ಬೆಂಗಳೂರು, ಏ.26:
ರಾಜಕೀಯ ವಿಚಾರಗಳನ್ನು ಇನ್ನು ಮುಂದೆ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. “ಯಾವಾಗ ಏನು ಆಗಬೇಕೋ ಅದು ಆಗುತ್ತದೆ. ಸಮಯ ಬಂದಾಗ ತಾನಾಗಿಯೇ ಎಲ್ಲವೂ ತಿಳಿಯುತ್ತದೆ” ಎಂದು ಅವರು ಹೇಳಿದರು.ಸದಾಶಿವನಗರದ ತಮ್ಮ ನಿವಾಸದಲ್ಲಿ ಭಾನುವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದೆಹಲಿ ಪ್ರವಾಸ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಯಾವುದೇ ರಾಜಕೀಯ ಗೊಂದಲಗಳಿಲ್ಲ. ಈಗಾಗಲೇ ತೆಗೆದುಕೊಂಡಿರುವ ತೀರ್ಮಾನಗಳು ಕ್ರಮವಾಗಿ ಜಾರಿಗೆ ಬರುತ್ತವೆ ಎಂದು ತಿಳಿಸಿದರು.

ಪಕ್ಷದ ಒಳಗಿನ ಪರಿಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, “ನಮ್ಮ ಪಕ್ಷದಲ್ಲಿ ಯಾವಾಗ ಏನು ಮಾಡಬೇಕೋ ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಮಗೆ ಪಕ್ಷದ ಮೇಲೆ ಸಂಪೂರ್ಣ ವಿಶ್ವಾಸವಿದೆ” ಎಂದು ಹೇಳಿದರು.

ನಾಯಕತ್ವ ಬದಲಾವಣೆ ಕುರಿತು ಕೇಳಿದಾಗ, “ಈ ಬಗ್ಗೆ ನಾನು ಯಾವುದೇ ಚರ್ಚೆ ಮಾಡುವುದಿಲ್ಲ. ಹೈಕಮಾಂಡ್ ನೀಡುವ ಸೂಚನೆಗಳನ್ನು ನಾವು ಹಾಗೂ ಮುಖ್ಯಮಂತ್ರಿ ಅವರು ಪಾಲಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.ತಮ್ಮ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ ಅವರು, ಮೇ 15ರಂದು ತಮ್ಮ ಜನ್ಮದಿನದಂದು ಯಾವುದೇ ಫ್ಲೆಕ್ಸ್ ಅಥವಾ ಬ್ಯಾನರ್ ಹಾಕಬಾರದು ಎಂದು ಮನವಿ ಮಾಡಿದರು. “ಅನಧಿಕೃತ ಫ್ಲೆಕ್ಸ್‌ಗಳು ನಗರದ ಸೌಂದರ್ಯ ಹಾಳು ಮಾಡುತ್ತವೆ. ಹಾಕಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯವಿದ್ದರೆ ಜಾಹೀರಾತು ರೂಪದಲ್ಲಿ ಶುಭಾಶಯಗಳನ್ನು ನೀಡಬಹುದು” ಎಂದು ಅವರು ತಿಳಿಸಿದರು.
ಒಳಮೀಸಲಾತಿ ವಿಚಾರದಲ್ಲಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡ ಶಿವಕುಮಾರ್, “ಕೊಟ್ಟ ಮಾತಿನಂತೆ ನಾವು ಕಾರ್ಯನಿರ್ವಹಿಸಿದ್ದೇವೆ. ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ” ಎಂದು ಹೇಳಿದರು.ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕುರಿತು ಮಾತನಾಡಿ, “ಚುನಾವಣೆ ನಡೆಸಲು ನಾವು ಸಿದ್ಧರಿದ್ದೇವೆ. ಯಾರೂ ಇದನ್ನು ವಿರೋಧಿಸುತ್ತಿಲ್ಲ” ಎಂದು ಸ್ಪಷ್ಟಪಡಿಸಿದರು.





