ಅಮೆರಿಕಾ–ಇರಾನ್ ಅಣು ಒಪ್ಪಂದದ ವಿಚಾರ ಮತ್ತೆ ತೀವ್ರವಾಗುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುವ ಲಕ್ಷಣಗಳು ಗೋಚರಿಸುತ್ತಿವೆ. ಈ ಹಿನ್ನೆಲೆ ಅಮೆರಿಕಾ ಹಾಗೂ ಇಸ್ರೇಲ್ ನಾಯಕರಿಂದ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಲಾಗಿದೆ.ಅಮೆರಿಕದ ರಕ್ಷಣಾ ಸಚಿವ Pete Hegseth ಅವರು, ಇರಾನ್ ತಕ್ಷಣ ಅಣು ಒಪ್ಪಂದಕ್ಕೆ ಒಪ್ಪಿಕೊಳ್ಳಬೇಕು, ಇಲ್ಲವಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮಾತುಕತೆ ವಿಫಲವಾದರೆ ಆರ್ಥಿಕ ನಿರ್ಬಂಧಗಳ ಜೊತೆಗೆ ಇನ್ನಷ್ಟು ಕಠಿಣ ಕ್ರಮಗಳನ್ನೂ ಕೈಗೊಳ್ಳಬಹುದು ಎಂದು ಸೂಚನೆ ನೀಡಿದ್ದಾರೆ.ಇನ್ನೊಂದೆಡೆ, ಇಸ್ರೇಲ್ ಕೂಡ ಇರಾನ್ ವಿರುದ್ಧ ತನ್ನ ನಿಲುವನ್ನು ಕಠಿಣಗೊಳಿಸಿದೆ. ಇಸ್ರೇಲ್ ಅಧಿಕಾರಿಗಳು, ಇರಾನ್ ಅಣು ಕಾರ್ಯಕ್ರಮವನ್ನು ನಿಲ್ಲಿಸದಿದ್ದರೆ ಸೈನಿಕ ಕ್ರಮಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಅಣ್ವಸ್ತ್ರ ಹೊಂದಿರುವ ಇರಾನ್ ಪ್ರಾದೇಶಿಕ ಹಾಗೂ ಜಾಗತಿಕ ಭದ್ರತೆಗೆ ದೊಡ್ಡ ಬೆದರಿಕೆ” ಎಂದು ಹೇಳಿದ್ದಾರೆ.
ಇರಾನ್ ಮಾತ್ರ ಈ ಎಚ್ಚರಿಕೆಗಳನ್ನು ತಿರಸ್ಕರಿಸಿದ್ದು, ತನ್ನ ಅಣು ಕಾರ್ಯಕ್ರಮವು ಶಾಂತಿಯುತ ಉದ್ದೇಶಗಳಿಗಾಗಿಯೇ ಎನ್ನುವ ನಿಲುವನ್ನು ಪುನರುಚ್ಚರಿಸಿದೆ. ಅಮೆರಿಕದ ಒತ್ತಡಕ್ಕೆ ತಲೆಬಾಗುವುದಿಲ್ಲ, ಸ್ವಾಭಿಮಾನ ಮತ್ತು ಸಾರ್ವಭೌಮತ್ವವನ್ನು ಕಾಪಾಡುತ್ತೇವೆ ಎಂದು ಇರಾನ್ ಹೇಳಿದೆ.ಇದೀಗ ಅಮೆರಿಕಾ–ಇರಾನ್ ಮಾತುಕತೆ ಸ್ಥಗಿತಗೊಂಡಿರುವ ಹಿನ್ನೆಲೆ, ಪಶ್ಚಿಮ ಏಷ್ಯಾದಲ್ಲಿ ತಣಿಯದ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ, ಭದ್ರತಾ ಪರಿಸ್ಥಿತಿ ಹಾಗೂ ರಾಜಕೀಯ ಸಮೀಕರಣಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.






