ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಇವಿಎಂ ಯಂತ್ರಗಳ ಬದಲಿಗೆ ಮತಪತ್ರ ಪದ್ಧತಿಯನ್ನು ಮರುಜಾರಿಗೊಳಿಸುವ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ–2026’ ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಮಂಡಿಸಿದ ಈ ವಿಧೇಯಕವು, ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕಾರವಾದ ನಂತರ ಮೇಲ್ಮನೆಗೂ ಬಂದಿದ್ದು, ವಿರೋಧ ಪಕ್ಷದ ಪ್ರತಿಭಟನೆ ನಡುವೆಯೇ ಪಾಸಾಗಿದೆ. ವಿಧೇಯಕವನ್ನು ಶೀಘ್ರದಲ್ಲೇ ರಾಜ್ಯಪಾಲರ ಅನುಮತಿಗೆ ಕಳುಹಿಸಲಾಗಿದ್ದು, ಅವರ ತೀರ್ಮಾನವೇ ಮುಂದಿನ ಹಂತವನ್ನು ನಿರ್ಧರಿಸಲಿದೆ.ಈ ತಿದ್ದುಪಡಿಯ ಪ್ರಮುಖ ಉದ್ದೇಶ, ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸುವುದಾಗಿದೆ.
ಸಂವಿಧಾನದಡಿ ಮತದಾರರು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದು, ಮತದಾನ ಪ್ರಕ್ರಿಯೆಯ ಮೇಲೆ ಮಾನಸಿಕ ವಿಶ್ವಾಸ ಹೆಚ್ಚಿಸಲು ಮತಪತ್ರ ಪದ್ಧತಿ ಸಹಕಾರಿ ಎಂಬ ಅಭಿಪ್ರಾಯವನ್ನು ಸರ್ಕಾರ ವ್ಯಕ್ತಪಡಿಸಿದೆ.ಇದರಿಂದ ಮುಂದೆ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಮತಪತ್ರಗಳ ಮೂಲಕವೇ ನಡೆಯಲಿವೆ. ಜೊತೆಗೆ, ಬೂತ್ ಕ್ಯಾಪ್ಚರಿಂಗ್ ಮತ್ತು ಇತರೆ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವಂತೆ ಕಠಿಣ ನಿಯಮಗಳನ್ನು ವಿಧೇಯಕದಲ್ಲಿ ಸೇರಿಸಲಾಗಿದೆ.

ಇನ್ನೊಂದೆಡೆ, ಪಂಚಾಯತ್‌ಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಅನಧಿಕೃತ ಸ್ವತ್ತುಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ತರುವ ವ್ಯವಸ್ಥೆಯನ್ನೂ ವಿಧೇಯಕದಲ್ಲಿ ಒಳಗೊಂಡಿದೆ. ಇದರಿಂದ ಗ್ರಾಮೀಣ ಅಭಿವೃದ್ಧಿ ಕಾರ್ಯಗಳಿಗೆ ಆದಾಯ ಹೆಚ್ಚುವ ನಿರೀಕ್ಷೆ ಇದೆ.ಆದರೆ, ಈ ಕ್ರಮಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇದನ್ನು ಹಿಮ್ಮುಖ ಹೆಜ್ಜೆ ಎಂದು ಟೀಕಿಸಿದ್ದು, ಇವಿಎಂ ವ್ಯವಸ್ಥೆಯ ದೋಷಗಳನ್ನು ಸರಿಪಡಿಸುವ ಬದಲು ಹಳೆಯ ವಿಧಾನಕ್ಕೆ ಮರಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ನಡೆಸಿದರು.

ಇವಿಎಂಗಳ ವಿಶ್ವಾಸಾರ್ಹತೆ ಕುರಿತ ಚರ್ಚೆಗಳು ದೇಶದಾದ್ಯಂತ ಮುಂದುವರಿದಿರುವ ಹಿನ್ನೆಲೆ, ಈ ತೀರ್ಮಾನ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ






