ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮೊದಲ ಬಾರಿಗೆ 108 ಸ್ಥಾನಗಳನ್ನು ಗೆದ್ದು ಅಚ್ಚರಿ ಸಾಧನೆ ಮಾಡಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.ವಿಜಯ್ ಅವರ ಈ ಯಶಸ್ಸು ದೇಶದ ವಿವಿಧ ರಾಜ್ಯಗಳಲ್ಲಿ ಹೊಸ ರಾಜಕೀಯ ಪಕ್ಷಗಳನ್ನು ಸ್ಥಾಪಿಸಲು ಉತ್ಸಾಹ ನೀಡಿದಂತಾಗಿದೆ. ಇದರ ನಡುವೆಯೇ ಕರ್ನಾಟಕದಲ್ಲೂ ಹೊಸ ಪಕ್ಷ ಸ್ಥಾಪನೆಗೆ ಸುಳಿವು ಸಿಕ್ಕಿದೆ. ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವ ಹಿನ್ನೆಲೆ, ಹೊಸ ರಾಜಕೀಯ ಪರ್ಯಾಯದ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಕನ್ನಡದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಗೂ ವಕೀಲ ಜಗದೀಶ್ ಕೆಎನ್, ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. “ನಮ್ಮ ನೇತೃತ್ವದಲ್ಲಿ ಶೀಘ್ರದಲ್ಲೇ ಹೊಸ ಪಕ್ಷವನ್ನು ಆರಂಭಿಸಲಾಗುವುದು” ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.ತಮ್ಮ ಹೇಳಿಕೆಯಲ್ಲಿ ಅವರು, ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಆಡಳಿತದಿಂದ ಜನತೆ ಬೇಸತ್ತಿದ್ದು, ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ಮೊದಲಾದ ಸಮಸ್ಯೆಗಳ ವಿರುದ್ಧ ಜನರ ಪರ ನಿಲ್ಲುವ ಹೊಸ ರಾಜಕೀಯ ಶಕ್ತಿ ಅಗತ್ಯವಿದೆ ಎಂದು ಹೇಳಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಾಮಾನ್ಯ ಜನರ ಪರವಾಗಿ ನಿಲ್ಲುವ ಪಕ್ಷವನ್ನು ಕಟ್ಟುವ ಉದ್ದೇಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದಲ್ಲದೆ, ಧರ್ಮಸ್ಥಳ ವಿಷಯ, ಕಬ್ಬು ಬೆಳೆಗಾರರ ಸಮಸ್ಯೆಗಳು, ಸರ್ಕಾರಿ ಉದ್ಯೋಗ, ಪೊಲೀಸ್ ದೌರ್ಜನ್ಯ ಸೇರಿದಂತೆ ಹಲವು ವಿಷಯಗಳಲ್ಲಿ ಇಂದಿನ ರಾಜಕೀಯ ಪಕ್ಷಗಳು ಜನರ ಪರವಾಗಿ ನಿಲ್ಲುತ್ತಿಲ್ಲ ಎಂಬ ಆರೋಪವನ್ನೂ ಮಾಡಿದ್ದಾರೆ.ತಮಿಳುನಾಡಿನಲ್ಲಿ ಟಿವಿಕೆ ಸಾಧನೆ ಬೆನ್ನಲ್ಲೇ ಕರ್ನಾಟಕದಲ್ಲೂ ಹೊಸ ರಾಜಕೀಯ ಪರ್ಯಾಯದ ಬಗ್ಗೆ ಚರ್ಚೆ ಜೋರಾಗಿದ್ದು, ಜಗದೀಶ್ ಘೋಷಣೆ ಸಾಕಷ್ಟು ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬೆಂಬಲ ವ್ಯಕ್ತಪಡಿಸಿದ್ದು, ಹೊಸ ಪಕ್ಷದ ಪ್ರಣಾಳಿಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.






