ಬಾಗಲಕೋಟೆ : ದಿವಂಗತ ಹೆಚ್.ವೈ.ಮೇಟಿಯವರ ಪ್ರಯತ್ನ ಮತ್ತು ಆಶಯದಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟಿಸುವ ಮೂಲಕ ಅವರ ಕನಸನ್ನು ನನಸು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಇಲ್ಲಿನ ನವನಗರದ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಬಾಗಲಕೋಟೆಯಲ್ಲಿ ಮೇಟಿಯವರು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಪ್ರಯತ್ನಿಸಿದ್ದರು. ಹೀಗಾಗಿ ಇಂದು ಅವರ ಆಸೆಯನ್ನು ಈಡೇರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಯಾವುದೇ ಅನುದಾನ ಮೀಸಲಿಟ್ಟಿಲ್ಲ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಉತ್ತರಿಸಿ, ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣಾ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಲಾಗುತ್ತಿದ್ದು, ಸಂತ್ರಸ್ತರೆಲ್ಲರಿಗೂ ಮೂರು ನಾಲ್ಕು ವರ್ಷಗಳ ಅವಧಿಯಲ್ಲಿ ವಿತರಣೆ ಮಾಡಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ.
ಇನ್ನೂ ಉಪಚುನಾವಣೆ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು ಸಮಾರಂಭ ಹಾಗೂ ಛತ್ರಪತಿ ಶಿವಾಜಿ, ಬಸವಣ್ಣ ಅವರ ಮೂರ್ತಿಗೆ ತಲಾ 40 ಲಕ್ಷ ರೂಪಾಯಿ ನೀಡಿಕೆಯು ಚುನಾವಣಾ ಗಿಮಿಕ್ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ವೈದ್ಯಕೀಯ ಕಾಲೇಜು ಏಕೆ ಮಾಡಲಿಲ್ಲ.. ಇದು ಗಿಮಿಕ್ ಹೇಗಾಗುತ್ತದೆ. ಈಗಾಗಲೇ ಟೆಂಡರ್ ಕರೆದು ಏಜೆನ್ಸಿ ನಿಗದಿಯಾಗಿದೆ. ಕೆಲಸ ಪ್ರಾರಂಭವಾಗಬೇಕಿದ್ದು ಅದಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಕಲರ್ಸ್ ಕನ್ನಡದಲ್ಲಿ ಅಮ್ಮ-ಮಗಳ ಭಾವುಕ ಪಯಣದ ʻರಾಣಿʼ ಆರಂಭ; ಮಾರ್ಚ್ 9 ರಿಂದ ಸಂಜೆ 6 ಗಂಟೆಗೆ ನಿಮ್ಮ ಮನಗೆಲ್ಲಲು ಬರ್ತಿದೆ ಹೊಸ ಕತೆ
ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಯನ್ನು ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಹೆಚ್.ವೈ ಮೇಟಿ ಕುಟುಂಬದವರೂ ಒಬ್ಬ ಆಕಾಂಕ್ಷಿ. ಆದರೆ ಅಂತಿಮವಾಗಿ ಹೈಕಮಾಂಡ್ ಟಿಕೆಟ್ ಹಂಚಿಕೆಯ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಉಪಚುನಾವಣೆ ಒಂದು ವಾರದೊಳಗೆ ಘೋಷಣೆಯಾಗಬಹುದು. ಯಾರಾದರೂ ಆಕಾಂಕ್ಷಿಯಾಗಬಹುದು. ಒಂದೇ ಕುಟುಂಬದಿಂದ ಎಷ್ಟು ಜನ ಕೇಳಿದರೂ ಒಬ್ಬರಿಗೆ ಹೈ ಕಮಾಂಡ್ ಟಿಕೆಟ್ ನೀಡುತ್ತದೆ. ಉಪಚುನಾವಣೆಗೆ ಎಲ್ಲಾ ತಯಾರಿ ನಡೆದಿದ್ದು, ನಾವು ಅದಕ್ಕೆ ಸಿದ್ಧರಿದ್ದೇವೆ ಎಂದು ರಣಕಹಳೆ ಮೊಳಗಿಸಿದ್ದಾರೆ.
ಸಿಲಿಂಡರ್ ಪೂರೈಕೆ : ಕೇಂದ್ರ ಸರ್ಕಾರದ ಜವಾಬ್ದಾರಿ
ಸಿಲಿಂಡರ್ ಸರಬರಾಜು ಸುಗಮಗೊಳಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಕೊಟ್ಟಾಗಲೇ ವಿತರಣೆ ಮಾಡುತ್ತದೆ. ಆಹಾರ ಸಚಿವರು ಎರಡು ಸಭೆಗಳನ್ನು ಈಗಾಗಲೇ ನಡೆಸಿದ್ದು, ಕೇಂದ್ರ ಸಚಿವರಿಗೆ ಪತ್ರವನ್ನೂ ಬರೆಯಲಾಗಿದೆ. ಸಿಲಿಂಡರ್ ಅಭಾವವಾಗದಂತೆ ಎಚ್ಚರಿಕೆ ವಹಿಸಲು ಕೋರಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇನ್ನೂ ಒಳಮೀಸಲಾತಿ ವಿಚಾರವಾಗಿ ಬರುವ ಮಾರ್ಚ್ 27 ರಂದು ಸಭೆ ಕರೆಯಲಾಗಿದೆ. ಅಂದು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.






