ಭೋಪಾಲ್ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮಾಜಿ ಮಿಸ್ ಪುಣೆ ಹಾಗೂ ಕಂಟೆಂಟ್ ಕ್ರಿಯೇಟರ್ ಟ್ವಿಶಾ ಶರ್ಮಾ ಪ್ರಕರಣ ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಟ್ವಿಶಾ ಸಾವಿನ ಬಳಿಕ ಅವರ ಅತ್ತೆಮನೆಯವರು ಮಾಡುತ್ತಿರುವ ಆರೋಪಗಳ ವಿರುದ್ಧ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಸತ್ತವರ ಬಗ್ಗೆ ಅಪಪ್ರಚಾರ ಮಾಡುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದ್ದಾರೆ.
ಟ್ವಿಶಾ ಶರ್ಮಾ ಅವರು ಮೇ 12ರಂದು ಭೋಪಾಲ್ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೆಲವೇ ತಿಂಗಳ ಹಿಂದೆ ವಕೀಲ ಸಮರ್ಥ್ ಸಿಂಗ್ ಅವರನ್ನು ವಿವಾಹವಾಗಿದ್ದ ಟ್ವಿಶಾ ಸಾವಿನ ಬೆನ್ನಲ್ಲೇ ವರದಕ್ಷಿಣೆ ಕಿರುಕುಳ ಹಾಗೂ ಮಾನಸಿಕ ಹಿಂಸೆ ಆರೋಪಗಳು ಕೇಳಿಬಂದಿದ್ದವು. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ.

ಇದೀಗ ಟ್ವಿಶಾ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರು ಟ್ವಿಶಾ “ಮಾನಸಿಕ ಅಸ್ವಸ್ಥತೆ ಹೊಂದಿದ್ದರು”, “ಡ್ರಗ್ ವ್ಯಸನಿ” ಆಗಿದ್ದರು ಎಂದು ಮಾಧ್ಯಮಗಳ ಮುಂದೆ ಆರೋಪಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಟ್ವಿಶಾ ಸಂಬಂಧಿ ರಾಶಿ ಶರ್ಮಾ, “ಜೀವಂತ ವ್ಯಕ್ತಿಯನ್ನು ಟೀಕಿಸುವುದೇ ಬೇಸರದ ವಿಷಯ. ಆದರೆ ಮೃತಪಟ್ಟ ಮಹಿಳೆಯೊಬ್ಬಳ ವ್ಯಕ್ತಿತ್ವ ಹತ್ಯೆ ಮಾಡುವುದು ಅತ್ಯಂತ ಅಮಾನವೀಯ” ಎಂದು ಕಿಡಿಕಾರಿದ್ದಾರೆ.
ಟ್ವಿಶಾ ಕುಟುಂಬದವರ ಪ್ರಕಾರ, ವಿವಾಹದ ಬಳಿಕ ಆಕೆ ನಿರಂತರ ಮಾನಸಿಕ ಒತ್ತಡ ಹಾಗೂ ಅವಮಾನಗಳನ್ನು ಎದುರಿಸುತ್ತಿದ್ದರು. ಅಂತಿಮ ದಿನಗಳಲ್ಲಿ ಸ್ನೇಹಿತರಿಗೆ ಕಳುಹಿಸಿದ್ದ ಸಂದೇಶಗಳಲ್ಲೂ “ಈ ಮದುವೆಯಲ್ಲಿ ಸಿಲುಕಿಕೊಂಡಿದ್ದೇನೆ” ಎಂದು ಟ್ವಿಶಾ ಹೇಳಿಕೊಂಡಿದ್ದರು ಎನ್ನಲಾಗಿದೆ. ಕುಟುಂಬಸ್ಥರು ದ್ವಿತೀಯ ಮರಣೋತ್ತರ ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ.
ಇನ್ನೊಂದೆಡೆ, ಟ್ವಿಶಾ ಪತಿ ಸಮರ್ಥ್ ಸಿಂಗ್ ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಬಹುಮಾನ ಘೋಷಿಸಿದ್ದಾರೆ. ಪ್ರಕರಣದ ತನಿಖೆ ಮಧ್ಯಪ್ರದೇಶದ ಹೊರಗೆ ನಡೆಯಬೇಕು ಎಂದು ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ.






