ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಯಲ್ಲಿ ವರ್ಷಗಳಿಂದ ಗುಟ್ಟಾಗಿ ನಡೆಯುತ್ತಿದ್ದ ಚಿನ್ನಾಭರಣ ಕಳ್ಳತನದ ಪ್ರಕರಣಕ್ಕೆ ತೆರೆ ಬಿದ್ದಿದೆ. ಬೆಂಗಳೂರಿನ ಶಿವಾಜಿನಗರ ಪೊಲೀಸರ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸತ್ಯ ಹೊರಬಂದಿದ್ದು, ಕಳ್ಳತನ ನಡೆಸಿದ್ದು ಕುಟುಂಬದ ಸಂಬಂಧಿಯೇ ಎಂಬುದು ಬಹಿರಂಗವಾಗಿದೆ.ಈ ಪ್ರಕರಣದಲ್ಲಿ ಸೈಯದ್ ಅಮೀನ್ ಹಾಗೂ ಅವನ ಸ್ನೇಹಿತ ಅಮೀರ್ ಅಹಮದ್ ಬಂಧಿತರಾಗಿದ್ದಾರೆ. ಆರೋಪಿಗಳಿಂದ ಒಂದು ಕಿಲೋಗ್ರಾಂಕ್ಕೂ ಹೆಚ್ಚು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಸುಮಾರು ಒಂದು ಕೋಟಿ ಹದಿಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಳವು ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಬಂಧಿತ ಸೈಯದ್ ಅಮೀನ್ ಸಚಿವರ ತಾಯಿಯ ಹತ್ತಿರದ ಸಂಬಂಧಿಯಾಗಿದ್ದು, ಈ ನಂಟಿನಿಂದ ಮನೆಗೆ ಸುಲಭವಾಗಿ ಪ್ರವೇಶ ಹೊಂದಿದ್ದ. ಇದನ್ನೇ ದುರುಪಯೋಗಪಡಿಸಿಕೊಂಡು 2025ರಿಂದ ಹಂತ ಹಂತವಾಗಿ ಮನೆದಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ. ವಿಶೇಷವಾಗಿ ಮದುವೆ ಸಮಾರಂಭಗಳ ಸಂದರ್ಭಗಳಲ್ಲಿ ಆಭರಣಗಳನ್ನು ಎಗರಿಸುವುದೇ ಅವನ ಚಾಳಿಯಾಗಿತ್ತು.
ಟ್ರಾವೆಲ್ಸ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಆರೋಪಿಗಳು ಸಾಲ ತೀರಿಸಲು ಈ ದುರಾಲೋಚನೆಗೆ ಕೈಹಾಕಿದ್ದರು. ಕಳವು ಮಾಡಿದ ಚಿನ್ನವನ್ನು ಅಡವಿಟ್ಟು ಹಣ ಪಡೆದು, ಅದನ್ನು ಜಮೀನು-ಮನೆ ವ್ಯವಹಾರದಲ್ಲಿ ಹೂಡಿಕೆ ಮಾಡುವ ಯೋಜನೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನದ ಬಳಿಕ ಅಮೀನ್ ವರ್ತನೆ ಶಂಕಾಸ್ಪದವಾಗಿದ್ದು, ಮನೆಗೆ ಬರುವುದನ್ನೇ ನಿಲ್ಲಿಸಿದ್ದ. ಕರೆಗಳಿಗೆ ಪ್ರತಿಕ್ರಿಯಿಸದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಪೊಲೀಸರಿಗೆ ಅನುಮಾನ ಬಂದು ತನಿಖೆ ತೀವ್ರಗೊಳಿಸಲಾಯಿತು. ಕೊನೆಗೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯದ ಸಂಪೂರ್ಣ ಸತ್ಯ ಬಹಿರಂಗವಾಯಿತು.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಂಧಿತರಿಂದ 759 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ. ನಂಬಿದ್ದ ಸಂಬಂಧಿಯೇ ದ್ರೋಹ ಬಗೆದ ಈ ಘಟನೆ ಸಚಿವರ ಕುಟುಂಬವನ್ನು ಬೆಚ್ಚಿಬೀಳಿಸಿದೆ.






