‘ಲವ್ ಮಾಕ್ಟೇಲ್ 3’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲಿ ಉತ್ತಮ ಗಳಿಕೆ ದಾಖಲಿಸಿದೆ. ಆದರೆ ಚಿತ್ರದ ಯಶಸ್ಸಿನ ನಡುವೆ ಇದೀಗ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ವಿರುದ್ಧ ಕಥೆ ಕದ್ದ ಆರೋಪ ಕೇಳಿಬಂದಿದೆ.

‘ಮಾರಿಗೋಲ್ಡ್’ ಚಿತ್ರದ ನಿರ್ದೇಶಕ ರಾಘವೇಂದ್ರ ಎಂ ನಾಯಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಆರೋಪವನ್ನು ಹೊರ ಹಾಕಿದ್ದಾರೆ. ಅವರ ಹೇಳಿಕೆಯ ಪ್ರಕಾರ, 2023ರಲ್ಲಿ ತಾವು ಡಾರ್ಲಿಂಗ್ ಕೃಷ್ಣ ಅವರಿಗೆ ಒಂದು ಕಥೆ ಹೇಳಿದ್ದು, ಆ ವೇಳೆ ನಿರ್ಮಾಪಕ ಗುರುದೇಶಪಾಂಡೆ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ.ಆ ಸಮಯದಲ್ಲಿ ಡಾರ್ಲಿಂಗ್ ಕೃಷ್ಣ, ತಾವು ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ಮಗುವಿನ ಕುರಿತ ಕಥೆಯನ್ನು ಮಾಡುತ್ತಿರುವುದರಿಂದ ಒಂದೇ ರೀತಿಯ ಕಥೆಗಳನ್ನು ಮುಂದುವರಿಸಲು ಇಷ್ಟವಿಲ್ಲ ಎಂದು ಹೇಳಿ, ಬೇರೆ ಕಥೆ ತರಲು ಸೂಚಿಸಿದ್ದರು ಎಂದು ರಾಘವೇಂದ್ರ ನಾಯಕ್ ಹೇಳಿದ್ದಾರೆ.

ಆದರೆ ಈಗ ಬಿಡುಗಡೆಯಾದ ಚಿತ್ರದ ದ್ವಿತೀಯಾರ್ಧದಲ್ಲಿ ತಾವು ಹೇಳಿದ ಕಥೆಯ ಮೂಲ ಅಂಶಗಳನ್ನು ಬಳಸಿಕೊಂಡಿದ್ದಾರೆ ಎಂಬುದು ಅವರ ಆರೋಪ. ತಮ್ಮ ಕಥೆಯಲ್ಲಿ ಮಗುವಿನ ಪಾತ್ರ ಗಂಡು ಮಗುವಾಗಿದ್ದರೆ, ಸಿನಿಮಾದಲ್ಲಿ ಅದನ್ನು ಹೆಣ್ಣು ಮಗುವಾಗಿ ಬದಲಾಯಿಸಲಾಗಿದೆ. ಇದನ್ನು ಹೊರತುಪಡಿಸಿದರೆ ಕಥೆಯ ಆತ್ಮ ಒಂದೇ ರೀತಿಯಾಗಿದೆ ಎಂದು ಅವರು ದೂರಿದ್ದಾರೆ.

ಈ ಆರೋಪಗಳ ಕುರಿತು ಡಾರ್ಲಿಂಗ್ ಕೃಷ್ಣ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಅವರು ಸ್ಪಷ್ಟನೆ ನೀಡುವಾರೆಯೇ ಎಂಬುದರ ಬಗ್ಗೆ ಕಾದು ನೋಡಬೇಕು. ಇನ್ನು, ರಾಘವೇಂದ್ರ ನಾಯಕ್ ಕಾನೂನು ಹೋರಾಟಕ್ಕೆ ಮುಂದಾಗುವಾರೆಯೇ ಎಂಬ ವಿಷಯ ಸದ್ಯ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.






