ಕುಂದಾಪುರ:
ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಶಿಕ್ಷಕರ ಜೊತೆಗೂಡಿ ಎಐ (Artificial Intelligence) ಆಧಾರಿತ ‘ಐರಿಸ್’ ಎಂಬ ರೋಬೋ ಶಿಕ್ಷಕಿಯನ್ನು ಪರಿಚಯಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಸರ್ಕಾರಿ ಶಾಲೆಯಾಗಿ ಗುರುತಿಸಿಕೊಂಡಿದೆ.

ಒಮ್ಮೆ ಮುಚ್ಚುವ ಹಂತಕ್ಕೆ ತಲುಪಿದ್ದ ಈ ಶಾಲೆ, ಇಂದು ಮಾದರಿ ಶಾಲೆಯಾಗಿ ಹೊರಹೊಮ್ಮಿದೆ. ದಶಕದ ಹಿಂದೆ ಕೇವಲ 89 ವಿದ್ಯಾರ್ಥಿಗಳಿದ್ದರೆ, ಈಗ ವಿದ್ಯಾರ್ಥಿಗಳ ಸಂಖ್ಯೆ 334ಕ್ಕೆ ಏರಿಕೆಯಾಗಿದೆ. ಈ ಬದಲಾವಣೆಗೆ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಮಹತ್ವದ ಪಾತ್ರವಹಿಸಿದೆ. 2016ರಲ್ಲಿ ಟ್ರಸ್ಟ್ ಶಾಲೆಯನ್ನು ದತ್ತು ಪಡೆದು, ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಅಳವಡಿಸಿ ಶಾಲೆಯನ್ನು ಅಭಿವೃದ್ಧಿಪಡಿಸಿದೆ.

2026-27ನೇ ಸಾಲಿನಲ್ಲಿ ತರಗತಿಗಳಲ್ಲಿ ಎಐ ಟೀಚರ್ ‘ಐರಿಸ್’ ಬೋಧನೆ ನಡೆಸಲಿದ್ದು, ಈಗಾಗಲೇ ಇದರ ಅನಾವರಣ ನಡೆದಿದೆ. ಇದೇ ಸಂದರ್ಭದಲ್ಲಿ ರೈನ್‌ಬೋ ಎಜುಕೇಷನ್ ಫೆಸ್ಟ್ ಹಾಗೂ ಕಿಂಡರ್‌ಗಾರ್ಡನ್ ವಿಭಾಗಕ್ಕೂ ಚಾಲನೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ವಿದ್ಯಾಂಗ ಉಪನಿರ್ದೇಶಕ ಲೋಕೇಶ್ ಸಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

111 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆ 2016ರಲ್ಲಿ ಶತಮಾನೋತ್ಸವ ಆಚರಿಸಿದ್ದು, ಟ್ರಸ್ಟ್, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕರ ಸಹಕಾರದಿಂದ ನಿರಂತರ ಅಭಿವೃದ್ಧಿ ಕಂಡಿದೆ.
ಎಐ ಶಿಕ್ಷಕಿ ‘ಐರಿಸ್’ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಸುಮಾರು 20 ಭಾಷೆಗಳಲ್ಲಿ ಸಂವಹನ ನಡೆಸುವ ಸಾಮರ್ಥ್ಯ ಹೊಂದಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಕ್ಷಣ ಉತ್ತರ ನೀಡಲಿದೆ. ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿವರೆಗಿನ ಪಾಠಗಳನ್ನು ಬೋಧಿಸುವ ಜೊತೆಗೆ, ನೋಟ್ಸ್ ನೀಡುವ ಹಾಗೂ ಸಾಮಾನ್ಯ ಜ್ಞಾನಕ್ಕೂ ಸ್ಪಂದಿಸುವ ವೈಶಿಷ್ಟ್ಯ ಹೊಂದಿದೆ. ಸುಮಾರು ₹3.50 ಲಕ್ಷ ವೆಚ್ಚದಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದ್ದು, ದಾನಿಗಳು ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ.

ಶಾಲಾ ಅಭಿವೃದ್ಧಿಗಾಗಿ ಟ್ರಸ್ಟ್ ಕಳೆದ 10 ವರ್ಷಗಳಲ್ಲಿ ಸುಮಾರು ₹3 ಕೋಟಿ ವೆಚ್ಚ ಮಾಡಿದ್ದು, ಸ್ಮಾರ್ಟ್ ತರಗತಿಗಳು, ಉಚಿತ ನೋಟ್‌ಬುಕ್‌ಗಳು, ಸಮವಸ್ತ್ರ, ಸಾರಿಗೆ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿದೆ. ಗ್ರಾಮೀಣ ಪ್ರದೇಶದಲ್ಲಿಯೂ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಪರಿಚಯಿಸುವ ಮೂಲಕ ವಂಡ್ಸೆ ಶಾಲೆ ಹೊಸ ದಿಕ್ಕು ತೋರಿಸಿದೆ.






