ಇರಾನ್ ಮತ್ತು ಅಮೆರಿಕಾ ನಡುವಿನ ಮಹತ್ವದ ಮಾತುಕತೆಗಳು ವಿಫಲವಾದ ಬಳಿಕ, ಇರಾನ್ ಪ್ರತಿನಿಧಿ ಮಂಡಳಿ ತಮ್ಮ ವಾಪಸ್ಸು ಪ್ರಯಾಣದ ವೇಳೆ ಗಂಭೀರ ಭದ್ರತಾ ಬೆದರಿಕೆಗಳನ್ನು ಎದುರಿಸಿದ್ದಾಗಿ ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರು ವಿಮಾನ ಪ್ರಯಾಣವನ್ನು ಮಧ್ಯದಲ್ಲಿ ಬದಲಾಯಿಸಿ, ಬಸ್ ಮತ್ತು ರೈಲು ಮೂಲಕ ತಹ್ರಾನ್‌ಗೆ ಮರಳಿದ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ವರದಿಗಳ ಪ್ರಕಾರ, ಇಸ್ಲಾಮಾಬಾದ್‌ನಲ್ಲಿ ನಡೆದ ಉನ್ನತ ಮಟ್ಟದ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿದ್ದು, ಬಳಿಕ ಪ್ರತಿನಿಧಿ ಮಂಡಳಿಗೆ ತಮ್ಮ ವಿಮಾನಕ್ಕೆ ದಾಳಿ ನಡೆಯಬಹುದೆಂಬ ವಿಶ್ವಾಸಾರ್ಹ ಮಾಹಿತಿ ದೊರೆತಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ, ಪ್ರತಿನಿಧಿಗಳು ಗುಪ್ತವಾಗಿ ವಿಮಾನವನ್ನು ಬದಲಾಯಿಸಿ, ಮಧ್ಯಂತರವಾಗಿ ಬೇರೆ ನಗರಕ್ಕೆ ತೆರಳಿ, ಅಲ್ಲಿಂದ ರೈಲು, ಬಸ್ ಸೇರಿದಂತೆ ಭೂಮಾರ್ಗದ ಮೂಲಕ ತಹ್ರಾನ್‌ಗೆ ಪ್ರಯಾಣ ಮುಂದುವರಿಸಿದ್ದಾರೆ.

ಈ ತಂಡದಲ್ಲಿ ಇರಾನ್ ಸಂಸತ್ ಸ್ಪೀಕರ್ ಹಾಗೂ ವಿದೇಶಾಂಗ ಸಚಿವರಂತಹ ಉನ್ನತ ನಾಯಕರು ಇದ್ದರು ಎಂದು ತಿಳಿದುಬಂದಿದ್ದು, ಮಾತುಕತೆಗಳು ತೀವ್ರ ಉದ್ವಿಗ್ನತೆಯ ನಡುವೆಯೇ ನಡೆದವು.ಇದರ ಜೊತೆಗೆ, ಅಮೆರಿಕಾ ಮತ್ತು ಇರಾನ್ ನಡುವಿನ ಮಾತುಕತೆ ವಿಫಲವಾಗಿರುವುದು ಮಧ್ಯಪ್ರಾಚ್ಯದ ರಾಜಕೀಯ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಸ್ಟ್ರೇಟ್ ಆಫ್ ಹೋರ್ಮುಝ್ ಮೇಲಿನ ನಿಯಂತ್ರಣ, ಅಣು ಕಾರ್ಯಕ್ರಮ ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದಿವೆ.

ಈ ಘಟನೆ, ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಮಾತುಕತೆಗಳ ಭದ್ರತೆ ಕುರಿತು ಹೊಸ ಪ್ರಶ್ನೆಗಳನ್ನು ಎಬ್ಬಿಸಿದ್ದು, ಮುಂದಿನ ದಿನಗಳಲ್ಲಿ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಯಾವ ದಿಕ್ಕಿಗೆ ಸಾಗಲಿದೆ ಎಂಬುದು ಕುತೂಹಲಕಾರಿಯಾಗಿದೆ.






