ಬೆಂಗಳೂರು : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಂತರಾಷ್ಟ್ರೀಯ ಆದಿವಾಸಿ ಸಮಾವೇಶಕ್ಕೆ ಅವಕಾಶ ನೀಡದಿರುವ ವಿಚಾರ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪಶ್ಚಿಮ ಬಂಗಾಳ ಸರ್ಕಾರ ಸಮಾವೇಶಕ್ಕೆ ಅವಕಾಶ ನೀಡದಿರುವ ಬಗ್ಗೆ, ಪ್ರೊಟೊಕಾಲ್ ಅವ್ಯವಸ್ಥೆ ಕುರಿತು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ಮಮತಾ ದೀದಿ ನೀವೂ ನನ್ನ ಸಹೋದರಿ ಇದ್ದಂತೆ, ನಾನು ಕೂಡ ಬಂಗಾಳದ ಮಗಳು, ಇಲ್ಲಿಗೆ ಬರಲು ನನಗ್ಯಾಕೆ ಅವಕಾಶ ನೀಡುತ್ತಿಲ್ಲ?” ಎಂದು ಪ್ರಶ್ನಿಸುವ ಮೂಲಕ ದೀದಿಗೆ ಮುರ್ಮು ಚಾಟಿ ಬೀಸಿದ್ದರು. ಆದರೆ ಇದೇ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಟಿಎಂಸಿ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಪ್ರಜಾಪ್ರಭುತ್ವ ಮತ್ತು ಬುಡಕಟ್ಟು ಸಮುದಾಯಗಳ ಸಬಲೀಕರಣದ ವಿಚಾರದಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ನಿರಾಶೆ ಮೂಡಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ನನ್ನ ಮನಸ್ಸು ಆ ತಂಡ ಗೆಲ್ಲುತ್ತದೆ ಎಂದು ಹೇಳುತ್ತಿದೆ-ಫೈನಲ್ ಬಗ್ಗೆ ಡಿವಿಲಿಯರ್ಸ್ ಭವಿಷ್ಯ
ಬುಡಕಟ್ಟು ಸಮುದಾಯದಿಂದ ಬಂದ ರಾಷ್ಟ್ರಪತಿ ವ್ಯಕ್ತಪಡಿಸಿದ ನೋವು ಮತ್ತು ಬೇಸರ ಭಾರತೀಯರ ಮನಸ್ಸಿನಲ್ಲಿ ಅಪಾರ ದುಃಖವನ್ನುಂಟು ಮಾಡಿದೆ. ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರವು ನಿಜವಾಗಿಯೂ ಎಲ್ಲಾ ಮಿತಿಗಳನ್ನು ಮೀರಿದೆ. ರಾಷ್ಟ್ರಪತಿಗಳಿಗೆ ಈ ಅವಮಾನಕ್ಕೆ ಅಲ್ಲಿನ ಆಡಳಿತವೇ ಹೊಣೆಯಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಂತಾಲ್ ಸಂಸ್ಕೃತಿಯಂತಹ ಪ್ರಮುಖ ವಿಚಾರದಲ್ಲಿ ರಾಷ್ಟ್ರಪತಿಗಳನ್ನು ಪಶ್ಚಿಮ ಬಂಗಾಳ ಸರ್ಕಾರವು ತುಂಬಾ ಅಸಡ್ಡೆಯಿಂದ ನಡೆಸಿಕೊಂಡಿರುವುದು ದುರದೃಷ್ಟಕರ. ರಾಷ್ಟ್ರಪತಿ ಹುದ್ದೆ ರಾಜಕೀಯವನ್ನು ಮೀರಿದ್ದು ಮತ್ತು ಈ ಕಚೇರಿಯ ಪಾವಿತ್ರ್ಯವನ್ನು ಯಾವಾಗಲೂ ಗೌರವಿಸಬೇಕು. ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಪ್ರಜ್ಞಾವಂತ ಜನರು ಎದುರು ನೋಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಗುಡುಗಿದ್ದಾರೆ.






