ಲಖನೌ:
ಸಮಾಜವಾದಿ ಪಕ್ಷದ ಸ್ಥಾಪಕ ಮುಲ್ಯಮ್ ಸಿಂಗ್ ಯಾದವ್ ಅವರ ಪುತ್ರ ಪ್ರತೀಕ್ ಯಾದವ್ ಅವರ ಜೀವನ ಹಾಗೂ ಕುಟುಂಬ ಕಲಹಗಳು ಇದೀಗ ಮತ್ತೆ ಸುದ್ದಿಯಾಗಿವೆ. “ಸೀಕ್ರೆಟ್ ಸನ್, ರೆಬೆಲಿಯಸ್ ವೈಫ್” ಶೀರ್ಷಿಕೆಯಡಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಯಾದವ್ ಕುಟುಂಬದ ಒಳರಾಜಕೀಯ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ಹೊಸ ಚರ್ಚೆಗೆ ಕಾರಣವಾಗಿವೆ.

1988ರಲ್ಲಿ ಸಾಧನಾ ಗುಪ್ತಾ ಅವರಿಂದ ಜನಿಸಿದ ಪ್ರತೀಕ್ ಯಾದವ್, ಆರಂಭಿಕ ವರ್ಷಗಳಲ್ಲಿ ರಾಜಕೀಯದಿಂದ ದೂರವೇ ಉಳಿದಿದ್ದರು. ಶಾಲಾ ದಾಖಲೆಗಳಲ್ಲೂ ತಂದೆಯ ಹೆಸರು ಉಲ್ಲೇಖಿಸಿರಲಿಲ್ಲ ಎಂದು ವರದಿಗಳು ಹೇಳುತ್ತವೆ. 2003ರಲ್ಲಿ ಮಲ್ತಿ ದೇವಿ ನಿಧನದ ಬಳಿಕ ಮುಲಾಯಂ ಸಿಂಗ್ ಯಾದವ್ ಸಾರ್ವಜನಿಕವಾಗಿ ಸಾಧನಾ ಗುಪ್ತಾ ಮತ್ತು ಪ್ರತೀಕ್ ಅವರನ್ನು ತಮ್ಮ ಕುಟುಂಬದ ಭಾಗವಾಗಿ ಒಪ್ಪಿಕೊಂಡಿದ್ದರು. ಇದೇ ವೇಳೆ ಯಾದವ್ ಕುಟುಂಬದಲ್ಲಿ ಉತ್ತರಾಧಿಕಾರ ರಾಜಕೀಯದ ಚರ್ಚೆ ಆರಂಭವಾಗಿತ್ತು.

ಸಮಾಜವಾದಿ ಪಕ್ಷದೊಳಗೆ ಒಂದು ಗುಂಪು ಅಖಿಲೇಶ್ ಯಾದವ್ ಪರ ನಿಂತಿದ್ದರೆ, ಮತ್ತೊಂದು ವಲಯ ಸಾಧನಾ ಗುಪ್ತಾ ಪ್ರಭಾವ ಹೆಚ್ಚುತ್ತಿದೆ ಎಂದು ಭಾವಿಸಿತ್ತು. ಈ ಆಂತರಿಕ ಸಂಘರ್ಷದಲ್ಲಿ ಪ್ರತೀಕ್ ಯಾದವ್ ಹೆಸರು ಸಹ ಎಳೆಯಲ್ಪಟ್ಟಿತ್ತು ಎಂದು ವರದಿಗಳು ಹೇಳಿವೆ. ಆದರೆ ಪ್ರತೀಕ್ ಯಾದವ್ ರಾಜಕೀಯಕ್ಕಿಂತ ಫಿಟ್ನೆಸ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳತ್ತ ಹೆಚ್ಚು ಆಸಕ್ತಿ ತೋರಿದ್ದರು. ಅವರು ಬಾಡಿಬಿಲ್ಡಿಂಗ್ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಯುವಕರಲ್ಲಿ ಗುರುತಿಸಿಕೊಂಡಿದ್ದರು.
2011ರಲ್ಲಿ ಅವರು ಅಪರ್ಣಾ ಬಿಷ್ಠ್ ಅವರನ್ನು ವಿವಾಹವಾಗಿದ್ದರು. ನಂತರ ಅಪರ್ಣಾ ಯಾದವ್ ಬಿಜೆಪಿ ಸೇರಿ ಸಮಾಜವಾದಿ ಪಕ್ಷದ ವಿರುದ್ಧವೇ ಟೀಕೆ ಮಾಡತೊಡಗಿದದ್ದು ಕುಟುಂಬದಲ್ಲಿ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಯಿತು ಎನ್ನಲಾಗಿದೆ. 2024ರಲ್ಲಿ ಅವರು ಉತ್ತರ ಪ್ರದೇಶ ಮಹಿಳಾ ಆಯೋಗದ ಉಪಾಧ್ಯಕ್ಷೆಯಾಗಿಯೂ ನೇಮಕಗೊಂಡಿದ್ದರು.

ಈ ವರ್ಷದ ಜನವರಿಯಲ್ಲಿ ಪ್ರತೀಕ್ ಯಾದವ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪತ್ನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, “ಕುಟುಂಬ ಸಂಬಂಧ ಹಾಳು ಮಾಡಿದ್ದಾರೆ” ಎಂದು ಆರೋಪಿಸಿ ವಿಚ್ಛೇದನದ ಸೂಚನೆ ನೀಡಿದ್ದರು. ಬಳಿಕ ದಂಪತಿ ನಡುವೆ ಸಮಾಧಾನವಾಗಿದೆ ಎನ್ನುವ ಮಾಹಿತಿಯೂ ಹೊರಬಂದಿತ್ತು.ಇತ್ತೀಚೆಗೆ 38ನೇ ವಯಸ್ಸಿನಲ್ಲಿ ಪ್ರತೀಕ್ ಯಾದವ್ ನಿಧನರಾದ ಬಳಿಕ ಅವರ ಜೀವನ, ಕುಟುಂಬ ಕಲಹಗಳು ಹಾಗೂ ರಾಜಕೀಯ ಹಿನ್ನೆಲೆ ಮತ್ತೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ.






