ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ 4 ಎಕರೆ 12 ಗುಂಟೆ ಜಮೀನಿನ ವಿಚಾರದಲ್ಲಿ ಅಕ್ರಮವಾಗಿ ಖಾತೆ ಹಾಗೂ ಪಹಣಿ ತಯಾರಿಸಿ ಕೆಐಎಡಿಬಿ ವತಿಯಿಂದ 8 ಕೋಟಿ 54 ಲಕ್ಷದ 40 ಸಾವಿರ ರೂಪಾಯಿಗಳನ್ನು ಅಕ್ರಮವಾಗಿ ಭೂ ಪರಿಹಾರ ಪಡೆದಿರುವ ಪ್ರಕರಣದಲ್ಲಿ ಕೆಎಎಸ್ ಶ್ರೇಣಿಯ ಹಿರಿಯ ವಿಶೇಷ ಭೂಸ್ವಾಧೀನಾಧಿಕಾರಿ ಡಾ. ಬಿ.ಕೆ. ಮಮತಾ ಹೆಸರು ಕೇಳಿ ಬಂದಿದೆ.
ಪ್ರಮುಖವಾಗಿ ಪ್ರಜಾ ವಿಮೋಚನಾ ಬಹುಜನ ಸಮಿತಿಯ ಅಧ್ಯಕ್ಷ ಬಿಜವಾರ ನಾಗರಾಜ್ ಈ ಕುರಿತು ಧ್ವನಿ ಎತ್ತಿದ್ದು,. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಿಗೆ ದೂರು ನೀಡಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಪ್ರತಿಧ್ವನಿ ನ್ಯೂಸ್ ಗೆ ಲಭ್ಯವಾಗಿದೆ.

ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯೆಗಾಗಿ ಅಧಿಕಾರಿ ಮಮತಾ ಅವರನ್ನು ಸಂಪರ್ಕಿಸುವ ಪ್ರಯತ್ನವನ್ನು ಪ್ರತಿಧ್ವನಿ ನ್ಯೂಸ್ ಮಾಡಿತ್ತು. ಆದರೂ ಮೇಡಂ ಸಂಪರ್ಕಕ್ಕೆ ಬರಲಿಲ್ಲ. ಕಚೇರಿಗೂ ಪ್ರತಿಧ್ವನಿ ತಂಡ ಭೇಟಿ ನೀಡಿ 2 ಗಂಟೆಗಳ ಕಾಲ ಕಾದಿತ್ತು. ಆದರೆ ಆ ಕಡೆಯಿಂದ ಮೇಡಂ ಮ್ಯಾನೇಜರ್ ಬಂದು ಈ ಕುರಿತು ದೂರನ್ನು ಕೊಡಿ ಎಂದು ತಿಳಿಸುತ್ತಾರೆ. ಮೇಡಂ ಅವರ ಮೇಲೆಯೇ ಆಪಾದನೆ ಬಂದಿದೆ, ಮತ್ತೆ ಅವರಿಗೆ ದೂರು ಕೊಡುವುದೆಂದರೆ ಏನರ್ಥ ಎಂದು ಪ್ರತಿಧ್ವನಿ ತಂಡ ಮ್ಯಾನೇಜರ್ ಗೆ ಮರು ಪ್ರಶ್ನಿಸಿದೆ. ಆದರೆ ಅವರ ಮಾತುಗಳಲ್ಲೂ ಅಸಹಾಯಕತೆ ಎದ್ದು ಕಾಣುತ್ತಿತ್ತು. ಬೈಟ್ ಅಥವಾ ಇದರ ಮೇಲೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮೇಡಂ ಹೇಳಿದ್ದಾರೆ ಅಂತ ಅದೇ ಮ್ಯಾನೇಜರ್ ತಿಳಿಸಿದರು.

ಅಷ್ಟಕ್ಕೂ ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಕೈಗಾರಿಕಾ ವಲಯದಲ್ಲಿನ ಜಮೀನಿನ ರಕ್ಷಣೆ, ಕೈಗಾರಿಕಾ ಪ್ರದೇಶದ ಬೆಳವಣಿಗೆ ಹಾಗೂ ಜಮೀನುಗಳ ವಿಚಾರದಲ್ಲಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಆದರೆ ಇಲ್ಲಿ ಎಲ್ಲವೂ ಉಲ್ಟಾ ಎನ್ನುವಂತಿದೆ, ಯಾಕೆಂದರೆ ತಾವು ತಪ್ಪೇ ಮಾಡಿಲ್ಲ ಎಂದಾದರೆ ಮೇಡಂ ಮಮತಾ ಅವರು ಈ ಬಗ್ಗೆ ಸ್ಪಷ್ಟನೆ ನೀಡುವುದರಿಂದ ತಪ್ಪಿಸಿಕೊಳ್ಳುತ್ತಿರಲಿಲ್ಲ. ಏನಿದೆಯೋ ಅದನ್ನೇ ಹೇಳಿ ತಮ್ಮ ಮೇಲಿನ ಆರೋಪದ ಬಗ್ಗೆ ತುಟಿ ಬಿಚ್ಚುತ್ತಿದ್ದರು. ಆದರೆ ಅವರ ನಡೆಯೂ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಅವರಾಗಲಿ ತಮ್ಮ ಸರ್ಕಾರದ ಬೆನ್ನು ತಟ್ಟಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರದೇ ಸರ್ಕಾರದಲ್ಲಿನ ಪ್ರಭಾವಿ ಸಚಿವ ಎಂ.ಬಿ. ಪಾಟೀಲ್ ಅವರ ಇಲಾಖೆಯಲ್ಲೇ ಈ ರೀತಿಯಾಗಿ ಬೇಲಿಯೇ ಎದ್ದು ಹೊಲ ಮೇಯುವ ಕೆಲಸವಾಗುತ್ತಿರುವುದು ನಿಜಕ್ಕೂ ದುರಂತ..!
ಮಾನ್ಯ ಸಚಿವರೇ ನಿಮ್ಮ ಇಲಾಖೆ ಅದರಲ್ಲೂ ಕೆಐಎಡಿಬಿ ಅಧಿಕಾರಿಗಳ ಮೇಲೆ ವಿಶೇಷ ಗಮನ ಅತ್ಯಂತ ಮುಖ್ಯವಾಗಿದೆ.
ಅಲ್ಲದೆ ಈ ಪ್ರಕರಣದ ಕುರಿತು ಸಂಪೂರ್ಣ ಪಾರದರ್ಶಕ ತನಿಖೆಯಾಗಲಿ. ತಪ್ಪಿತಸ್ಥ ಭ್ರಷ್ಟ ಕುಳಗಳಿಗೆ ಹಾಗೂ ಈ ಇಡೀ 8.54 ಕೋಟಿ ಅಕ್ರಮ ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಾಗರಾಜ್ ದೂರಿನಲ್ಲಿ ಏನಿದೆ..?
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿ, ರಾಮನಾಥಪುರ ಗ್ರಾಮದ ಸರ್ವೆ ನಂ.148ರಲ್ಲಿ ಒಟ್ಟು 5 ಎಕರೆ 4 ಗುಂಟೆ ಜಮೀನಿನ ಪೈಕಿ 12. ಗುಂಟೆ ಬಿ ಕರಾಬು, ಉಳಿಕೆ 4 ಎಕರೆ 32 ಗುಂಟೆ ಜಮೀನು 1968 ರಿಂದ 1988ರ ತನಕ ಬಚ್ಚಪ್ಪ ಬಿನ್ ಚಿಕ್ಕಮುನಿಯಪ್ಪ ರವರ ಹೆಸರಿನಲ್ಲಿ ಖಾತೆ, ಪಹಣಿ ಚಾಲ್ತಿಯಲ್ಲಿದ್ದು, ತದ ನಂತರ ಐಎಚ್ ಆರ್ ಸಂಖ್ಯೆ:103/1988-89ರಂತೆ. ಸದರಿ ಖಾತೆದಾರರ ವಂಶಸ್ಥರಿದ್ದರೂ ಸಹ ಅನಧಿಕೃತವಾಗಿ, ಆಕ್ರಮವಾಗಿ ಖಾತೆ, ಪಹಣಿ ಮಾಡಿಸಿಕೊಂಡಿರುತ್ತಾರೆ. ಈಗಾಗಲೇ ಕೈಗಾರಿಕ ಪ್ರದೇಶ ಅಭಿವೃದ್ಧಿ (ಕೆಐಎಡಿಬಿ)ಯಿಂದ 8 ಕೋಟಿ 54 ಲಕ್ಷದ 40 ಸಾವಿರ ರೂ.ಗಳನ್ನು ಭೂ ಪರಿಹಾರವಾಗಿ ಪಡೆದುಕೊಂಡಿರುತ್ತಾರೆ.
ಸದರಿ ಜಮೀನು ವಾರಸುದಾರರಲ್ಲದಿದ್ದರೂ ಸಹ ಅನಧೀಕೃತವಾಗಿ ಸಿ.ವಾರಾಯಣಪ್ಪ ಬಿನ್ನ ಚನ್ನರಾಯಪ್ಪ ಹೆಸರಿಗೆ 1990-2005ರ ತನಕ ಪಹಣಿಯಲ್ಲಿ ಚಾಲ್ತಿಯಲ್ಲಿರುತ್ತದೆ. ನಂತರ, ಶ್ರೀನಿವಾಸ್ ಮೂರ್ತಿ ಮತ್ತು ಆರ್.ಎನ್.ರಾಮಮೂರ್ತಿ ಹೆಸರಿನಲ್ಲಿ ಪಹಣಿ ಮುಂದುವರೆದಿರುತ್ತದೆ. ಆದ್ದರಿಂದ ತಾವುಗಳು ಕೆಐಎಡಿಬಿ /774/2025-265 2206 23-03-20260ರ ಪತ್ರದಂತೆ ಮರಗಳ ಮೌಲ್ಯ ಮಾಪನ ವರದಿಯನ್ನು ನಿಗಧಿಪಡಿಸುವ ಬಗ್ಗೆ ಸೂಚಿಸಿದ್ದು, ತಾವುಗಳು ಮಾನ್ಯ ದೇವನಹಳ್ಳಿ ತಹಶೀಲ್ದಾರ್ ರವರು ಸದರಿ ಖಾತೆದಾರರ ಬಗ್ಗೆ ಪರಿಶೀಲನೆ ಮಾಡಿದ ನಂತರ, ತಾವುಗಳು ಕ್ರಮವಹಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಕಳಕಳಿಯಿಂದ ಕೋರಿಕೊಳ್ಳುತ್ತೇವೆ ಎಂದು ನಾಗರಾಜ್ ಆಗ್ರಹಿಸಿದ್ದಾರೆ.






