ಬೆಂಗಳೂರು : ಅಸ್ಸಾಂನಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಇನ್ನೂ ಯಾವುದೇ ಸ್ಥಾನದಲ್ಲಿ ಮುನ್ನಡೆ ಸಾಧಿಸಿಲ್ಲ. ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಮುಂದಿದೆ. ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಹುಮ್ಮಸ್ಸಿನಿಂದ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ಪಡೆದಿತ್ತು. ಹಾಲಿ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಯುವ ಮತಗಳನ್ನು ಕೇಂದ್ರಿಕರಿಸಿ ತಮ್ಮ ಮತಬೇಟೆ ನಡೆಸಿದ್ದರು. ಅಲ್ಲದೆ ಕೇಂದ್ರದ ಮೋದಿ ಸರ್ಕಾರದ ಸಾಧನೆಯನ್ನು ಹಾಗೂ ಅಸ್ಸಾಂ ಸರ್ಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದರು. ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಮೂಲಕ ರಾಹುಲ್ ಗಾಂಧಿಗೆ ಶಾಕ್ ನೀಡಿದ್ದರು.

ಅಸ್ಸಾಂ ರಾಜಕೀಯ ಹೇಗಿತ್ತು..?
ಇನ್ನೂ ಪ್ರಮುಖವಾಗಿ ಈಶಾನ್ಯದ ಹೆಬ್ಬಾಗಿಲು ಈ ರಾಜ್ಯದಲ್ಲಿ 15 ವಿಧಾನಸಭೆ ಚುನಾವಣೆಗಳು ಜರುಗಿವೆ. ಕಳೆದ 1952ರಿಂದ 1972ರ ವರೆಗೆ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಬಳಿಕ 1978ರಿಂದ 2016ರ ವರೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಅಸ್ಸಾಂ ಗಣ ಪರಿಷತ್, ಕಾಂಗ್ರೆಸ್ ಅಧಿಕಾರ ನಡೆಸಿವೆ. 2001ರಿಂದ 2011ರ ವರೆಗೆ ಸತತ ಮೂರು ಬಾರಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿತ್ತು.
ಅಲ್ಲದೆ 2016, 2021ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಸತತ ಎರಡು ಬಾರಿ ಅಧಿಕಾರದಲ್ಲಿತ್ತು. 2011ರಲ್ಲಿ ಶೇ. 76ರಷ್ಟು ಮತದಾನದೊಂದಿಗೆ ಕಾಂಗ್ರೆಸ್ ಪಕ್ಷ ಗದ್ದುಗೆ ಹಿಡಿದಿತ್ತು.
ಬಳಿಕ 2016ರಲ್ಲಿ ಶೇ.84.72ರಷ್ಟು ಮತದಾನವಾಗಿ, ಸುಮಾರು ಶೇ.8ರಷ್ಟು ಮತದಾನ ಪ್ರಮಾಣದ ಅಧಿವಾಗುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಹೊರಗಿಟ್ಟು ಬಿಜೆಪಿ ಮೊದಲ ಸಲ ಬಾರಿಗೆ ಅಧಿಕಾರವನ್ನು ಪಡೆದಿತ್ತು. 2021ರಲ್ಲಿ ಶೇ.2ರಷ್ಟು ಮತ ಪ್ರಮಾಣ ಕುಸಿದರೂ ಶೇ.8ರಷ್ಟು ಬಿಜೆಪಿ ಮರಳಿ ಅಧಿಕಾರಕ್ಕೇರಿತು. 2026ರಲ್ಲಿ ಶೇ.86ರಷ್ಟು ಮತದಾನವಾಗಿದೆ. ಅಂದರೆ, ಶೇ.4ರಷ್ಟು ಹೆಚ್ಚಿರುವ ಮತ ಪ್ರಮಾಣ ಯಾರಿಗೆ ಅಧಿಕಾರ ನೀಡಲಿದೆ ಎಂಬ ಕುತೂಹಲ ಮೂಡಿಸಿದೆ.
ಶರ್ಮಾ Vs ಗೋಗೋಯ್..!
ಅಸ್ಸಾಂನಲ್ಲಿ ಬಿಜೆಪಿ 3ನೇ ಬಾರಿ ಗೆಲ್ಲುವ ತವಕದಲ್ಲಿದ್ದರೆ, ಕಾಂಗ್ರೆಸ್ ಪಕ್ಷ 10 ವರ್ಷಗಳ ಜಯದ ಬರ ನೀಗಿಸುವ ಇರಾದೆ ಹೊಂದಿದೆ. ರಾಜ್ಯದ 126 ವಿಧಾನಸಭಾ ಕ್ಷೇತ್ರಗಳಲ್ಲಿ 722 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹಾಲಿ ಸಿಎಂ, ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ 3ನೇ ಬಾರಿ ಸಿಎಂ ಆಗುವ ಇರಾದೆ ಹೊಂದಿದ್ದಾರೆ. ಕಾಂಗ್ರೆಸ್‌ನ ಗೌರವ್ ಗೊಗೋಯ್ ಮೊದಲ ಬಾರಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಮರಳಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. ಆರಂಭದಲ್ಲಿ ಬಿಜೆಪಿ 69 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸುತ್ತಿದೆ. ಕಾಂಗ್ರೆಸ್ 9 ಸ್ಥಾನಗಳಲ್ಲಿ ಮುನ್ನಡೆಯಿದೆ.






