ಬೆಂಗಳೂರು:
ಬೆಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ಹಳೇ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ . ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಸ್ತೆಗಳಲ್ಲಿ ದೀರ್ಘಕಾಲ ನಿಲ್ಲಿಸಿರುವ ಹಳೇ ವಾಹನಗಳನ್ನು ಟೋಯಿಂಗ್ ಮಾಡಿ ನಿಗದಿತ ಸ್ಥಳಗಳಿಗೆ ಕೊಂಡೊಯ್ದು ಡಂಪ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ 2026-27ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯ ಬಳಿಕ ಮಾತನಾಡಿದ ಅವರು, ಹಳೇ ವಾಹನಗಳನ್ನು ವಶಪಡಿಸಿಕೊಳ್ಳಲು ಬೆಳ್ಳಳ್ಳಿ, ಮಿಟಗಾನಹಳ್ಳಿ, ಸೊಂಡೆಕೊಪ್ಪ ಮತ್ತು ಗಿಡ್ಡೇನಹಳ್ಳಿ ಪ್ರದೇಶಗಳಲ್ಲಿ ಜಾಗಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು. ಟ್ರಾಫಿಕ್ ನಿಯಂತ್ರಣದ ಭಾಗವಾಗಿ ಇನ್ಮುಂದೆ ಟೋಯಿಂಗ್ ಕಾರ್ಯಾಚರಣೆ ಕಟ್ಟುನಿಟ್ಟಾಗಿ ಜಾರಿಯಾಗಲಿದೆ. ನಾನ್-ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿದರೆ ತಕ್ಷಣವೇ ಟೋಯಿಂಗ್ ಮಾಡಲಾಗುತ್ತದೆ. ಪ್ರತಿ ಕಾರ್ಪೊರೇಷನ್ಗೆ ಎರಡು ಟೋಯಿಂಗ್ ವಾಹನಗಳನ್ನು ನೀಡಲಾಗಿದೆ ಎಂದು ಹೇಳಿದರು.

ವ್ಯಾಪಾರ ಚಟುವಟಿಕೆಗಳ ಕುರಿತಂತೆ ಮಾತನಾಡಿದ ಅವರು, ನಿಗದಿತ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡಲಾಗುವುದು. ನೋಂದಾಯಿತ ವ್ಯಾಪಾರಿಗಳಿಗೆ ಮಾತ್ರ ಅವಕಾಶವಿದ್ದು, ಅನಧಿಕೃತ ಫ್ಲೆಕ್ಸ್ ಹಾಕಿದರೆ ₹50,000 ರಿಂದ ₹1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು. ಈ ಬಗ್ಗೆ ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಬೀದಿ ಬದಿ ವ್ಯಾಪಾರವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಇರುತ್ತದೆ. ತಳ್ಳುಗಾಡಿ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸಲು ಟೆಂಡರ್ ಕರೆಯಲಾಗಿದ್ದು, ಫುಟ್ಪಾತ್ ಪಾಲಿಸಿ ರೂಪಿಸಿ ನಿಗದಿತ ಸ್ಥಳಗಳಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ಪಾರ್ಕ್ಗಳಲ್ಲಿ ಅನಧಿಕೃತ ಚಟುವಟಿಕೆಗಳ ಕುರಿತು ಬಂದಿರುವ ದೂರುಗಳ ಹಿನ್ನೆಲೆ, ಪಾರ್ಕ್ಗಳ ಕಾರ್ಯಾವಧಿಯನ್ನು ನಿಗದಿಪಡಿಸುವ ಬಗ್ಗೆ ಸ್ಥಳೀಯ ಶಾಸಕರು ತೀರ್ಮಾನ ಕೈಗೊಳ್ಳಲಿದ್ದಾರೆ. ಜಿಬಿಎ ಬಜೆಟ್ ಬಗ್ಗೆ ಮಾತನಾಡಿದ ಅವರು, ವಾರ್ಡ್ವಾರು ಅನುದಾನ ನೀಡುವ ಕುರಿತು ಚರ್ಚೆ ನಡೆದಿದ್ದು, ಪ್ರತಿ ವಾರ್ಡ್ಗೆ ₹5 ರಿಂದ ₹10 ಕೋಟಿ ಅನುದಾನ ನೀಡುವ ಬಗ್ಗೆ ಸಾಧ್ಯತೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ನಗರದಲ್ಲಿ ಟ್ರಾಫಿಕ್ ಮತ್ತು ಶಿಸ್ತು ಕಾಪಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ.






