ಮಧ್ಯಪೂರ್ವದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಜಾಗತಿಕ ಇಂಧನ ಪರಿಸ್ಥಿತಿ ಗಂಭೀರ ತಿರುವು ಪಡೆದಿದ್ದು, ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ಪೂರೈಕೆ ಕೊರತೆ ಅನೇಕ ದೇಶಗಳ ಆರ್ಥಿಕತೆಯನ್ನು ಹಿನ್ನಡೆಯತ್ತ ತಳ್ಳುತ್ತಿದೆ. ಪ್ರಮುಖ ಸಾಗಣೆ ಮಾರ್ಗವಾದ ಹಾರ್ಮೂಜ್ ಜಲಸಂಧಿ ನಲ್ಲಿ ಅನಿಶ್ಚಿತತೆ ಮುಂದುವರಿದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.
ಭಾರತ, ದಕ್ಷಿಣ ಕೊರಿಯಾ, ಬಾಂಗ್ಲಾದೇಶ, ವಿಯೆಟ್ನಾಂ ಸೇರಿದಂತೆ ಆಮದು ಅವಲಂಬಿತ ರಾಷ್ಟ್ರಗಳು ಇಂಧನ ಕೊರತೆಯ ಭೀತಿಯನ್ನು ಎದುರಿಸುತ್ತಿವೆ. ಈ ನಡುವೆ ಅಂತರಾಷ್ಟ್ರೀಯ ತುರ್ತು ನಿಗಮ (International Energy Agency) ಜಗತ್ತು ದಶಕಗಳಲ್ಲಿಯೇ ಅತಿದೊಡ್ಡ ಇಂಧನ ಬಿಕ್ಕಟ್ಟಿನ ಅಂಚಿನಲ್ಲಿ ನಿಂತಿದೆ ಎಂದು ಎಚ್ಚರಿಸಿದೆ. ಪ್ರತಿ ದಿನ 11 ಮಿಲಿಯನ್ ಬ್ಯಾರೆಲ್ಗಳ ತೈಲ ಪೂರೈಕೆ ಕುಸಿತವಾಗುತ್ತಿರುವುದು 1970ರ ದಶಕದ ತೈಲ ಬಿಕ್ಕಟ್ಟಿಗಿಂತಲೂ ಗಂಭೀರವಾಗಿದೆ ಎಂದು ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಕೂಡ ಪಶ್ಚಿಮ ಏಷ್ಯಾದ ಸಂಘರ್ಷವು ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಹಡಗುಗಳ ಸುರಕ್ಷತೆಗೆ ರಾಜತಾಂತ್ರಿಕ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆಯಾದರೂ, ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿಯೇ ಇದೆ ಎಂದು ಹೇಳಿದ್ದಾರೆ.ಇಂಧನ ಕೊರತೆಯನ್ನು ಎದುರಿಸಲು ಹಲವು ದೇಶಗಳು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಶ್ರೀಲಂಕಾ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದ್ದು, ಬಾಂಗ್ಲಾದೇಶದಲ್ಲಿ ವಿದ್ಯುತ್ ಕಡಿತ ಜಾರಿಯಲ್ಲಿದೆ. ಪಾಕಿಸ್ತಾನ ಹಾಗೂ ಫಿಲಿಪೈನ್ಸ್ ನಾಲ್ಕು ದಿನಗಳ ಕೆಲಸದ ವಾರಕ್ಕೆ ತಿರುಗಿದರೆ, ವಿಯೆಟ್ನಾಂ ದೂರದಿಂದ ಕೆಲಸ ಮಾಡುವ ವ್ಯವಸ್ಥೆ ಜಾರಿಗೊಳಿಸಿದೆ.

ಯುದ್ಧ ಆರಂಭವಾದ ನಂತರ ತೈಲ ಬೆಲೆಗಳು 40 ಶೇಕಡಕ್ಕಿಂತ ಹೆಚ್ಚು ಏರಿಕೆಯಾಗಿ, ಮುಂದಿನ ದಿನಗಳಲ್ಲಿ ಬ್ಯಾರೆಲ್ಗೆ 125ರಿಂದ 150 ಡಾಲರ್ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಇದು ಜಾಗತಿಕ ಹಣದುಬ್ಬರವನ್ನು ಹೆಚ್ಚಿಸಿ ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸುವ ಭೀತಿ ಉಂಟುಮಾಡಿದೆ.

ಭಾರತದ ಪರಿಸ್ಥಿತಿಯೂ ಚಿಂತಾಜನಕವಾಗಿದೆ. ದೇಶದ ಭೂಗತ ಪೆಟ್ರೋಲಿಯಂ ನಿಕ್ಷೇಪ ಸಾಮರ್ಥ್ಯ 5.33 ಮಿಲಿಯನ್ ಟನ್ ಇದ್ದರೂ, ಪ್ರಸ್ತುತ ಲಭ್ಯವಿರುವ ಸಂಗ್ರಹವು ಕೇವಲ ಕೆಲವು ದಿನಗಳ ಅಗತ್ಯವನ್ನೇ ಪೂರೈಸುವಷ್ಟಿದೆ ಎಂದು ಅಂದಾಜಿಸಲಾಗಿದೆ. ಇದು ಇಂಧನ ಭದ್ರತೆ ಕುರಿತಾಗಿ ದೇಶದ ದುರ್ಬಲತೆಯನ್ನು ಬಯಲಿಗೆಳೆಯುತ್ತಿದೆ. ಇಂಧನ ಬಿಕ್ಕಟ್ಟು ಇನ್ನೂ ಕೆಲ ವಾರಗಳ ಕಾಲ ಮುಂದುವರಿದರೆ ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದ್ದು, ಭಾರತ ಸೇರಿದಂತೆ ಅನೇಕ ದೇಶಗಳು ಗಂಭೀರ ಸವಾಲಿನ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು.
ಇದನ್ನೂ ಓದಿ






