ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ ‘ಬಾಸ್’ ಚಿತ್ರದ ಟೀಸರ್ ಹೊಸ ವಿವಾದಕ್ಕೆ ಕಾರಣವಾಗಿದೆ. ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಯಿತು. ಟೀಸರ್‌ನಲ್ಲಿರುವ ಕೆಲವು ದೃಶ್ಯಗಳು ಹಾಗೂ ಸನ್ನಿವೇಶಗಳು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ನೆನಪಿಸುತ್ತವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಈ ಹಿನ್ನೆಲೆನಲ್ಲಿ ನಟ ದರ್ಶನ್ ತೂಗುದೀಪ ಪರ ವಕೀಲರು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ್ದು, ಸಿನಿಮಾವನ್ನು ಪರಿಶೀಲನೆ ಮಾಡುವ ಮೊದಲು ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.ದರ್ಶನ್ ಪರ ವಕೀಲರು ಸೆನ್ಸಾರ್ ಮಂಡಳಿಗೆ ಸುಮಾರು 50 ಪುಟಗಳ ನೋಟಿಸ್ ಸಲ್ಲಿಸಿದ್ದು, ಚಿತ್ರದಲ್ಲಿನ ವಿಷಯಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದ್ದಾರೆ.

ನಟ ತನಿಶ್ ಶಿವಣ್ಣ ಅಭಿನಯದ ಹಾಗೂ ನಿರ್ದೇಶಕ ಲಾವ ನಿರ್ದೇಶನದ ‘ಬಾಸ್’ ಚಿತ್ರದ ಟೀಸರ್ ಬಿಡುಗಡೆಯಾದ ನಂತರ ಈ ಚಿತ್ರವು ನಟ ದರ್ಶನ್ ಮೇಲೆ ಇರುವ ಕೊಲೆ ಆರೋಪದ ಘಟನೆಯನ್ನೇ ಆಧರಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರ ಹಿನ್ನೆಲೆಯಲ್ಲಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡದಂತೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿನಿಮಾಟೋಗ್ರಾಫ್ ಕಾಯ್ದೆ 1952ರ ಸೆಕ್ಷನ್ 5B ಅಡಿಯಲ್ಲಿ ನೋಟಿಸ್ ನೀಡಲಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಸಿನಿಮಾ ಸೆನ್ಸಾರ್ ಮಾಡಬಾರದು ಎಂದು ಮನವಿ ಮಾಡಲಾಗಿದೆ. ಜೊತೆಗೆ ಚಿತ್ರಕ್ಕೆ ಯು, ಯುಎ ಅಥವಾ ಎ ಪ್ರಮಾಣಪತ್ರ ನೀಡಬಾರದು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಇನ್ನೊಂದೆಡೆ ಚಿತ್ರತಂಡವು ‘ಬಾಸ್’ ಸಿನಿಮಾ ಸತ್ಯಘಟನೆ ಆಧಾರಿತವಾಗಿದೆ ಎಂದು ಹೇಳಿಕೊಂಡಿದ್ದರೂ, ಅದು ಯಾವ ಘಟನೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಟೀಸರ್ ನೋಡಿದ ಕೆಲ ಸಿನಿ ಪ್ರೇಕ್ಷಕರು ಇದು ರೇಣುಕಾಸ್ವಾಮಿ ಪ್ರಕರಣವನ್ನು ನೆನಪಿಗೆ ತರಿಸುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ
ಪಿಯು ಉಪನ್ಯಾಸಕರಿಂದ ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕಾರ ಎಚ್ಚರಿಕೆ: ಏಕೆ ?
ಪಿಯು ಉಪನ್ಯಾಸಕರಿಂದ ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕಾರ ಎಚ್ಚರಿಕೆ: ಏಕೆ ?






