ಬೆಂಗಳೂರು : ರಾಜ್ಯದಲ್ಲಿ ನೇಮಕಾತಿಗಾಗಿ ಯುವಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದ ನೇಮಕಾತಿಯ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಕಾದು ಕೆಂಡವಾಗಿದ್ದಾರೆ. ಹೀಗಾಗಿ ಹಂತ ಹಂತವಾಗಿ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಕರ್ನಾಟಕ ಸರ್ಕಾರವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 56,432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಇತ್ತಿಚಿಗೆ ನಡೆದ ಸಚಿವ ಸಂಪುಟ (Cabinet Meeting) ಸಭೆಯಲ್ಲಿ ಒಪ್ಪಿಗೆ ನೀಡಿದೆ. 30 ದಿನಗಳ ಒಳಗೆ ಅಧಿಸೂಚನೆ ಹೊರಡಿಸಿ, ಶೇ. 50ರಷ್ಟು ಮೀಸಲಾತಿ ನಿಯಮದಡಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರವು ನಿರುದ್ಯೋಗಿ ಯುವಕರಿಗೆ ದೊಡ್ಡ ಅವಕಾಶವಾಗಿದೆ.
ಹೀಗಾಗಿ ವಿವಿಧ ಇಲಾಖೆಗಳ ನೇಮಕಾತಿಗಾಗಿ ಗ್ರೀನ್ ಸಿಗ್ನಲ್ ನೀಡಿದ್ದು, ಈ ಕುರಿತು ಶಿಕ್ಷಣ ಇಲಾಖೆಯ ನೇಮಕಾತಿಯ ವಿಚಾರದಲ್ಲಿ ಸಚಿವ ಮಧು ಬಂಗಾರಪ್ಪ ಮಹತ್ವದ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗುವುದು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬೇಸಿಗೆಯಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ: ಇರಲಿ ಈ ಅಪಾಯದ ಬಗ್ಗೆ ಎಚ್ಚರಿಕೆ
ವಿಧಾನಪರಿಷತ್ನಲ್ಲಿ ಬಿಜೆಪಿಯ ಚಿದಾನಂದಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ಹಲವಾರು ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ. ಶನಿವಾರದಂದು ನಡೆಸಲಾಗುತ್ತಿದ್ದ ಸಾಮೂಹಿಕ ದೈಹಿಕ ವ್ಯಾಯಾಮಗಳನ್ನು ಇನ್ನು ಮುಂದೆ ಶಾಲೆಗಳ ಬದಲಿಗೆ, ದೈಹಿಕ ಶಿಕ್ಷಣದ ಅವಧಿಯಲ್ಲಿ ನೈತಿಕ ಶಿಕ್ಷಣವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಈ ವೇಳೆ ದೈಹಿಕ ಶಿಕ್ಷಣದ ಅವಧಿಯಲ್ಲಿ ನೈತಿಕ ಶಿಕ್ಷಣವನ್ನು (Moral Education) ಹೇಳಿಕೊಡುತ್ತಿರುವುದೇಕೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರವನ್ನು ಪ್ರಶ್ನಿಸಿದ್ದರು. ನೈತಿಕ ಶಿಕ್ಷಣವನ್ನು ಪ್ರತ್ಯೇಕ ಅವಧಿಯಲ್ಲಿ ಕಲಿಸಬೇಕೆಂದು ಅವರು ಸಲಹೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ,ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 3,361 ಪಿಯು ಶಿಕ್ಷಕರ ಹುದ್ದೆಗಳು ಮತ್ತು ಪ್ರೌಢಶಾಲೆಗಳಲ್ಲಿ 1,841 ಹುದ್ದೆಗಳು ಖಾಲಿ ಇವೆ. ಮುಂಬರುವ 15,000 ಶಿಕ್ಷಕರ ನೇಮಕಾತಿಯಲ್ಲಿ ಪಿಯು ಶಿಕ್ಷಕರಿಗೆ ಆದ್ಯತೆ ನೀಡಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದ್ದಾರೆ.
ದೈಹಿಕ ಶಿಕ್ಷಣದ ಅವಧಿಯಲ್ಲಿ ನೈತಿಕ ಶಿಕ್ಷಣವನ್ನು ಬೋಧಿಸಲಾಗುವುದು ಎಂದು ಸ್ಪಷ್ಟಪಡಿಸಿ, “ನೈತಿಕ ಶಿಕ್ಷಣಕ್ಕಾಗಿ ಪ್ರತ್ಯೇಕ ಸಮಯವನ್ನು ನಿಗದಿಪಡಿಸಲು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಶಾಲಾ ಸಾಕ್ಷರತಾ ಮತ್ತು ಸುಧಾರಣಾ ಇಲಾಖೆ (ಶಿಕ್ಷಣ) ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.






