ಬೆಂಗಳೂರುನಲ್ಲಿ ಪೋಕ್ಸೋ ಪ್ರಕರಣದ ಆರೋಪಿಯನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೂಲದ ರಮೇಶ್ ಶ್ರೀಶೈಲ ಪಟ್ಟದಕಲ್ಮಠ (36) ಹತ್ಯೆಯಾದ ವ್ಯಕ್ತಿ. ಆರೋಪಿಗಳು ಹತ್ಯೆ ಮಾಡಿದ ಬಳಿಕ ಶವವನ್ನು ಯಲಹಂಕ ಸಮೀಪದ ಅಲ್ಲಾಳಸಂದ್ರ ರಾಜಕಾಲುವೆಗೆ ಎಸೆದಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ರಮೇಶ್ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದು, ಯಲಹಂಕದ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸಿಸುತ್ತಿದ್ದನು. ರಾಜಕಾಲುವೆಯಲ್ಲಿ ಶವ ಪತ್ತೆಯಾದ ನಂತರ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಡಾ ಬಿ ಆರ್ ಅಂಬೇಡ್ಕರ್ ಆಸ್ಪತ್ರೆನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.ಈ ಪ್ರಕರಣದಲ್ಲಿ ಬಾಲಕಿಯ ತಂದೆಯೇ ಹತ್ಯೆಗೆ ಸೂತ್ರಧಾರನಾಗಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಬಾಲಕಿಯ ತಂದೆಯೊಂದಿಗೆ ಚಿನ್ನಯ್ಯ ಮಾತಪತಿ (29), ಚೇತನ ಮದಾರ (26) ಹಾಗೂ ವಿನಾಯಕ ಗುರುವ (19) ಅವರನ್ನು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ರಮೇಶ್ ಮತ್ತು ಬಾಲಕಿ ಸಂಬಂಧಿಕರಾಗಿದ್ದು, ಇಬ್ಬರ ನಡುವೆ ಪ್ರೀತಿಯ ಸಂಬಂಧ ಇತ್ತು. 2022ರಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ರಮೇಶ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ರಮೇಶ್ ಮತ್ತೆ ಬೆಂಗಳೂರಿಗೆ ಬಂದಿದ್ದಾನೆ.ಮಗಳ ಸುರಕ್ಷತೆ ಬಗ್ಗೆ ಆತಂಕಗೊಂಡ ತಂದೆ ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸಿ, ತನ್ನ ಸ್ನೇಹಿತರನ್ನು ಬೆಂಗಳೂರಿಗೆ ಕಳುಹಿಸಿ ರಮೇಶ್‌ನನ್ನು ಹತ್ಯೆ ಮಾಡಲು ಸೂಚನೆ ನೀಡಿದ್ದಾನೆ. ಆರೋಪಿಗಳು ಮೊದಲು ರಮೇಶ್‌ನನ್ನು ಬಾರ್‌ಗೆ ಕರೆದುಕೊಂಡು ಹೋಗಿ ಬಳಿಕ ಕೊಲೆಗೈದು, ಶವವನ್ನು ಕಾಲುವೆಗೆ ಎಸೆದಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.






