ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರ ದಾಂಪತ್ಯ ಜೀವನದ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಅವರನ್ನು ಖುದ್ದಾಗಿ ಭೇಟಿ ಮಾಡಲು ಅವಕಾಶ ಕಲ್ಪಿಸುವಂತೆ ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು.

ಅಧಿಕಾರಿಗಳ ಅನುಮತಿಯ ಮೇರೆಗೆ ವಿಜಯಲಕ್ಷ್ಮಿ ಅವರು ತಮ್ಮ ಮಗನೊಂದಿಗೆ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಭೇಟಿಯಾಗಿ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ಭೇಟಿ ಕುಟುಂಬದ ಮಟ್ಟದಲ್ಲಿ ಭಾವನಾತ್ಮಕ ಕ್ಷಣಗಳಿಗೆ ಕಾರಣವಾಯಿತು ಎನ್ನಲಾಗಿದೆ.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ನಟ ದರ್ಶನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳು ಭಾರೀ ಸದ್ದು ಮಾಡಿದ್ದವು. ಜೈಲಿನ ಜೀವನದಿಂದ ಬೇಸತ್ತು ಅವರು ಆತ್ಮಹತ್ಯೆ ಪ್ರಯತ್ನ ನಡೆಸಿದ್ದಾರೆ ಎಂಬ ಶೀರ್ಷಿಕೆಗಳೊಂದಿಗೆ ಕೆಲ ಸುದ್ದಿಗಳು ಹರಿದಾಡಿದ್ದರಿಂದ ಅಭಿಮಾನಿಗಳಲ್ಲಿ ಆತಂಕ ಉಂಟಾಗಿತ್ತು.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪರಪ್ಪನ ಅಗ್ರಹಾರ ಜೈಲಿನ ಡಿಜಿಪಿ ಅಲೋಕ್ ಕುಮಾರ್, “ಇದು ಸಂಪೂರ್ಣ ಸುಳ್ಳು ಸುದ್ದಿ. ಯಾವುದೇ ಆತ್ಮಹತ್ಯೆ ಯತ್ನ ನಡೆದಿಲ್ಲ. ಅಭಿಮಾನಿಗಳು ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು” ಎಂದು ತಿಳಿಸಿದ್ದಾರೆ.ದರ್ಶನ್ ಅವರಿಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಸಿಗದ ಹಿನ್ನೆಲೆ ಮಾನಸಿಕವಾಗಿ ಬೇಸರಗೊಂಡಿರುವುದು ನಿಜ. ಆದರೆ ಆತ್ಮಹತ್ಯೆ ಯತ್ನದಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ಜೈಲಿನ ನಿಯಮಾನುಸಾರ ತಿಂಗಳಿಗೆ ನೀಡಲಾಗುತ್ತಿರುವ 60 ನಿಮಿಷಗಳ ದೂರವಾಣಿ ಸಂಭಾಷಣೆಯ ಅವಧಿಯನ್ನು ಹೆಚ್ಚಿಸುವಂತೆ ದರ್ಶನ್ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನೂ ಡಿಜಿಪಿ ಅಲೋಕ್ ಕುಮಾರ್ ಬಹಿರಂಗಪಡಿಸಿದರು.





