ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ಜಾಗತಿಕ ಮಟ್ಟದಲ್ಲಿ ಉಂಟಾದ ಪರಿಣಾಮಗಳು ಭಾರತದಲ್ಲೂ ಕಾಣಿಸಿಕೊಂಡಿದ್ದು, ಇಂಧನ ಬೆಲೆ ಏರಿಕೆ ಹಾಗೂ ಹಡಗುಗಳ ಸಿಲುಕಿರುವ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರಸ್ಪರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಯುದ್ಧದ ಪರಿಣಾಮವಾಗಿ ಜಾಗತಿಕ ಬಿಕ್ಕಟ್ಟು ಎದುರಾದಾಗ ವಿರೋಧ ಪಕ್ಷಗಳು ಜನರಲ್ಲಿ ಭೀತಿ ಸೃಷ್ಟಿಸುತ್ತಿವೆ ಎಂದು ಪ್ರಧಾನಿ ಮೋದಿ ಟೀಕಿಸಿದರು. ಸಂಕಷ್ಟದ ಸಮಯದಲ್ಲಿ ದೇಶದ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದ್ದು, ನಾವಿಕರ ಸುರಕ್ಷತೆ ಮತ್ತು ಇಂಧನ ಭದ್ರತೆ ಪ್ರಮುಖವಾಗಿವೆ ಎಂದು ಅವರು ಹೇಳಿದರು.ಇನ್ನೊಂದೆಡೆ, ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, ಭಾರತದ ಹಿತಾಸಕ್ತಿಗಿಂತ ಅಮೆರಿಕದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಅಮೆರಿಕದ ನೀತಿಗಳ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಗ್ಯಾಸ್ ದರ ಏರಿಕೆಯಾಗಿದೆ ಎಂದು ಅವರು ಟೀಕಿಸಿದರು.
ಪರ್ಷಿಯನ್ ಕೊಲ್ಲಿಯಲ್ಲಿ ಭಾರತದ 18ಕ್ಕೂ ಹೆಚ್ಚು ಹಡಗುಗಳು ಸಿಲುಕಿಕೊಂಡಿರುವುದು ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರಿದೆ ಎಂಬ ವರದಿಗಳಿವೆ. ಈ ಹಿನ್ನೆಲೆ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ.

ಇದಕ್ಕೆ ಪ್ರತಿಯಾಗಿ, ಯುದ್ಧ ಪರಿಸ್ಥಿತಿಯ ನಡುವೆಯೂ ಭಾರತೀಯ ನೌಕಾಪಡೆ ಹಡಗುಗಳ ರಕ್ಷಣೆಗೆ ಮುಂದಾಗಿದ್ದು, ಪರ್ಯಾಯ ಮಾರ್ಗಗಳ ಮೂಲಕ ತೈಲ ಆಮದು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.ಜಾಗತಿಕ ಯುದ್ಧದ ಪರಿಣಾಮ ದೇಶದ ಆರ್ಥಿಕತೆ ಮೇಲೆ ಬೀಳುತ್ತಿದ್ದಂತೆ, ಇದು ರಾಜಕೀಯ ಕಾದಾಟಕ್ಕೂ ವೇದಿಕೆಯಾಗಿದೆ.






