೂರಿವೆ. ವರ್ಷಕ್ಕೊಮ್ಮೆ ಮನಸ್ಮೃತಿಯ ಹಾಳೆಗಳನ್ನು ಸಾಂಕೇತಿಕವಾಗಿ ಸುಡುತ್ತಿದ್ದೇವೆ ಆದರೆ ಈ ಮೌಲ್ಯಗಳನ್ನು ಸುಡಲು ಸಾಧ್ಯವಾಗುತ್ತಿಲ್ಲ. ಆದರೂ ʼ ಮನುವಾದಿ ʼ ಎಂಬ ಒಂದು ಹೊಸ ಜಗತ್ತನ್ನೇ ಹುಟ್ಟುಹಾಕಿ, ನಾವು ಅದರೊಳಗಿಲ್ಲ ಎಂಬ ಭ್ರಮೆಯಲ್ಲಿ ತೇಲುತ್ತಿದ್ದೇವೆ.

ಭವಿಷ್ಯದ ದೂರಗಾಮಿ ದೃಷ್ಟಿಯಲ್ಲಿ
ಬಾಯಲ್ಲಿ ಸಂವಿಧಾನ ಪ್ರಸ್ತಾವನೆ, ಕೈಯ್ಯೊಳಗೆ ಸಂವಿಧಾನ ಗ್ರಂಥ ಇದ್ದ ಮಾತ್ರಕ್ಕೆ ಕೋಮುವಾದಿ ಶಕ್ತಿಗಳನ್ನು ಸೋಲಿಸಲಾಗುವುದಿಲ್ಲ. ಎಲ್ಲ ಧರ್ಮಗಳಲ್ಲಿರುವ ಮೂಲಭೂತವಾದವನ್ನು ಹೋಗಲಾಡಿಸದಿದ್ದರೆ ಬಹುತ್ವವನ್ನು ಸಾಧಿಸಲೂ ಆಗುವುದಿಲ್ಲ. ಬಹುತ್ವವನ್ನು ಸಾಪೇಕ್ಷವಾಗಿ (Relative) ನೋಡುವ ದೃಷ್ಟಿಕೋನದಿಂದ ನಾವು ಹೊರಬರಬೇಕಿದೆ. ನಮ್ಮೊಳಗಿನ ಮನುವನ್ನು ಹೊರಗೆಸೆದು ಅಂಬೇಡ್ಕರರನ್ನು ಒಳಗಿಳಿಸಿಕೊಳ್ಳಬೇಕಿದೆ. ಮೀಸಲಾತಿ ಕ್ಷೇತ್ರದಿಂದ ಆಯ್ಕೆಯಾಗಿರುವ ಎಲ್ಲ ಶಾಸಕರು, ಸಂಸದರೂ ಇಲ್ಲಿ ಅಪರಾಧಿಗಳಾಗಿ ಕಾಣಬೇಕಲ್ಲವೇ ? ಸಾಂಕೇತಿಕ ಪ್ರತಿರೋಧಗಳಿಂದ, ಸಾವಿರಾರು ಸೆಮಿನಾರ್‌ಗಳಿಂದ ಇದು ಸಾಧ್ಯವಾಗುವುದಿಲ್ಲ. ನಾವು ಒಳಕ್ಕಿಳಿಯಬೇಕಿದೆ. ಸೆಮಿನಾರ್‌ಗಳು ಜ್ಞಾನ ಪ್ರಸರಣದ ಸಾಧನಗಳು ಮಾತ್ರ. ಜ್ಞಾನದ ತುಣುಕುಗಳನ್ನು ಮುಟ್ಟಿಸಲು ನೆರವಾಗುತ್ತವೆ. ಆದರೆ ಅರಿವು ಒಳಗಿಳಿಸಿಕೊಳ್ಳಬೇಕಾದರೆ, ಸಣ್ಣ ಸಣ್ಣ ಗುಂಪುಗಳಲ್ಲಾದರೂ ಯುವ ಜನಾಂಗದೊಡನೆ, ಬಾಧಿತ ಸಮುದಾಯಗಳೊಡನೆ, ಮಹಿಳಾ ಸಮೂಹಗಳೊಡನೆ ಕುಳಿತು ಸಂವಾದಿಸಬೇಕಿದೆ. ನಾವು ಪರಸ್ಪರ ಅಭಿಪ್ರಾಯ ಮತ್ತು ಅನುಭವಗಳನ್ನು ಹಂಚಿಕೊಳ್ಳಬೇಕು. ಜ್ಞಾನವನ್ನು ಹಂಚಿಕೊಳ್ಳುವುದು ಆನಂತರದ ಹಂತ.

ಇದು ಸಾಧ್ಯವಾಗಬೇಕಾದರೆ ದಲಿತ ಐಕ್ಯತೆಯನ್ನು ತಾತ್ವಿಕವಾಗಿ ಸಾಧಿಸಬೇಕು. ಸಾಂದರ್ಭಿಕ ಐಕ್ಯತೆ ಸಾಂಕೇತಿಕ ಹೋರಾಟಗಳಲ್ಲೇ ಕೊನೆಗೊಳ್ಳುತ್ತದೆ . ಪಾತಾಳ ತಲುಪಿರುವ ಐಕ್ಯತೆ ಎಂಬ ಔದಾತ್ಯವನ್ನು ಮರಳಿ ನೆಲಮಟ್ಟಕ್ಕೆ ತರಲು ಒಂದು ಕೈ ಸಾಲುವುದಿಲ್ಲ. ಅಂಬೇಡ್ಕರ್‌ ಅವರನ್ನು ಒಪ್ಪುವ ಲಕ್ಷಾಂತರ ಕೈಗಳು ಒಂದಾಗಬೇಕಿದೆ. ಅರ್ಥಾತ್ ಸಾಂವಿಧಾನಿಕವಾಗಿ, ಸಾಂಸ್ಥಿಕವಾಗಿ, ಸಂಘಟನಾತ್ಮಕವಾಗಿ ಪ್ರತಿನಿಧಿಸುವ ದಲಿತ ಸಂಘಟನೆಗಳ ಹತ್ತಾರು ಬಣಗಳು, ದಲಿತರನ್ನೇ ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಹಾಗೂ ನವ ಉದಾರವಾದಿ ಹಿತವಲಯದಲ್ಲಿ ವಿರಮಿಸುತ್ತಿರುವ ಬೌದ್ಧಿಕ ದಲಿತ ಚಿಂತಕರು ಈ ಮೇಲೆತ್ತುವ ಕಾರ್ಯದಲ್ಲಿ ಕೈಜೋಡಿಸಬೇಕಿದೆ. ಇದನ್ನು ಒಂದೇ ಪದದಲ್ಲಿ ದಲಿತರ ಐಕ್ಯತೆ ಎನ್ನುತ್ತೇವೆ. ಇದೇಕೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ ?

ಪ್ರತಿಯೊಂದು ದಲಿತ ಬಣವೂ ಈ ಕುರಿತು ಗಂಭೀರ ಆಲೋಚನೆ ಮಾಡಬೇಕಿದೆ. ಸಂವಿಧಾನ ಅಪಾಯದಲ್ಲಿದೆ ಎಂಬ ಗೋಳಾಟ ಮತ್ತು ಸಾಂದರ್ಭಿಕ ಹೋರಾಟಗಳು ಸಂಘಟನಾತ್ಮಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ನೆರವಾಗಬಹುದು ಆದರೆ ನಮ್ಮ ಅಂತಿಮ ಗುರಿ ಇರುವುದು ಬಹುತ್ವದ ರಕ್ಷಣೆಯಲ್ಲಿ. ಸಂವಿಧಾನವನ್ನು ಕಾಪಾಡುವಲ್ಲಿ. ಇದು ಸಾಧ್ಯವಾಗಬೇಕಾದರೆ ಮೊದಲು ದಲಿತರು ಒಂದು ವೇದಿಕೆಗೆ ಬರಬೇಕು. ಅಲ್ಲಿ ಪಿತೃಪ್ರಧಾನತೆ ಇರಕೂಡದು. ಯಜಮಾನಿಕೆ-ಮೇಲರಿಮೆ ಇರಕೂಡದು. ತದನಂತರ ಅಲ್ಪಸಂಖ್ಯಾತರು,, ಮಹಿಳೆಯರು, ಯುವ ಜನಾಂಗ ಮತ್ತು ಎಲ್ ಶೋಷಿತ ಸಮಾಜಗಳನ್ನು ಒಂದುಗೂಡಿಸಲು ಮುನ್ನಡೆಯಬೇಕು. ಈ ಮುನ್ನಡೆಯ ನಡಿಗೆಯಲ್ಲಿ ಅರ್ಧದಷ್ಟು ಸಂಖ್ಯೆಯಲ್ಲಿ ಮಹಿಳೆಯರೇ ಇದ್ದರೆ ಎಷ್ಟು ಚೆಂದ ? ಅಲ್ಲವೇ ?
ಇದು ಅಂಬೇಡ್ಕರ್‌ ಅವರ ಒಳಗೊಳ್ಳುವಿಕೆಯ ಉದಾತ್ತ ಸುಂದರ ಕನಸು. ನಾವು ತುಂಡುತುಂಡಾಗಿ ಆ ಕನಸನ್ನೇ ವೈಭವೀಕರಿಸುತ್ತಾ, ನನಸು ಮಾಡುವ ಯೋಚನೆಯೂ ಇಲ್ಲದೆ ಆರಾಮವಾಗಿದ್ದೇವೆ. ಈ ವಿಚಾರ ಸಂಕಿರಣದ ಆರಂಭದಲ್ಲಿ ಕ್ರಾಂತಿಗೀತೆ ಎಂದು ಹಾಡಿದ “ ಜಯಹೇ ಭಾರತ ಭಾಗ್ಯವಿಧಾತ ” ಕಾವ್ಯಾತ್ಮಕವಾಗಿ ಸುಂದರವಾಗಿದೆ. ಆದರೆ ಈ ಗಾಯನಕ್ಕೆ ಎಲ್ಲರೂ ಎದ್ದುನಿಲ್ಲಲು ನಿರೀಕ್ಷಿಸುವುದು ಅನಪೇಕ್ಷಿತ. ಇದು ನಿಷ್ಠೆಯನ್ನಾಧರಿಸಿದ ಆಳುವ ವರ್ಗಗಳ ಪದ್ಧತಿ. ಊಳಿಗಮಾನ್ಯತೆ ಮತ್ತು ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೂ ಬಂದಿದೆ. ಈಗಾಗಲೇ ಆರಾಧನೆಗೊಳಗಾಗಿ ಉತ್ಸವ ಮೂರ್ತಿಯಾಗಿರುವ ಅಂಬೇಡ್ಕರ್‌ ಅವರನ್ನು ಅಮೂರ್ತಗೊಳಿಸುವಂತಹ ನಡೆ ಇದು. ಅಂಬೇಡ್ಕರ್‌ ನಮ್ಮ ನಡುವೆ ಮತ್ತು ನಮ್ಮೊಳಗೆ ಮೂರ್ತ ರೂಪದಲ್ಲಿರಬೇಕು. ಆಗ ಸಂವಿಧಾನವನ್ನು ಒಳಗಿಳಿಸಿಕೊಂಡು, ಅಂತೀಕರಣಗೊಳಿಸಿಕೊಂಡು (Internalise) ಬಹುತ್ವವನ್ನು ರಕ್ಷಿಸಲು ಸಾಧ್ಯ.

ಇದು ಆತ್ಮಾವಲೋಕನದ ಯುಗ. ಆತ್ಮವಂಚಕರನ್ನು ಸರಿದಾರಿಗೆ ತರುವ ಕಾಲ. ನಮ್ಮಲ್ಲಿ ಸಂಘಬಲ ಇದೆ ಆದರೆ ಅದು ಸಂಘಪರಿವಾರ ಪಾಲಾಗುತ್ತಿದೆ. ಏಕೆಂದರೆ ನಮ್ಮಲ್ಲಿ ಸಂಗ ಪ್ರಜ್ಞೆಯ ಕೊರತೆ ಇದೆ. ಇದರಿಂದ ಹೊರಬರುವುದು ಹೇಗೆ ? ಯೋಚಿಸಬೇಕು. ಹೊರದಾರಿಗಳನ್ನು ಶೋಧಿಸಬೇಕು. ಹೊರಬರುವ ಹೊತ್ತಿನಲ್ಲಿ ಒಳಶೋಧನೆಗೆ ಮುಂದಾಗಬೇಕು. ಆಗ ಮಾತ್ರ ಅಸ್ಥಿರವಾಗುತ್ತಿರುವ ಬಹುತ್ವ-ಸಂವಿಧಾನದ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ನೈತಿಕ ಸ್ಥೈರ್ಯ ನಮಗೆ ಬರಲು ಸಾಧ್ಯ.
-೦-೦-೦-೦-

Tags: #Ambedkarism#BRAmbedkar#ConstitutionalValues#DalitMovement#DalitUnity#HindutvaPolitics#InclusiveIndia#IndianConstitution#Manuvad#PluralIndia#Pluralism#SaveConstitution#WomenRepresentationAmbedkarCommunalismDemocracyequalitypatriarchypratidavaniSocialChangeSocialJustice
Previous Post

ಮುಂದಿನ 5 ದಿನ ರಾಜ್ಯಾದ್ಯಂತ ಮಳೆ ಅಬ್ಬರ: ಬೆಂಗಳೂರಿಗೆ ಬಿ ಅಲರ್ಟ್‌!

Related Posts

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ
ಅಂಕಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

by ಪ್ರತಿಧ್ವನಿ
May 21, 2026
0

(ದಿನಾಂಕ 15 ಮೇ 2026ರಂದು ಡಾ ಬಿ.ಆರ್.‌ ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ...

Read moreDetails
ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

May 18, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

May 11, 2026
ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ

ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ

May 9, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada