ಚೆನೈ : ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಟಿವಿಕೆ ಮುಖ್ಯಸ್ಥ ನಟ ವಿಜಯ್‌ಗೆ ಇದ್ದ ಅಡೆತಡೆಗಳೆಲ್ಲವೂ ನಿವಾರಣೆಯಾದಂತೆ ಕಾಣುತ್ತಿದೆ. ನಿನ್ನೆಯಷ್ಟೇ ವಿಜಯ್‌ಗೆ ಎಡಪಕ್ಷಗಳಾದ ಸಿಪಿಐ, ಸಿಪಿಐಎಂಗಳು ಬೆಂಬಲ ಘೋಷಿಸಿದ್ದವು. ಆದರೆ ವಿಸಿಕೆ (Viduthalai Chiruthaigal Katchi) ಪಕ್ಷದಲ್ಲಿ ಬೆಂಬಲ ನೀಡುವ ವಿಚಾರದಲ್ಲಿ ಪರ – ವಿರೋಧದ ಚರ್ಚೆಗಳು ನಡೆದಿದ್ದವು. ಆದರೆ ಇದೀಗ ಬೇಷರತ್ ಬೆಂಬಲ ನೀಡುವ ಮೂಲಕ ವಿಜಯ್ ನೇತೃತ್ವದ ಟಿವಿಕೆ ಜಾತ್ಯಾತೀತ ಸರ್ಕಾರದ ಭಾಗವಾಗಲಿದೆ.
ಇನ್ನೂ ಮೂಲಗಳ ಮಾಹಿತಿ ಪ್ರಕಾರ ವಿಸಿಕೆ ಪಕ್ಷದಲ್ಲಿ ಆಂತರಿಕವಾಗಿ ವಿಜಯ್ ಬೆಂಬಲಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಕುರಿತು ಅಧಿಕೃತವಾಗಿ ಘೋಷಣೆಯಷ್ಟೇ ಬಾಕಿ ಉಳಿದಿದೆ. ಎರಡು ಶಾಸಕರನ್ನು ಹೊಂದಿರುವ ವಿಸಿಕೆಯು ವಿಜಯ್ ನೇತೃತ್ವದ ಮೈತ್ರಿಗೆ ಸೇರಿದರೆ ಬಹಮತ ಸಾಬೀತಿಗೆ ದಾರಿ ಸುಗಮವಾಗಲಿದೆ. ಸದ್ಯ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಬೆಂಬಲದೊಂದಿಗೆ ಒಟ್ಟ 116 ಚುನಾಯಿತ ಶಾಸಕರ ಬೆಂಬಲವನ್ನು ಟಿವಿಕೆ ಹೊಂದಿದೆ. ಅಂದುಕೊಂಡಂತೆ ಎಲ್ಲವೂ ಆದರೆ ನಾಳೆಯೇ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.






