ಬೆಂಗಳೂರು: ರಾಜ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 64ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಜಮಾಯಿಸಿ ನೆಚ್ಚಿನ ನಾಯಕನಿಗೆ ಶುಭಾಶಯ ಕೋರಿದರು. ಕೇಕ್ ಕಟ್ ಮಾಡಿ, ಘೋಷಣೆಗಳನ್ನು ಕೂಗಿ ಡಿಕೆಶಿ ಅಭಿಮಾನಿಗಳು ಸಂಭ್ರಮಿಸಿದರು.

ಖಡಕ್ ನಿರ್ಧಾರಗಳು, ನೇರ ಮಾತು ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಪಕ್ಷದ ಪರ ಬಂಡೆಯಂತೆ ನಿಂತ ನಾಯಕತ್ವದಿಂದ ಡಿ.ಕೆ. ಶಿವಕುಮಾರ್ ರಾಜ್ಯ ರಾಜಕೀಯದಲ್ಲಿ ‘ಟ್ರಬಲ್ ಶೂಟರ್’ ಎಂದೇ ಖ್ಯಾತರಾಗಿದ್ದಾರೆ. ರಾಜ್ಯ ರಾಜಕೀಯ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡಿರುವ ಡಿಕೆಶಿ, ಕಾಂಗ್ರೆಸ್ ಪಕ್ಷದ ಪ್ರಮುಖ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.

ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರು 1980ರ ದಶಕದಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಜೀವನ ಆರಂಭಿಸಿದರು. ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನಾ ಚಾತುರ್ಯದಿಂದ ಕ್ರಮೇಣ ಮೇಲಕ್ಕೇರಿದರು. 1989ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ರಾಜಕೀಯ ಪಯಣ ಆರಂಭಿಸಿದರು. ಆಗ ಅವರಿಗೆ ಕೇವಲ 27 ವರ್ಷ ವಯಸ್ಸು.ನಂತರ 1994, 1999 ಹಾಗೂ 2004ರ ಚುನಾವಣೆಯಲ್ಲೂ ಗೆಲುವು ಸಾಧಿಸಿದ ಅವರು, 2008ರಿಂದ ಕನಕಪುರ ಕ್ಷೇತ್ರವನ್ನು ತಮ್ಮ ರಾಜಕೀಯ ಕೋಟೆಯನ್ನಾಗಿ ರೂಪಿಸಿಕೊಂಡಿದ್ದಾರೆ. 2013, 2018 ಹಾಗೂ 2023ರ ಚುನಾವಣೆಯಲ್ಲೂ ಭರ್ಜರಿ ಗೆಲುವು ದಾಖಲಿಸಿ ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಡಿಕೆ ಶಿವಕುಮಾರ್ ಅವರ ಸಂಘಟನಾ ಶಕ್ತಿ ಮಹತ್ವದ ಪಾತ್ರ ವಹಿಸಿತ್ತು. ಚುನಾವಣಾ ತಂತ್ರ, ಪಕ್ಷದ ಬಲವರ್ಧನೆ ಮತ್ತು ನಾಯಕರ ಒಗ್ಗಟ್ಟಿಗೆ ಶ್ರಮಿಸಿದ ಹಿನ್ನೆಲೆಯಲ್ಲಿ ಮೇ 20, 2023ರಂದು ಅವರು ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಆದರೆ, ಡಿಕೆಶಿ ಅವರ ಮುಂದಿನ ಗುರಿ ಮುಖ್ಯಮಂತ್ರಿ ಹುದ್ದೆ ಎಂಬ ಚರ್ಚೆ ಈಗಾಗಲೇ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆ ನಾಯಕತ್ವ ಬದಲಾವಣೆ ಹಾಗೂ ಪವರ್ ಶೇರಿಂಗ್ ಒಪ್ಪಂದದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಡಿಕೆಶಿಗೆ ಸಿಎಂ ಪಟ್ಟ ಸಿಗುತ್ತಾ?
ಇತ್ತೀಚಿನ ಹಲವು ಕಾರ್ಯಕ್ರಮಗಳಲ್ಲಿ ಡಿಕೆ ಶಿವಕುಮಾರ್ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಸ್ಥಾನಕಾಂಕ್ಷೆ ವ್ಯಕ್ತಪಡಿಸಿದ್ದರು. ಹೈಕಮಾಂಡ್ ನಾಯಕರಿಗೆ ಆಪ್ತರಾಗಿರುವ ಡಿಕೆಶಿಗೆ ಮುಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲೇ ಕುತೂಹಲ ಹುಟ್ಟಿಸಿದೆ.

ಮೇ 20ರಂದು ತುಮಕೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶ ನಡೆಯಲಿದ್ದು, ಈ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ರಾಜಕೀಯ ಬದಲಾವಣೆಗಳು ಸಂಭವಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಡಿಕೆಶಿ ಹುಟ್ಟುಹಬ್ಬದ ಸಂಭ್ರಮದ ನಡುವೆ ಅವರ ರಾಜಕೀಯ ಭವಿಷ್ಯದ ಕುರಿತ ಚರ್ಚೆಯೂ ಜೋರಾಗಿದೆ.






