ಸುಲಭವಾಗಿ ಗೆಲ್ಲಬಹುದಾಗಿದ್ದ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡ ಹಿನ್ನೆಲೆ ಬಾಗಲಕೋಟೆ ಪಕ್ಷ ಪಾಳಯದಲ್ಲಿ ತೀವ್ರ ಆತ್ಮಾವಲೋಕನ ಆರಂಭವಾಗಿದೆ. ಭದ್ರಕೋಟೆಯಲ್ಲೇ ಕಮಲ ಬಾಡಲು ಕಾರಣವೇನು ಎಂಬ ಪ್ರಶ್ನೆ ನಾಯಕರನ್ನೇ ಕಾಡುತ್ತಿದೆ.ಈ ಸೋಲಿಗೆ ವಿರೋಧ ಪಕ್ಷದ ಬಲಿಷ್ಠ ಪ್ರಚಾರಕ್ಕಿಂತಲೂ ಸ್ವಪಕ್ಷದ ಸ್ಟಾರ್ ನಾಯಕರ ವಿವಾದಾತ್ಮಕ ಹೇಳಿಕೆಗಳೇ ಪ್ರಮುಖ ಕಾರಣ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಪ್ರಚಾರಕ್ಕೆ ಬಂದ ಕೆಲ ನಾಯಕರ ಮಾತುಗಳು ಅಹಿಂದ ಮತಗಳನ್ನು ದೂರ ಮಾಡಿದ್ದು, ಬಿಜೆಪಿಗೆ ಬರಬೇಕಿದ್ದ ಮತಗಳು ಕೈತಪ್ಪುವಂತಾಗಿದೆ ಎಂದು ಸ್ಥಳೀಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪ್ರಚಾರದ ವೇಳೆ ನೀಡಿದ ಹೇಳಿಕೆಗಳಿಂದಲೇ ಸೋಲು ಸಂಭವಿಸಿತೇ ಎಂಬ ಚರ್ಚೆ ಜೋರಾಗಿದೆ. ವಿಶೇಷವಾಗಿ ಸಿಸಿ ಪಾಟೀಲ್, ಪ್ರತಾಪ್ ಸಿಂಹ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗಳು ಪಕ್ಷಕ್ಕೆ ಮುಳುವಾಯಿತೇ ಎಂಬ ಪ್ರಶ್ನೆ ಎದ್ದಿದೆ.ಮಾಜಿ ಸಚಿವ ಸಿಸಿ ಪಾಟೀಲ್ ನೀಡಿದ ಕೆಲವು ಹೇಳಿಕೆಗಳು ಎರಡು ಪ್ರಮುಖ ಸಮುದಾಯಗಳನ್ನು ಬಿಜೆಪಿ ವಿರುದ್ಧ ತಿರುಗಿಸಿವೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಕುರಿತು ನೀಡಿದ ಟೀಕೆಗಳು ಕುರುಬ ಸಮುದಾಯದ ಅಸಮಾಧಾನಕ್ಕೆ ಕಾರಣವಾದರೆ, ಅಲ್ಪಸಂಖ್ಯಾತರ ಬಗ್ಗೆ ಮಾಡಿದ ಹೇಳಿಕೆಗಳು ಮತಗಳ ಮೇಲೆ ಪರಿಣಾಮ ಬೀರಿವೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಪ್ರತಾಪ್ ಸಿಂಹ ಅವರ ವೈಯಕ್ತಿಕ ಟೀಕೆಗಳು ಸುಮಾರು 35 ಸಾವಿರ ಕುರುಬ ಮತಗಳನ್ನು ಬಿಜೆಪಿ ವಿರುದ್ಧ ಕೊಂಡೊಯ್ದವು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಸಮುದಾಯದ ಮತದಾರರು ಒಗ್ಗಟ್ಟಾಗಿ ಕಾಂಗ್ರೆಸ್ ಪರ ನಿಂತ ಪರಿಣಾಮ ಬಿಜೆಪಿ ಹಿನ್ನಡೆ ಅನುಭವಿಸಿತು ಎನ್ನಲಾಗುತ್ತಿದೆ.ಬಸನಗೌಡ ಪಾಟೀಲ್ ಯತ್ನಾಳ್ ಅವರ ನಡೆ ಕೂಡ ಪಕ್ಷದೊಳಗಿನ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಚಾರದ ವೇಳೆ ಸ್ವಪಕ್ಷ ನಾಯಕರನ್ನೇ ಟೀಕಿಸಿದ ಹೇಳಿಕೆಗಳು ಹಾಗೂ ಹಿರಿಯ ನಾಯಕರ ವಿರುದ್ಧ ಕಿಡಿಕಾರಿದ ಮಾತುಗಳು ಮತದಾರರಿಗೆ ತಪ್ಪು ಸಂದೇಶ ನೀಡಿವೆ. ಇದರಿಂದ ಲಿಂಗಾಯತ ಮತಗಳ ಮೇಲೂ ಪರಿಣಾಮ ಬೀರಿದೆ ಎಂದು ಪಕ್ಷದ ಒಳವಲಯದಲ್ಲಿ ಮಾತುಕತೆ ನಡೆಯುತ್ತಿದೆ.

ಸ್ಥಳೀಯ ನಾಯಕರು ನಡೆಸಿದ ಒಳಚರ್ಚೆಗಳಲ್ಲಿ ಈ ಅಸಮಾಧಾನ ಸ್ಪಷ್ಟವಾಗಿ ಹೊರಬಂದಿದ್ದು, “ಪ್ರಚಾರಕ್ಕೆ ಬಂದ ನಾಯಕರು ಗೆಲುವಿಗೆ ನೆರವಾಗುವ ಬದಲು ಸೋಲಿಗೆ ಕಾರಣರಾದರು” ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದೀಗ ಈ ‘ಸೆಲ್ಫ್ ಗೋಲ್’ ಕುರಿತು ಬಿಜೆಪಿ ಹೈಕಮಾಂಡ್ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.






