• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು

ಮಹಿಳಾ ಮೀಸಲಾತಿ ಸಾಮಾಜಿಕ ಜವಾಬ್ದಾರಿಯಾದರೆ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ

ಪ್ರತಿಧ್ವನಿ by ಪ್ರತಿಧ್ವನಿ
April 27, 2026
in ಅಂಕಣ
0
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

( ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ ಲೇಖನಗಳ ಮುಂದುವರಿಕೆ )

ಮಹಿಳಾ ಮೀಸಲಾತಿಯ 131ನೆ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯ ಅನುಮೋದನೆ ಪಡೆಯುವುದರಲ್ಲಿ ವಿಫಲವಾಗಿರುವುದು ಎರಡು ನಿರ್ಣಾಯಕ ಅಂಶಗಳನ್ನು ಸ್ಪಷ್ಟಪಡಿಸುತ್ತದೆ. ಮೊದಲನೆಯದು ಬಿಜೆಪಿ ಭಾವಿಸಿದಂತೆ ಅಥವಾ ಇತರ ಮಸೂದೆಗಳನ್ನು ಬುಲ್ಡೋಜ್‌ ಮಾಡಿದ ಹಾಗೆ ಈ ಮಸೂದೆಯನ್ನು ಮುನ್ನುಗ್ಗಿಸಲು ಸಾಧ್ಯವಾಗಿಲ್ಲ, ಇದು ಪ್ರಜಾಪ್ರಭುತ್ವದ ವಿಜಯ ಎಂದೇ ಹೇಳಬಹುದು. ಎರಡನೆಯದು ಲೋಕಸಭೆಯಲ್ಲಿ ಕಂಡುಬಂದ ವಿರೋಧ ಪಕ್ಷಗಳ ಸಾಂದರ್ಭಿಕ ಒಗ್ಗಟ್ಟಿನ ಹಿಂದೆ ದೇಶದ ಮಹಿಳಾ ಸಂಘಟನೆಗಳ ಬಲವಾದ ಪ್ರತಿರೋಧದ ದನಿ ಅಡಗಿದೆ. ಇದನ್ನು ನಿರಾಕರಿಸಲು ಸಾಧ್ಯವೇ ಇಲ್ಲ.

ಬಿಜೆಪಿಯ ಡಬಲ್‌ ಇಂಜಿನ್‌ ಸರ್ಕಾರದ ತತ್ವಕ್ಕೆ ಪೂರಕವಾಗಿ ಮಹಿಳಾ ಮಸೂದೆಯ ಸಂದರ್ಭದಲ್ಲಿ ಡಬಲ್‌ ಗೇಮ್‌ ಆಡಿರುವುದು ಗುಟ್ಟಿನ ಮಾತೇನಲ್ಲ. ಮಸೂದೆ ಗೆದ್ದರೆ ಕೀರ್ತಿ ತನ್ನದಾಗಿಸಿಕೊಂಡು ಜನರನ್ನು ಓಲೈಸಬಹುದು, ಸೋತರೆ ಸೋಲಿಸಿದ ಅಪಕೀರ್ತಿಗೆ ವಿರೋಧ ಪಕ್ಷಗಳನ್ನು ಈಡುಮಾಡಿ ಜನರನ್ನು ಮರಳು ಮಾಡಬಹುದು.
ಇದನ್ನೇ ರಾಜಕಾರಣ ಅಥವಾ ಚಾಣಕ್ಯ ನೀತಿ ಎನ್ನುವುದು. ಏನೇ ಆಗಲಿ ಮಹಿಳಾ ಮೀಸಲಾತಿ ಮಸೂದೆಯ ಚರಿತ್ರೆಯನ್ನು ಗಮನಿಸಿದಾಗ, ಸ್ವತಂತ್ರ ಭಾರತದ ಪಿತೃಪ್ರಧಾನ ಆಳ್ವಿಕೆಯ ಒಳಹುಳುಕುಗಳೂ ಸಹ ಒಂದೊಂದಾಗಿ ಹೊರಬರುತ್ತವೆ. ವಿಡಂಬನೆ ಎಂದರೆ ಸ್ವತಂತ್ರ ಭಾರತದ ಸರ್ಕಾರದಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸುವುದು ಸಾಂವಿಧಾನಿಕ ಚರ್ಚೆಗಳ (Constitutional Debates) ಪ್ರಮುಖ ಭಾಗವಾಗಿತ್ತು. ಆದರೆ ಸಂವಿಧಾನ ಸಭೆಯ (Consituent Assembly) 299 ಸದಸ್ಯರ ಪೈಕಿ ಮಹಿಳೆಯರ ಸಂಖ್ಯೆ 15 ಮಾತ್ರ. ಅಂದರೆ ಶೇಕಡಾ 5ರಷ್ಟು. ಈ ವಿರೋಧಾಭಾಸಕ್ಕೆ ಹಲವು ಚಾರಿತ್ರಿಕ ಕಾರಣಗಳೂ ಇರಬಹುದಾದರೂ ಆ ಸಮಯದಲ್ಲೂ ಪಿತೃಪ್ರಧಾನ ಮೌಲ್ಯಗಳ ಪ್ರಾಬಲ್ಯವನ್ನು ಇದು ಸೂಕ್ಷ್ಮವಾಗಿ ಎತ್ತಿ ತೋರಿಸುತ್ತದೆ. 2026ರಲ್ಲಿ ನಿಂತು ನೋಡಿದಾಗಲೂ ರಾಜಕೀಯ ಪಕ್ಷಗಳ-ಸರ್ಕಾರಗಳ ನಿರ್ಣಾಯಕ ಘಟಕಗಳಲ್ಲಿ ಮಹಿಳಾ ಪ್ರಾತಿನಿಧ್ಯ ಇಲ್ಲದಿರುವುದು ಎದ್ದುಕಾಣುತ್ತದೆ.

ಸಮಾನತೆಯ ದನಿಗೆ ಮಾನ್ಯತೆ
1974ರಲ್ಲಿ ವೀಣಾ ಮಜುಂದಾರ್ ಮತ್ತು ಲೋತಿಕಾ ಸರ್ಕಾರ್‌ ಮುಂತಾದವರನ್ನೊಳಗೊಂಡ ಸಮಿತಿಯು ʼ ಸಮಾನತೆಯೆಡೆಗೆ ʼ (Towards Equality) ಎಂಬ ಸಮಗ್ರ ಸಂಶೋಧನಾ ವರದಿಯನ್ನು ಸರ್ಕಾರದ ಮುಂದೆ ಮಂಡಿಸುವವರೆಗೂ, ಭಾರತದ ಆಳುವ ವರ್ಗಗಳಿಗೆ ಮಹಿಳಾ ಸಮುದಾಯದ ಸ್ಥಿತಿಗತಿಗಳಾಗಲೀ, ಆತಂಕಗಳಾಗಲೀ, ಆಂತರಿಕ ತಳಮಳಗಳಾಗಲೀ ಅರಿವಿಗೇ ಬಂದಿರಲಿಲ್ಲ ಎನ್ನುವುದು ತದನಂತರದ ಕ್ಷಿಪ್ರ ಬೆಳವಣಿಗೆಗಳಿಂದ ಸಾಬೀತಾಗುತ್ತದೆ. 1947-48 ರಿಂದ 1974ರವರೆಗೆ ಯಾವ ರಾಜಕೀಯ ಪಕ್ಷಗಳೂ ಸಹ ಶೇಕಡಾ 33 ಮಹಿಳಾ ಮೀಸಲಾತಿಯನ್ನು ಆಗ್ರಹಿಸಲೇ ಇಲ್ಲ ಎನ್ನುವುದು ಚಾರಿತ್ರಿಕ ವ್ಯಂಗ್ಯ ಆದರೆ ಕಟು ವಾಸ್ತವ. ವಿಡಂಬನೆ ಎಂದರೆ 1972ರಲ್ಲಿ ನಡೆದ ಮಥುರಾ ಅತ್ಯಾಚಾರ ಪ್ರಕರಣದವರೆಗೂ, ಮಹಿಳಾ ದೌರ್ಜನ್ಯಗಳು ಸಹ ನಮ್ಮ ಸಾಂವಿಧಾನಿಕ ಪ್ರಜ್ಞೆಯನ್ನು ಕಾಡಲೇ ಇಲ್ಲ.

ಇಂದು ನಾವು ಕಾಣುತ್ತಿರುವ ಅನೇಕ ಮಹಿಳಾ ಹಕ್ಕುಗಳ ಕಾಯ್ದೆಗಳಿಗೆ ಅಡಿಪಾಯ ಹಾಕಿದ್ದು ʼ ಸಮಾನತೆಯೆಡೆಗೆ ʼ ಎಂಬ ವರದಿ. ಮಹಿಳಾ ಮೀಸಲಾತಿಯೂ ಸಹ ಇದರ ಒಂದು ಭಾಗ. ಏಕೆಂದರೆ ಈ ವರದಿಯಲ್ಲಿ ಮೊಟ್ಟಮೊದಲ ಬಾರಿಗೆ ಆಳ್ವಿಕೆಯ ಕೇಂದ್ರಗಳಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯನ್ನು ಎತ್ತಿ ತೋರಿಸಲಾಗಿತ್ತು. ತದನಂತರವೇ ಸಂವಿಧಾನ ರಚನಾ ಸಭೆಯಲ್ಲಿ ಪ್ರಸ್ತಾಪವಾಗಿದ್ದ ಶೇಕಡಾ 33ರ ಮೀಸಲಾತಿ ರಾಜಕೀಯ ಸಂಕಥನದ ಒಂದು ಭಾಗವಾಗಿತ್ತು. ಆದರೆ ಈ ಪ್ರಸ್ತಾವನೆಯ ಹೊರತಾಗಿಯೂ ಪಂಚಾಯತ್‌, ಪುರಸಭೆ, ನಗರಸಭೆ ಇತ್ಯಾದಿ ಸ್ಥಳಿಯ ಸಂಸ್ಥೆಗಳಲ್ಲಿ (Local Bodies) ಮಹಿಳೆಯರ ಪ್ರಾತಿನಿಧ್ಯಕ್ಕಾಗಿ ಶಾಸನಾತ್ಮಕ ಕ್ರಮ ಕೈಗೊಂಡಿದ್ದು 1992ರಲ್ಲಿ, ಸಂವಿಧಾನ ತಿದ್ದುಪಡಿ 73 ಮತ್ತು 74ರ ಮುಖಾಂತರ.

ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಶೇಕಡಾ 33ರ ಮಹಿಳಾ ಮೀಸಲಾತಿಗೆ ಜೀವ ಬಂದಿದ್ದು 1996ರಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ 81ರ ಮುಖಾಂತರ. 1998, 1999, 2003 ಮತ್ತು 2004ರಲ್ಲಿ ಈ ಮಸೂದೆಯನ್ನು ಪುನಃ ಮಂಡಿಸಲಾದರೂ ಇದು ಅನುಮೋದನೆಯಾಗಲಿಲ್ಲ 2008ರಲ್ಲಿ ಮಸೂದೆ ತನ್ನ ಮಾನ್ಯತೆ ಕಳೆದುಕೊಳ್ಳಕೂಡದು ಎಂಬ ಕಾರಣಕ್ಕೆ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿತ್ತು. 2010ರಲ್ಲಿ ರಾಜ್ಯಸಭೆಯ ಅನುಮೋದನೆ ಪಡೆದರೂ ಲೋಕಸಭೆಯಲ್ಲಿ ಮನ್ನಣೆ ಪಡೆಯಲಿಲ್ಲ. ಆ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಕಲ್ಪನೆಯನ್ನೇ, ರಾಜಕೀಯ-ಜಾತಿ ಸಮೀಕರಣದ ಕಾರಣಗಳಿಂದ, ವಿರೋಧಿಸಿದವರು ಇಂದು ಬಿಜೆಪಿಯಲ್ಲಿರುವುದು ಮತ್ತೊಂದು ವಿಡಂಬನೆ.

ಚುನಾಯಿತ ಸರ್ಕಾರಗಳ ನಿರಾಸಕ್ತಿ
ಭಾರತದ ನಾರಿಯರು ಸ್ವಾತಂತ್ರ್ಯಪೂರ್ವದಿಂದಲೂ ಆಗ್ರಹಿಸುತ್ತಿರುವುದು ಆಳ್ವಿಕೆಯ ಪ್ರಾತಿನಿಧ್ಯಕ್ಕಾಗಿ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಸಮಸ್ತ ನಾರಿಯರಿಗೆ ವಂದಿಸುವ ತೀರ್ಮಾನಕ್ಕೆ ಬಂದಿದ್ದು, ಬದಲಾದ ರಾಜಕೀಯ ಚಿತ್ರಣಕ್ಕೆ ಸಾಕ್ಷಿಯಾಗಿದೆ. 2023ರ ನಾರಿ ಶಕ್ತಿ ವಂದನ್‌ ಅಧಿನಿಯಮ ಮಸೂದೆ ಆ ಕ್ಷಣದಲ್ಲೇ ಉಭಯ ಸದನಗಳ ಅನುಮೋದನೆ ಪಡೆದರೂ ಸಹ, ಮೀಸಲಾತಿ ಕೋಟಾದಲ್ಲಿ ಒಬಿಸಿ ಮಹಿಳೆಯರಿಗೂ ಪ್ರತ್ಯೇಕ ಪಾಲು ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿತ್ತು. ಹಾಗಾಗಿ ಸರ್ವಾನುಮತದ ಹೊರತಾಗಿಯೂ ಒಂದು ಮಸೂದೆ ಅನುಷ್ಟಾನವಾಗದ ಚಾರಿತ್ರಿಕ ದಾಖಲೆಗೆ ಮಹಿಳಾ ಮೀಸಲಾತಿ ಮಸೂದೆ ಸಾಕ್ಷಿಯಾಯಿತು. ಇದೇ ಮಸೂದೆಯನ್ನು 2026ರಲ್ಲಿ 131ನೆ ಸಂವಿಧಾನ ತಿದ್ದುಪಡಿ ಮಸೂದೆಯಾಗಿ ಮಂಡಿಸಿದ ನರೇಂದ್ರ ಮೋದಿ ಸರ್ಕಾರ, ಚುನಾವಣಾ ಕ್ಷೇತ್ರ ಪುನರ್‌ ವಿಂಗಡನೆಯ (Delimitation) ಪ್ರಸ್ತಾಪವನ್ನೂ ಮುಂದಿಟ್ಟ ಕಾರಣ ವಿರೋಧ ಪಕ್ಷಗಳು ಈ ಮಸೂದೆಯನ್ನು ಸೋಲಿಸಿದ್ದವು.

1996 ರಿಂದ 2026, ಈ ಮೂರು ದಶಕಗಳಲ್ಲಿ ಎಂಟು ಸರ್ಕಾರಗಳು, ಐವರು ಪ್ರಧಾನಮಂತ್ರಿಗಳ ಮೂಲಕ ಆಳ್ವಿಕೆ ನಡೆಸಿವೆ. ಬಹುಮಟ್ಟಿಗೆ ಎಲ್ಲ ಪಕ್ಷಗಳೂ ಈ ಅವಧಿಯಲ್ಲಿ ಕೇಂದ್ರಾಡಳಿತದ ಭಾಗವಾಗಿ ಅಲ್ಪಾವಧಿಗಾದರೂ ಪ್ರಾತಿನಿಧ್ಯ ಪಡೆದುಕೊಂಡಿವೆ. ಆದರೆ ಮಹಿಳಾ ಮೀಸಲಾತಿ ಒಂದು ಆದ್ಯತೆಯಾಗಿ ಕಾಣಲೇ ಇಲ್ಲ. ಮಹಿಳಾ ಪ್ರಾತಿನಿಧ್ಯವನ್ನು ರಾಜಕೀಯ ಅಸ್ತ್ರವನ್ನಾಗಿ ಪರಿಗಣಿಸುವ ಮೂಲಕ ಕೇಂದ್ರ ಎನ್‌ಡಿಎ ಸರ್ಕಾರ ಮತ್ತೊಮ್ಮೆ ಮಹಿಳೆಯರನ್ನು ರಾಜಕೀಯ ಚದುರಂಗದಾಟದ ಆಟಕಾಯಿಗಳಂತೆ ಬಳಸುತ್ತಿದೆ. 2029ರ ಮಹಾ ಚುನಾವಣೆಗಳಿಗೂ ಮುನ್ನ ಹೇಗಾದರೂ ಈ ಮಸೂದೆಯನ್ನು ಕಾಯ್ದೆಯಾಗಿ ಜಾರಿಗೊಳಿಸುವ ಆಶ್ವಾಸನೆಯನ್ನು ಪ್ರಧಾನಮಂತ್ರಿ ನೀಡಿದ್ದಾರೆ. ಆದರೆ ಹೇಗೆ ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ. ಸರ್ವ ಪಕ್ಷಗಳ ಸಮ್ಮತಿ ಇರುವ ಮಸೂದೆಯೊಂದು ಇಷ್ಟು ವಿಳಂಬವಾಗುತ್ತಿರುವುದೇ, ಆಂತರಿಕವಾಗಿ ಪಿತೃಪ್ರಧಾನ ಧೋರಣೆ ಗಟ್ಟಿಯಾಗಿರುವುದನ್ನು ಸೂಚಿಸುತ್ತದೆ.

ಪ್ರಸ್ತುತ ಮಹಿಳಾ ಮೀಸಲಾತಿ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂದು ಯೋಚಿಸುವುದಕ್ಕೂ ಮುನ್ನ ಹಿಂತಿರುಗಿ ನೋಡಿದರೆ ಮತ್ತೊಂದು ಅಚ್ಚರಿಯ ಸಂಗತಿ ಕಾಣುತ್ತದೆ. ಸಂವಿಧಾನ ರಚನಾ ಸಭೆಯಲ್ಲೇ ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸುವ ಚರ್ಚೆಯಾಗಿತ್ತಲ್ಲವೇ ? ಕಾರಣಾಂತರಗಳಿಂದ ಅದು ಮೊದಲ ಹೆಜ್ಜೆಯಲ್ಲೇ ಸಾಕಾರಗೊಳ್ಳಲಿಲ್ಲ. ವಿಚಿತ್ರ ಎಂದರೆ 1974ರ ʼಸಮಾನತೆಯೆಡೆಗೆʼ (Towards Equality ) ವರದಿ ದೇಶದಲ್ಲಿ ವ್ಯಾಪಕ ಚರ್ಚೆಗೊಳಗಾದ ನಂತರದಲ್ಲೂ, ಬಹುಶಃ 1990ರ ದಶಕದವರೆಗೆ ಯಾವುದೇ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ “ ಮಹಿಳೆಯರಿಗೆ ಶೇಕಡಾ ಮೀಸಲಾತಿ ” ನೀಡುವ ಆಶ್ವಾಸನೆಯನ್ನು ಕಾಣಲಾಗುವುದಿಲ್ಲ. ಎಡಪಕ್ಷಗಳ ಪ್ರಣಾಳಿಕೆಯಲ್ಲೂ ಬಹುಶಃ ಇರಲಾರದು (ಹಾಗೊಮ್ಮೆ ಇದ್ದರೆ ಓದುಗರು ಸ್ಪಷ್ಟಪಡಿಸಬಹುದು).

ಆಂತರಿಕ ವೈರುಧ್ಯಗಳು
ಏಕೆ ಹೀಗಾಯಿತು ? 1952ರ ಚುನಾವಣೆಗಳಿಂದಲೇ ʼ ಮಹಿಳಾ ಸಬಲೀಕರಣ-ಸಮಾನತೆ ʼಯನ್ನು ಪ್ರಖರವಾಗಿ ಪ್ರತಿಪಾದಿಸುತ್ತಿರುವ ಎಡಪಕ್ಷಗಳು, ಕಾಂಗ್ರೆಸ್‌ ಮತ್ತು 1960ರ ದಶಕದ ನಂತರ ಉದಯಿಸಿದ ಪ್ರಾದೇಶಿಕ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಏಕೆ ಪ್ರಸ್ತಾಪಿಸಲಿಲ್ಲ ? ಈ ಪ್ರಶ್ನೆಯನ್ನು ಇಂದು ಬಲವಂತವಾಗಿ ಕೇಳಲೇಬೇಕಿದೆ. ಪಕ್ಷಗಳು ಆತ್ಮಾವಲೋಕನದ ನೆಲೆಯಲ್ಲಿ ಉತ್ತರಿಸಬೇಕಿದೆ. ʼ ಸಮಾನತೆ-ಸಬಲೀಕರಣ ʼದ ಆಗ್ರಹ ಮೀಸಲಾತಿಯನ್ನೂ ಒಳಗೊಂಡಿರುತ್ತದೆ ಎಂಬ ಜಾಣ್ಮೆಯ ಸಬೂಬು ಅಗತ್ಯವಿಲ್ಲ. ವಸ್ತುನಿಷ್ಠವಾಗಿ, ಸಂವಿಧಾನದಲ್ಲಿ ಪ್ರಸ್ತಾಪಿಸಲಾಗಿದ್ದ ಈ “ ಸಬಲೀಕರಣ ” ಕ್ರಮದ ಔದಾತ್ಯವನ್ನು ಅರಿತು ಕನಿಷ್ಠ ಪ್ರಣಾಳಿಕೆಗಳ ಮೂಲಕ ಚುನಾವಣಾ ಆಶ್ವಾಸನೆ ನೀಡಲು, ಅಧಿಕೃತ ಮಹಿಳಾ ಮೀಸಲಾತಿ ಮಸೂದೆ ಬರಬೇಕಾಯಿತೇ ? ಈ ಮಸೂದೆಯಲ್ಲೂ ರಾಜ್ಯಸಭೆ ಮತ್ತು ರಾಜ್ಯ ವಿಧಾನ ಪರಿಷತ್ತುಗಳನ್ನು ಹೊರಪಡಿಸಿರುವುದು ಏಕೆ ರಾಜಕೀಯ ಸಂಕಥನದ ಒಂದು ಭಾಗವಾಗಿಲ್ಲ ? ಈ ಪ್ರಶ್ನೆಗಳಿಗೆ ಉತ್ತರಿಸುವವರಾರು ?

ಈ ವಿರೋಧಾಭಾಸದ ಒಂದು ಕಾರಣವನ್ನು ಪಕ್ಷದ ಶ್ರೇಣೀಕೃತ ರಚನೆಗಳಲ್ಲಿ ಗುರುತಿಸಬಹುದು. ಕಾಂಗ್ರೆಸ್‌ ಹಾಗೂ ಬಿಜೆಪಿ , ಮತ್ತಿತರ ಪ್ರಾದೇಶಿಕ-ರಾಷ್ಟ್ರೀಯ ಪಕ್ಷಗಳತ್ತ ನೋಡುವುದರ ಬದಲು, ಮಹಿಳಾ ಸಮಾನತೆಯನ್ನು ಪ್ರಧಾನ ಆದ್ಯತೆಯಾಗಿ ತನ್ನ ಆರಂಭದ ದಿನಗಳಿಂದಲೂ ಪರಿಗಣಿಸಿರುವ ಎಡಪಕ್ಷಗಳತ್ತ ನೋಡುವುದು ವಿವೇಕಯುತ ಎನಿಸುತ್ತದೆ. ಭಾರತದ ಅತಿದೊಡ್ಡ ಕಮ್ಯುನಿಸ್ಟ್‌ ಪಕ್ಷ, ಮೂರು ರಾಜ್ಯಗಳಲ್ಲಿ ಆಡಳಿತ ನಡೆಸಿರುವ ಸಿಪಿಎಂ ಪಕ್ಷದಲ್ಲಿ ಪಾಲಿಟ್‌ಬ್ಯುರೋ ಆಂತರಿಕ ನಿರ್ಣಯ-ತೀರ್ಮಾನಗಳನ್ನು ತೆಗೆದುಕೊಳ್ಳುವ ಪ್ರಮುಖ ಅಂಗವಾಗಿರುತ್ತದೆ. 1964ರಲ್ಲಿ ಇಬ್ಭಾಗವಾದ ನಂತರ ರಚನೆಯಾದ ಸಿಪಿಎಂ ಈವರೆಗೆ 23 ಪಾಲಿಟ್‌ಬ್ಯುರೋಗಳನ್ನು ರಚಿಸಿದೆ. ಇದರಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಗೆ ಸ್ಥಾನ ದೊರೆತಿದ್ದು , ಪಕ್ಷದ ಸ್ಥಾಪನೆಯ 40 ವರ್ಷಗಳು ಕಳೆದ ಮೇಲೆ, 2005 ರಲ್ಲಿ 18ನೆಯ ಪಾಲಿಟ್‌ಬ್ಯುರೋದಲ್ಲಿ.

ಪಕ್ಷದ ಇತಿಹಾಸದಲ್ಲಿ ಕೇವಲ ನಾಲ್ವರು ಮಹಿಳಾ ಸದಸ್ಯರು ಮಾತ್ರ ಪಾಲಿಟ್‌ಬ್ಯುರೋಗೆ ನೇಮಕವಾಗಿದ್ದಾರೆ. ಪ್ರಸ್ತುತ ರಾಜಕೀಯದಲ್ಲಿ ಪ್ರಧಾನವಾಗಿ ಕಾಣುತ್ತಿರುವ ಮತ್ತು ಎಡಪಂಥೀಯ ರಾಜಕಾರಣದಲ್ಲಿ ಮುಂಚೂಣಿಗೆ ಬರಲು ಪ್ರಯತ್ನಿಸುತ್ತಿರುವ ಸಿಪಿಐ-ಎಂಎಲ್‌ ಲಿಬರೇಷನ್‌ ಪಕ್ಷ 2023ರಲ್ಲಿ ರಚಿಸಿದ ಪಾಲಿಟ್‌ಬ್ಯುರೋದ 17 ಸದಸ್ಯರ ಪೈಕಿ ಏಕೈಕ ಮಹಿಳೆ ಕಾಣುತ್ತಾರೆ. ಈ ಎರಡೂ ಪಕ್ಷಗಳ ಕೇಂದ್ರ ಸಮಿತಿಯಲ್ಲೂ ಸಹ ಮಹಿಳಾ ಪ್ರಾತಿನಿಧ್ಯ ಶೇಕಡಾ 33ರ ಗಡಿಯನ್ನು ತಲುಪುವುದಿಲ್ಲ. ಮಹಿಳೆಯರೇ ನಾಯಕತ್ವ ವಹಿಸಿರುವ ಬಹುಜನ ಸಮಾಜ ಪಕ್ಷ, ತೃಣಮೂಲ ಕಾಂಗ್ರೆಸ್‌ ಪಕ್ಷದಲ್ಲೂ ಸಹ ಇದೇ ಮಾದರಿ ಇರಲಿಕ್ಕೆ ಸಾಧ್ಯ. ಈ ಅಂಶಗಳನ್ನು ಪ್ರಧಾನವಾಗಿ ಬಿಂಬಿಸುವ ಉದ್ದೇಶ, ತಮ್ಮ ಪಕ್ಷದ ಅಧಿಕಾರ ಶ್ರೇಣಿಯಲ್ಲೇ ಮಹಿಳಾ ಪ್ರಾತಿನಿಧ್ಯಕ್ಕೆ ಪ್ರಾಶಸ್ತ್ಯ ನೀಡದ ಪಕ್ಷಗಳಿಗೆ, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕೇಳುವ ನೈತಿಕತೆ ಇರುತ್ತದೆಯೇ ?

ಪುನರಾವಲೋಕನ-ಆತ್ಮಾವಲೋಕನ
ಈಗಲಾದರೂ ಎಡ ಪಕ್ಷಗಳು ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಬಲೀಕರಣವಾಗಲೀ ಸಮಾನತೆಯಾಗಲೀ ಘೋಷಣೆಗಳಲ್ಲಿ, ಗ್ರಾಂಥಿಕವಾಗಿ, ಹೋರಾಟಗಳ ಮೂಲಕ ಸಾಧಿಸಲಾಗುವುದಿಲ್ಲ. 77 ವರ್ಷಗಳ ಕಾಲ ನಾವು ಇದನ್ನೇ ಮಾಡುತ್ತಾ ಬಂದಿದ್ದೇವೆ. ಸಮಾನತೆಯ ಕೂಗಿನ ಹಿಂದೆ ನಾಯಕತ್ವದ ಬಲವೂ ಇರಬೇಕಲ್ಲವೇ ? ಸಮಾನ ನಾಯಕತ್ವದ ಕಲ್ಪನೆಯೇ ಇಲ್ಲದೆ, ಸಮಾನ ಪ್ರಾತಿನಿಧ್ಯಕ್ಕಾಗಿ ಆಗ್ರಹಿಸುವುದು ಆತ್ಮವಂಚಕ ಎನಿಸುವುದಿಲ್ಲವೇ ? ಈ ಆತ್ಮವಂಚನೆ ಕಾಂಗ್ರೆಸ್‌, ಬಿಜೆಪಿ ಮತ್ತಿತರ ಬೂರ್ಷ್ವಾ ಪಕ್ಷಗಳಿಗೆ ಹೊಂದಾಣಿಕೆಯಾಗಬಹುದು ಆದರೆ ಎಡಪಕ್ಷಗಳಿಗೆ ಆಗುವುದಿಲ್ಲ ಅಲ್ಲವೇ ? ಸೂಕ್ತ ಅಭ್ಯರ್ಥಿಗಳಿಲ್ಲ ಎಂಬ ಕಾರಣವೂ ಕೆಲವೊಮ್ಮೆ ಕೇಳಿಬರುವುದುಂಟು. ಅಂದರೆ ಪಕ್ಷದ ಬೆಳವಣಿಗೆಯ ಹಾದಿಯಲ್ಲಿ ಮಹಿಳಾ ನಾಯಕತ್ವವನ್ನು ಉತ್ತೇಜಿಸಿ, ಬೆಳೆಸಿಲ್ಲ ಎಂದೂ ಅರ್ಥಮಾಡಿಕೊಳ್ಳಬಹುದಲ್ಲವೇ ?

ಆಶಾ, ಅಂಗನವಾಡಿ, ಯೋಜನಾ ಕಾರ್ಮಿಕರು (Scheme workers), ದಾದಿಯರು, ಮಹಿಳಾ ವೈದ್ಯರು, ಶಿಕ್ಷಕಿಯರು ಹೀಗೆ ದೇಶಾದ್ಯಂತ ಮಹಿಳಾ ದುಡಿಮೆಗಾರರನ್ನು ಪ್ರತಿನಿಧಿಸುವುದೇ ಅಲ್ಲದೆ, ಈ ದುಡಿಮೆಗಾರರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಿರುವುದು ಎಡಪಕ್ಷಗಳೇ ಎನ್ನುವುದು ವಾಸ್ತವ. ಮಹಿಳಾ ದೌರ್ಜನ್ಯಗಳ ವಿರುದ್ಧ, ಮಹಿಳೆಯರ ಘನತೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿಯೂ ಎಡಪಕ್ಷಗಳು ಹೋರಾಡುತ್ತಲೇ ಬಂದಿವೆ. ಇಲ್ಲಿಯೂ ಸಹ ಕೆಳಹಂತದ ಸಂಘಟನೆಗಳಿಗೆ ಪುರುಷರೇ ನಾಯಕತ್ವ ವಹಿಸಿರುವ ಉದಾಹರಣೆಗಳೂ ಇವೆ. ಆದರೆ ಬಹುಮುಖ್ಯವಾಗಿ ಗಮನಿಸಬೇಕಿರುವುದು ರಾಜಕೀಯ ನಾಯಕತ್ವ ಮತ್ತು ಪ್ರಾತಿನಿಧ್ಯ. ಇಲ್ಲಿ ಎಡಪಕ್ಷಗಳು ಗಂಭೀರವಾದ ಆಲೋಚನೆ ಮಾಡಬೇಕಿದೆ. ದೇಶದ ಆಳ್ವಿಕೆಯಲ್ಲಿ ʼ ಸಮಾನತೆ ʼಯನ್ನು ಪ್ರತಿಪಾದಿಸುವ ಮುನ್ನ ಆಯಾ ಪಕ್ಷಗಳ ಆಂತರಿಕ ಆಳ್ವಿಕೆಯಲ್ಲೂ ಇದನ್ನು ಸಾಧಿಸಿರುವುದು ವಿವೇಕಯುತ ಅಲ್ಲವೇ ? ಇದು ನೈತಿಕತೆಯ ಪ್ರಶ್ನೆಯೂ ಹೌದು.

ಮಹಿಳಾ ಮೀಸಲಾತಿ ಮಸೂದೆಯ ಜಾರಿಗಾಗಿ ಮುಂದಿನ ದಿನಗಳಲ್ಲಿ ದೇಶವ್ಯಾಪಿ ಹೋರಾಟಗಳು ನಡೆಯುತ್ತವೆ. ಇಲ್ಲಿ ಎಡಪಕ್ಷಗಳು ಮತ್ತು ಅಂಗ ಸಂಸ್ಥೆಗಳು, ಸಂಘಟನೆಗಳು ಮುಂಚೂಣಿಯಲ್ಲಿರುತ್ತವೆ. ಈ ಸಂದರ್ಭದಲ್ಲಿ ನಮ್ಮ ಚಹರೆಯನ್ನು ನಾವೇ ನೋಡಿಕೊಳ್ಳಬೇಕಿದೆ. ನಮ್ಮ ಚರಿತ್ರೆಯ ಪುನರಾವಲೋಕನ ನಡೆಯಬೇಕಿದೆ. ಆತ್ಮಾವಲೋಕನದ ನೆಲೆಯಲ್ಲಿ ತಪ್ಪು ಹೆಜ್ಜೆಗಳನ್ನು ಗುರುತಿಸಿ, ಸರಿಪಡಿಸಬೇಕಿದೆ. ಮಹಿಳಾ ಪ್ರಾತಿನಿಧ್ಯವನ್ನು ಪ್ರತ್ಯೇಕ ವಿಭಾಗ, ಸಂಘಟನೆಗಳ ಮೂಲಕ ನೋಡುವುದಕ್ಕೂ, ರಾಜಕೀಯ ಪಕ್ಷವಾಗಿ ತನ್ನೊಳಗಿನ ಅಧಿಕಾರ ಶ್ರೇಣಿಯ ಮೂಲಕ ನೋಡುವುದಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸಬೇಕಿದೆ. ಹಾಗೆಯೇ ನಾಯಕತ್ವದ ಅವಕಾಶವಿಲ್ಲದ ಪ್ರಾತಿನಿಧ್ಯ ಯಾವುದೇ ಸಂದರ್ಭದಲ್ಲಾದರೂ ಫಲಪ್ರದವಾಗಿ ಕಾಣುವುದಿಲ್ಲ. ಎಡಪಕ್ಷಗಳು ಈ ದೃಷ್ಟಿಯಿಂದ ಗಂಭೀರ ಮಂಥನ ನಡೆಸಬೇಕಿದೆ.

ಈ ಚಿಂತನ ಮಂಥನದ ಮೂಲಕ ಹೊರಹೊಮ್ಮುವ ವಿವೇಕ, ವಿವೇಚನೆ ಮತ್ತು ಸೈದ್ಧಾಂತಿಕ ಅರಿವು ಮಹಿಳಾ ಮೀಸಲಾತಿಗಾಗಿ ಆಗ್ರಹಿಸುವ ಸಾರ್ವಜನಿಕ ದನಿಗಳಿಗೆ ಶಕ್ತಿ ತುಂಬುತ್ತದೆ.
ಮಹಿಳಾ ಮೀಸಲಾತಿ ತಳಮಟ್ಟದಲ್ಲಿ ಮಹಿಳೆಯರ ಪ್ರಜಾಸತ್ತಾತ್ಮಕ ದನಿಯನ್ನು ಬಲಪಡಿಸುವುದೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ
-೦-೦-೦-೦-

Tags: ConstitutionalAmendmentDemocracyGenderEqualityindianpoliticsLokSabhaPoliticalRepresentationpratidavaniPublicPolicySocialJusticeWomenempowermentWomenReservation
Previous Post

ಅಮೆರಿಕದ ಹೊಸ ಮಸೂದೆಯಿಂದ ಭಾರತೀಯರಿಗೆ ಆತಂಕ ಹೆಚ್ಚಳ

Next Post

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 25, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
Next Post
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada