• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಯುದ್ಧ ಪರಂಪರೆಗೂ ಜಾಗತಿಕ ಬಂಡವಾಳಶಾಹಿ ಮಾರುಕಟ್ಟೆಗೂ ಅವಿನಾಭಾವ ಸಂಬಂಧವಿದೆ..

ನಾ ದಿವಾಕರ by ನಾ ದಿವಾಕರ
March 4, 2026
in Top Story, ದೇಶ, ರಾಜಕೀಯ, ವಿದೇಶ
0
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..
Share on WhatsAppShare on FacebookShare on Telegram

ADVERTISEMENT

 

 

ನಾ ದಿವಾಕರ

 ಭಾಗ 1

 ಬೆಂಗಳೂರು : ಯುದ್ಧ ಎಂದರೆ ಅಮಾಯಕರ ಸಾವು ನೋವು ಮತ್ತು ಸಂಪತ್ತಿನ ಒಡೆಯರ ವಿಜೃಂಭಣೆ. ಸಾಮಾಜಿಕ ನೆಲೆಯಲ್ಲಿ ನೋಡಿದಾಗ ಯುದ್ಧ ಎನ್ನುವುದು ಸಾವನ್ನು ಸಂಭ್ರಮಿಸುವ ಮನುಷ್ಯ ಕುಲದ ಕ್ರೂರ ಪ್ರಕ್ರಿಯೆ. ಸಾವು ಯಾರದು ಎನ್ನುವುದು ಸಂಭ್ರಮಿಸುವವರು ಯಾರು ಎನ್ನುವುದನ್ನೂ ನಿರ್ಧರಿಸುತ್ತದೆ. ಪಶ್ಚಾತ್ತಾಪ, ಪರಿತಾಪ ಅಥವಾ ಅನುಕಂಪ ಎಂಬ ಔದಾತ್ಯಗಳನ್ನೇ ಕಾಣದ ಮಾನವ ಸಮಾಜದ ಒಂದು ವರ್ಗ ತನ್ನ ಆಧಿಪತ್ಯವನ್ನು ಸಾಧಿಸುವ ಸಲುವಾಗಿ ಮತ್ತೊಂದು ಜನಾಂಗವನ್ನು, ಸಮಾಜ-ಸಮುದಾಯಗಳನ್ನು, ಭೌಗೋಳಿಕ ಪ್ರದೇಶಗಳನ್ನು ಸಂಪೂರ್ಣ ನಾಶಪಡಿಸಲು ಅನುಸರಿಸುವ ಒಂದು ವಿಧಾನ ʼ ಯುದ್ಧ ʼ ಈ ಕ್ರೌರ್ಯದ ಅನಾವರಣಕ್ಕೆ ಅಗತ್ಯವಾದ ಕ್ಷಾತ್ರ ಗುಣ, ಧೈರ್ಯ ಶಕ್ತಿ ಶಸ್ತ್ರಾಸ್ತ್ರಗಳ ಬಲ ಮತ್ತು ಅಧಿಪತ್ಯದ ಹಂಬಲ ಇವೆಲ್ಲವನ್ನೂ ಮಾನವ ಸಮಾಜ ಕ್ರೌರ್ಯ ಎಂದು ಪರಿಭಾವಿಸಿರುವುದು ಚರಿತ್ರೆಯಲ್ಲಿ ಕಾಣುವುದು ಅಪರೂಪ.

 ಸಾಮ್ರಾಟ್‌ ಅಶೋಕ, ಅಲೆಕ್ಸಾಂಡರ್‌ ಯುಗದಿಂದ ಡಿಜಿಟಲ್‌ ಯುಗದ ಟ್ರಂಪ್‌-ನೇತನ್ಯಾಹುವರೆಗೂ ಕಾಣಬಹುದಾದ ಒಂದು ಸಮಾನ ಲಕ್ಷಣ ಎಂದರೆ ಈ ಯುದ್ಧ ಪರಂಪರೆಯನ್ನು ವೈಭವೀಕರಿಸಿ, ಸಾವು ನೋವುಗಳನ್ನು ಸಂಭ್ರಮಿಸುವ ಕ್ರೂರ ಮನಸ್ಥಿತಿ. ಪಶ್ಚಾತ್ತಾಪದಿಂದ ಈ ಕ್ರೂರ ಪರಂಪರೆಯನ್ನು ತೊರೆದು, ಶಾಂತಿ ಸೌಹಾರ್ದತೆಯ ಹಾದಿಯನ್ನು ಕ್ರಮಿಸಿದ ಏಕೈಕ ಉದಾಹರಣೆ ಮೌರ್ಯ ಸಾಮ್ರಾಟ್‌ ಅಶೋಕ ಮಾತ್ರ. ಆದರೂ ಈ ಪಶ್ಚಾತ್ತಾಪದ ನಡೆ ಕಳಿಂಗ ಯುದ್ಧದಲ್ಲಿ ಮಡಿದ ಸಾವಿರಾರು ಅಮಾಯಕರಿಗೆ ನ್ಯಾಯ ಒದಗಿಸುವುದಿಲ್ಲ. ಮತ್ತೊಂದು ಕಳಿಂಗ ನಡೆಯುವುದಿಲ್ಲ ಎಂಬ ಭರವಸೆಯಷ್ಟೇ. ಈ ಚಾರಿತ್ರಿಕ ಔದಾತ್ಯದ ಹೊರತಾಗಿಯೂ ಆಧುನಿಕ ವಿಶ್ವದ ಇತಿಹಾಸದಲ್ಲಿ ʼ ಕಳಿಂಗ ʼ ಗಳು ಸಂಭವಿಸುತ್ತಲೇ ಇವೆ. ರೋಮ್‌ ಸಾಮ್ರಾಜ್ಯಶಾಹಿಯ ಪಳೆಯುಳಿಕೆಗಳು ಜೀವಂತವಾಗಿವೆ. ಮಾನವ ಕುಲ ಸಾವನ್ನು ಸಂಭ್ರಮಿಸುವ ಯುದ್ಧ ಪರಂಪರೆಯನ್ನು ಕೈಬಿಟ್ಟಿಲ್ಲ.

ಯುದ್ಧ ಜಯಿಸಲಾಗದ ಸ್ಥಿತಿಯಲ್ಲಿ ಭಾರತ: ಸಿಎಜಿ ವರದಿ - War insurmountably India: CAG - vijaykarnataka

 ಆಧುನಿಕ ಸಮಾಜ-ಪ್ರಾಚೀನ ಮನಸ್ಥಿತಿ

 ಆಧುನಿಕ ನಾಗರಿಕತೆ (Modern Civilisation) ಮತ್ತು ನಾಗರಿಕ ಸಮಾಜಗಳ (Civil Societies) ಪ್ರಗತಿಯ ಹಾದಿಯನ್ನು ನೋಡಿದಾಗ, ಬೌದ್ಧಿಕವಾಗಿ ಮನುಷ್ಯ ಸಮಾಜದಲ್ಲಿ ಅಂತರ್ಗತವಾಗಿರುವ ಹಾಗೂ ಪ್ರಬಲ ಆಳುವ ವರ್ಗಗಳು ಅಂತರೀಕರಣಗೊಳಿಸಿಕೊಂಡಿರುವ (Internalised) ಜೀವ ವಿರೋಧಿ ದುಷ್ಟ ಗುಣಗಳನ್ನು ತೊಡೆದುಹಾಕಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ನಮ್ಮ ಸಮಾಜಗಳು ಬೆನ್ನು ತಟ್ಟಿಕೊಳ್ಳುವಂತೆ ನಾಗರಿಕತೆ (Civility) ಎಂಬ ಉದಾತ್ತ ಲಕ್ಷಣವನ್ನು ನಾವು ನಿಜಾರ್ಥದಲ್ಲಿ ರೂಢಿಸಿಕೊಂಡಿಲ್ಲ. ಹಾಗಾಗಿಯೇ ಆಂತರಿಕವಾಗಿಯೂ ಸಾವನ್ನು ಸಂಭ್ರಮಿಸುವ, ಹಂತಕರನ್ನು ಗೌರವಿಸುವ, ಕ್ರೌರ್ಯವನ್ನು ವೈಭವೀಕರಿಸುವ ಸಮಾಜಗಳು ಇಂದಿಗೂ ಸಕ್ರಿಯವಾಗಿವೆ.  ಜೀವ ಹತ್ಯೆಯನ್ನು ಖಂಡಿಸುವುದಕ್ಕೂ ಹಿಂಜರಿಯುವ ಕ್ರೂರ ಮನಸ್ಥಿತಿಯೇ, ಅನುಕಂಪ ಸಹಾನುಭೂತಿ ಇಲ್ಲದ ಸಾಮಾಜಿಕ ಕ್ರೌರ್ಯಕ್ಕೆ ಅಡಿಪಾಯವಾಗುತ್ತದೆ.

 ಆಧುನಿಕ ಜಗತ್ತು ಈ ಮನಸ್ಥಿತಿಯನ್ನೇ ಸಾರ್ವತ್ರೀಕರಿಸಿರುವುದು ಚಾರಿತ್ರಿಕ ಸತ್ಯ. ಒಂದು ಸಾರ್ವಭೌಮ ದೇಶದ ಸ್ಥಾಪಿತ ನಾಯಕನನ್ನು ಮತ್ತೊಂದು ದೇಶ ಹತ್ಯೆ ಮಾಡುವುದು ಅಥವಾ ಅಪಹರಿಸಿ ಬಂಧನದಲ್ಲಿರಿಸುವುದು 21ನೆ ಶತಮಾನದ ಅವಿಷ್ಕಾರದಂತೆ ಕಾಣುತ್ತದೆ. ವೆನೆಜುಯೆಲಾ ಅಧ್ಯಕ್ಷರನ್ನು ಅಪಹರಿಸಿದ ಅಮೆರಿಕ ಈಗ ಇರಾನ್‌ನ ಪರಮೋಚ್ಛ ನ್ಯಾಯಕನನ್ನು ಹತ್ಯೆ ಮಾಡಿ ಬೆನ್ನುತಟ್ಟಿಕೊಳ್ಳುತ್ತಿದೆ. ಅಯಾತುಲ್ಲಾ ಅಲಿ ಖಮೇನಿ ಅವರ ಸಿದ್ಧಾಂತ ಮತ್ತು ಆಳ್ವಿಕೆಯನ್ನು ತಾತ್ವಿಕ ಚೌಕಟ್ಟಿನಲ್ಲಿ ನಿಷ್ಕರ್ಷೆ ಮಾಡುವುದು ಸಾಮಾಜಿಕ ಲಕ್ಷಣ. ಆದರೆ ಭಿನ್ನ ಸಿದ್ದಾಂತದ ಕಾರಣಕ್ಕೇ ಆತನ ಅಸಹಜ ಸಾವನ್ನು ಬಯಸುವುದು ಅಥವಾ ಸಂಭ್ರಮಿಸುವುದು ಅಥವಾ ಹಂತಕರನ್ನು ಖಂಡಿಸದೆ ಇರುವುದು ಯುದ್ಧಕೋರ ಮನಸ್ಥಿತಿಯ ಲಕ್ಷಣ.

TRENDS Research & Advisory - TRENDS Israel-Iran War Analysis: An Unprecedented Confrontation that Reshaped the Middle East's Power Balance

 ಸಾಮ್ರಾಜ್ಯಶಾಹಿಯ ಹೊಸ ಹಾದಿ

 ಡಿಜಿಟಲ್‌ ಯುಗ ಈ ಮನಸ್ಥಿತಿಗೆ ಸಾಕ್ಷಿಯಾಗುತ್ತಿದೆ. ತನ್ನ ಮಿಲಿಟರಿ ಶಕ್ತಿಯನ್ನು ಪ್ರಪಂಚಕ್ಕೆ ಪರಿಚಯಿಸುತ್ತಿರುವ ಅಮೆರಿಕ ಮತ್ತು ಇಸ್ರೇಲ್‌ ಮೈತ್ರಿಕೂಟ ಭವಿಷ್ಯದ ಜಗತ್ತಿನ ಭೌಗೋಳಿಕ-ರಾಜತಾಂತ್ರಿಕ ಸಮೀಕರಣಗಳನ್ನೇ ಮರುನಿರ್ವಚನೆಗೊಳಪಡಿಸುತ್ತಿರುವುದು ಸ್ಪಷ್ಟವಾಗುತ್ತಿದೆ. 20ನೆ ಶತಮಾನದ ಸಾಮ್ರಾಜ್ಯಶಾಹಿಯ ಮೂಲ ಗುರಿ ಭೌಗೋಳಿಕ ವಿಸ್ತೀರ್ಣ ಮತ್ತು ನಿಯಂತ್ರಣವಾಗಿತ್ತು. ಭೂಪ್ರದೇಶಗಳನ್ನು ಆಕ್ರಮಿಸಿಕೊಂಡು ಅಲ್ಲಿನ ಸಂಪತ್ತನ್ನು ತನ್ನದಾಗಿಸಿಕೊಳ್ಳುವ ಸಾಮ್ರಾಜ್ಯಶಾಹಿ ವ್ಯವಸ್ಥೆಗೆ ಈ ಶತಮಾನ ಸಾಕ್ಷಿಯಾಗಿತ್ತು.  ಡಿಜಿಟಲ್‌ ಯುಗದಲ್ಲಿ ಸಂಪನ್ಮೂಲ ಮತ್ತು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗುವ ಆಳ್ವಿಕೆಗಳನ್ನು ಸ್ಥಾಪಿಸುವುದು ಸಾಮ್ರಾಜ್ಯಶಾಹಿಯ ನೂತನ ಮಾದರಿಯಾಗಿದೆ.

ಇತ್ತೀಚಿನ ಸುದ್ದಿ ಇಂದು: ಬ್ರೇಕಿಂಗ್ ನ್ಯೂಸ್ ಮತ್ತು ಭಾರತದಿಂದ ಪ್ರಮುಖ ಮುಖ್ಯಾಂಶಗಳು, ಮನರಂಜನೆ, ವ್ಯಾಪಾರ, ರಾಜಕೀಯ ಮತ್ತು ಕ್ರೀಡೆಗಳು | ದಿ ಇಂಡಿಯನ್ ...

 ಅಮೆರಿಕ ಮತ್ತು ಇಸ್ರೇಲ್‌ ಮೈತ್ರಿಕೂಟ ಇರಾನ್‌ ಮೇಲೆ ನಡೆಸುತ್ತಿರುವ ಮಾರಣಾಂತಿಕ ದಾಳಿಗಳನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಪರಸ್ಪರ ಕೊಲ್ಲುವ, ಪೈಪೋಟಿಯ ಮೇಲೆ ಸಾರ್ವಜನಿಕರ ಬದುಕನ್ನು ನಾಶಪಡಿಸುವ ಮತ್ತು ಸಾಮಾನ್ಯ ಜನರ ಭವಿಷ್ಯದ ಬದುಕನ್ನು ಹೈರಾಣಾಗಿಸುವ ದುಷ್ಟ ಕೃತ್ಯವನ್ನು ಸಾಮಾನ್ಯ ಪರಿಭಾಷೆಯಲ್ಲಿ ʼ ಯುದ್ಧ ʼ ಎಂದು ಕರೆಯುತ್ತೇವೆ. ಆದರೆ ಈ ಪರಸ್ಪರ ದಾಳಿಗಳಿಗೆ ವಿಶೇಷ ಹೆಸರುಗಳನ್ನು ನೀಡುವುದು ಆಧುನಿಕ ನಾಗರಿಕ ಜಗತ್ತಿನ ಒಂದು ವಿಧಾನ. ಅಮೆರಿಕ ಇರಾನ್‌ ಮೇಲಿನ ಆಕ್ರಮಣಕ್ಕೆ ʼ ಆಪರೇಷನ್‌ ಎಪಿಕ್‌ ಫ್ಯೂರಿ ʼ ಎಂದು ಹೆಸರಿಟ್ಟಿದೆ. ಇಸ್ರೇಲ್‌ ʼ ಆಪರೇಷನ್‌ ರೋರಿಂಗ್‌ ಲಯನ್‌ ʼ ಹೆಸರಿನಲ್ಲಿ ಆಕ್ರಮಣ ನಡೆಸುತ್ತಿದೆ.

 ಹೆಸರಲ್ಲೇನಿದೆ ? ಉದ್ದೇಶ ಮತ್ತು ಫಲಿತಾಂಶ ಒಂದೇ ಅಮಾಯಕರ ಸಾವು, ಜನಸಾಮಾನ್ಯರ ನೋವು ಮತ್ತು ಸಾಮ್ರಾಜ್ಯಶಾಹಿಯ ಗೆಲುವು. ಇಸ್ರೇಲ್‌ ನಡೆಸಿದ ಬಾಂಬ್‌ ದಾಳಿಗೆ ಮೊದಲು ತುತ್ತಾದವರು ಪ್ರಪಂಚವನ್ನೇ ಅರಿಯದ  153 ಶಾಲಾ ಮಕ್ಕಳು. ಇರಾನ್‌ನ ಮಿನಾಬ್‌ ಎಂಬಲ್ಲಿರುವ ಬಾಲಕಿಯರ ಪ್ರಾಥಮಿಕ ಶಾಲಾ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಈ ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ. ಇರಾನ್‌ನ ಪ್ರಜೆಗಳು ಎನ್ನುವುದರ ಹೊರತಾಗಿ, ಈ ಮಕ್ಕಳಿಗೂ , ಮಾರುಕಟ್ಟೆ ಆಧಿಪತ್ಯಕ್ಕಾಗಿ ನಡೆಯುವ ಭೀಕರ ಕಾಳಗಕ್ಕೂ ಏನು ಸಂಬಂಧವಿದೆ ? ಈ ನೈತಿಕ ಪ್ರಶ್ನೆಗೆ ವಿಶ್ವದ ಯಾವುದೇ ನಾಯಕರಾದರೂ ಉತ್ತರಿಸಲು ಸಾಧ್ಯವೇ ? “ ಯುದ್ಧಕಾಲದಲ್ಲಿ ಇವೆಲ್ಲಾ ಸಹಜ,,,, ” ಎಂಬ ಸಮಜಾಯಿಷಿ ನೀಡಲಾಗುತ್ತದೆ. ಇದೇ ಪ್ರಮೇಯವನ್ನೂ ಆಂತರಿಕ ಕೋಮು ಗಲಭೆಗಳಲ್ಲೂ, ಜನಾಂಗೀಯ ಹತ್ಯಾಕಾಂಡಗಳಲ್ಲೂ ಅನುಸರಿಸಲಾಗುತ್ತದೆ.

The Take: How close are Iran and Israel to full-scale war? | Israel-Iran conflict News | Al Jazeera

 ಮನುಷ್ಯ ಜೀವ ಮತ್ತು ಯುದ್ಧದ ಕ್ರೌರ್ಯ

ತಮ್ಮದಲ್ಲದ ತಪ್ಪಿಗೆ ಜೀವ ಕಳೆದುಕೊಳ್ಳುವ ಅಮಾಯಕರ ಜನರ ಆಕಸ್ಮಿಕ-ಅಸಹಜ ಸಾವುಗಳನ್ನು ʼ ಸ್ವಾಭಾವಿಕೀಕರಣಗೊಳಿಸುವ ʼ ( Naturalise) ಈ ಕ್ರೂರ ಮನಸ್ಥಿತಿಯೇ ಯುದ್ಧಗಳನ್ನು ಸ್ವಾಗತಿಸುವ ಮತ್ತು ವಿಜೃಂಭಿಸುವ ವಿಕೃತಿಗಳನ್ನೂ ಸೃಷ್ಟಿಸುತ್ತದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕಾಗಿ ವ್ಯಕ್ತಿಯೊಬ್ಬನ ಸಾವನ್ನು ಸಂಭ್ರಮಿಸುವ ಒಂದು ಪರಂಪರೆಗೆ ಮಾನವ ಸಮಾಜ ತೆರೆದುಕೊಂಡಿದ್ದು, ಇಲ್ಲಿ ಕೆಲವರು ಸಾವಿಗೆ  ʼ ಅರ್ಹರಾಗಿಯೇ ʼ ಕಾಣುತ್ತಾರೆ. ಕೆಲವು ದೇಶಗಳು ʼ ವಿನಾಶ ʼ ಕ್ಕೆ ಅರ್ಹವಾಗಿಬಿಡುತ್ತವೆ. ಇನ್ನು ಕೆಲವರ ಸಾವು ವಿಶ್ವಶಾಂತಿಗಾಗಿ ʼ ಅನಿವಾರ್ಯ ʼ ಅಥವಾ ʼ ಅಪೇಕ್ಷಣೀಯ ʼ ಆಗಿಬಿಡುತ್ತದೆ. ಈ ಅರ್ಹತೆಯನ್ನು ನಿರ್ಧರಿಸುವವರು ಯಾರು ? ಯಾವ ಮಾನದಂಡಗಳನ್ನು ಆಧರಿಸಲಾಗುತ್ತದೆ ? ಈ ಪ್ರಶ್ನೆಗಳಿಗೆ ಮಾನವ ಸಮಾಜ ಬಹುಶಃ ಉತ್ತರಿಸಲಾರದು.

 ಒಂದು ಯುದ್ಧ ನಡೆದರೆ ಈ ಎಲ್ಲ ಮಾನವೀಯ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಇರಾನ್‌ನ ಪ್ರಾಥಮಿಕ ಶಾಲೆಯ 153 ಹೆಣ್ಣುಮಕ್ಕಳು ಸಾವಿಗೆ ಅಥವಾ ಹತ್ಯೆಗೆ ಹೇಗೆ ಅರ್ಹರಾಗುತ್ತಾರೆ ? ಈ ಮಕ್ಕಳ ದಾರುಣ ಸಾವಿಗಾದರೂ ಮರುಗುವ, ಅನುಕಂಪ ತೋರುವ ಕನಿಷ್ಠ ಸೂಕ್ಷ್ಮ ಪ್ರಜ್ಞೆಯನ್ನೂ ನಾವು ಕಳೆದುಕೊಂಡಿದ್ದೇವೆ ಎಂದರೆ ನಾವಿರುವ ಸಮಾಜವನ್ನು ಹೇಗೆ ನಿರ್ವಚಿಸುವುದು ? ವಿಶ್ವದ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ಮನುಷ್ಯರಾಗಿ ನಮ್ಮ ಮರುಕ ಇರಬೇಕಾದ್ದು, ದೇಶಗಳ ಮೇಲೆ ಆಧಿಪತ್ಯ ಸಾಧಿಸುವ ನಾಯಕರ ಬಗ್ಗೆ ಅಲ್ಲ  ಅಥವಾ ಅವರ ವಿಸ್ತರಣಾವಾದದ ಉದ್ದೇಶಗಳಿಗಾಗಿ ಅಲ್ಲ. ಇಂತಹ ನಾಯಕರ ಸ್ವಾರ್ಥ ಸಾಧನೆಗೆ ಬಲಿಯಾಗುವ ಸಾಮಾನ್ಯ ಜನರ ಬಗ್ಗೆ ಮತ್ತು ಇವರ ಅಡಿಯಾಳುಗಳಂತೆ ಯುದ್ಧಭೂಮಿಗೆ ನುಗ್ಗಿ ಪ್ರಾಣ ಕಳೆದುಕೊಳ್ಳುವ ಯೋಧರ ಬಗ್ಗೆ.

BREAKING : ಇರಾನ್ ಶಾಲೆಯ ಮೇಲೆ ಇಸ್ರೇಲ್-ಅಮೆರಿಕಾ ಕ್ಷಿಪಣಿ ದಾಳಿ ; 40 ಪುಟ್ಟ ಹೆಣ್ಣು ಮಕ್ಕಳು ಬಲಿ! » Kannada News | India News | Breaking news | Live news | Kannada | Kannada News | Karnataka News ...

ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಸೀಮೋಲ್ಲಂಘನ ಮಾಡಿದ್ದರೂ ಸಹ ಮಾನವ ಸಮಾಜ ಈ ದ್ವಂದ್ವವನ್ನು ಎದುರಿಸುತ್ತಲೇ ಬಂದಿದೆ. ಮಹಾಭಾರತದ ಕುರುಕ್ಷೇತ್ರದಲ್ಲಿ ಮಡಿದ 18 ಅಕ್ಷೋಹಿಣಿ ಸೈನ್ಯದ ಯೋಧರಿಗೆ ಎಂದಾದರೂ ನಮ್ಮ ಸಮಾಜ ಅನುಕಂಪ ತೋರಿದೆಯೇ ? ಹಾಗೆಯೇ ಅಮೆರಿಕ ತನ್ನ 250 ವರ್ಷಗಳ ಚರಿತ್ರೆಯಲ್ಲಿ ನಡೆಸಿರುವ ದಂಡಯಾತ್ರೆಗಳಲ್ಲಿ ಮಡಿದಿರುವ ಕೋಟ್ಯಂತರ ಜನರಿಗಾಗಿ ಆಧುನಿಕ ಜಗತ್ತು ಶ್ರದ್ಧಾಂಜಲಿ ಸಲ್ಲಿಸಿದೆಯೇ ? ಸದ್ದಾಂ ಹುಸೇನ್‌, ಕರ್ನಲ್‌ ಗಡಾಫಿ ಅವರಂತೆ ಹತ್ಯೆಯಾದ ಖಮೇನಿಗೆ ವಿಶ್ವದಾದ್ಯಂತ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ ಆದರೆ ಈ ಸಾವುಗಳ ಹಿಂದೆ ಬಲಿಯಾದ ಲಕ್ಷಾಂತರ ಯೋಧರಿಗೆ, ಸಾಮಾನ್ಯ ಜನರಿಗೆ, ಮಕ್ಕಳು ಮಹಿಳೆಯರಿಗೆ ಶ್ರದ್ದಾಂಜಲಿ ಸಲ್ಲಿಸುವ ದಾಖಲೆ ಕಾಣಲು ಸಾಧ್ಯವೇ ? ನಾಗರಿಕ ಜಗತ್ತಿನ ಉತ್ಪಾದಿತ ಅಭಿಪ್ರಾಯದಲ್ಲಿ (Manufactured opinion) ಖಮೇನಿ ಶಿಕ್ಷಾರ್ಹ ಎನಿಸಿಕೊಳ್ಳುತ್ತಾನೆ ಆದರೆ 153 ಮಕ್ಕಳು ? ಉತ್ತರಿಸುವವರು ಯಾರು ?

 ನವ ಶತಮಾನದ ಹೊಸ ಹಾದಿಗಳು….

Iran Israel War : Khameneiಪರ Indiaದಲ್ಲಿ  ಪ್ರತಿಭಟನೆ ಮಾಡೋದು ಬೇಡ  |Major| Raghu Ram Reddy |Pratidhvani

 20ನೆ ಶತಮಾನವನ್ನು ಯುದ್ಧಗಳ ಶತಮಾನ ಎನ್ನಲಾಗುತ್ತದೆ. ಹಾಗೆಯೇ ವಿಶ್ವಶಾಂತಿಗಾಗಿ ಯುದ್ಧಗಳನ್ನು ತಡೆಗಟ್ಟುವ ಉದ್ದೇಶದಿಂದಲೇ ವಿಶ್ವ ಸಮುದಾಯ ಒಂದು ಸಂಸ್ಥೆಯನ್ನೇ ಸ್ಥಾಪಿಸಿದ ಶತಮಾನವಾಗಿಯೂ ದಾಖಲಾಗಿದೆ. ಈ ವಿಶ್ವಸಂಸ್ಥೆ ಈಗ ಸಾಮ್ರಾಜ್ಯಶಾಹಿಗಳ ಸಂಕೋಲೆಗಳಲ್ಲಿ ಬಂಧಿಯಾಗಿದೆ. ಈ 20ನೆ ಶತಮಾನದಲ್ಲೇ ಜಗತ್ತಿನಾದ್ಯಂತ ನಾಗರಿಕರು ಯುದ್ಧವಿರೋಧಿ ಧೋರಣೆಯನ್ನೂ ರೂಢಿಸಿಕೊಂಡಿರುವುದು ಗಮನಾರ್ಹ ಸಂಗತಿ. 1960-70 ದಶಕದ ವಿಯಟ್ನಾಂ ಯುದ್ಧ ಸಂದರ್ಭದಲ್ಲಿ ಸೃಷ್ಟಿಯಾದ ಈ ಮಾನವತೆಯ ದನಿ ಇಂದಿಗೂ ಜೀವಂತವಾಗಿದ್ದರೂ, ಕ್ಷೀಣವಾಗಿರುವುದು ವಾಸ್ತವ. ಜೀವ ವಿರೋಧಿ ಯುದ್ಧಗಳನ್ನು ಪ್ರಚೋದಿಸುವ, ಪ್ರೋತ್ಸಾಹಿಸುವ ಮತ್ತು ಸಂಭ್ರಮಿಸುವ ಒಂದು ಸಮಾಜ ಆಧುನಿಕ ಆಳ್ವಿಕೆಗಳಿಗೆ ಅಪ್ಯಾಯಮಾನವಾಗಿ ಕಾಣುತ್ತದೆ. ಆದರೆ ಯುದ್ಧವಿರೋಧಿ ದನಿಗಳು ಸಮಾಜವಿರೋಧಿಯಾಗಿ ಕಾಣುತ್ತವೆ.

 ಯಾವುದೇ ಆಧುನಿಕ ಯುದ್ಧಗಳಲ್ಲಾದರೂ ಬಿದ್ದ ಹೆಣಗಳ  ತಲೆ ಎಣಿಕೆಯನ್ನು (Head count) ವ್ಯವಸ್ಥಿತವಾಗಿ ಮಾಡುವ ಸರ್ಕಾರಗಳಾಗಲೀ, ಮಾಧ್ಯಮಗಳಾಗಲೀ ಈ ಹೆಣಗಳು ಬಿಟ್ಟುಹೋಗುವ ಕುಟುಂಬಗಳು, ಸಂಗಾತಿಗಳು, ಎಳೆ ಮಕ್ಕಳು ಮತ್ತು ನಿರ್ಗತಿಕ ಸಮಾಜಗಳನ್ನು ಗಮನಿಸುತ್ತವೆಯೇ ? ಗಾಝಾ ಪಟ್ಟಿಯಲ್ಲಿ 2023ರ ಅಕ್ಟೋಬರ್‌ 7ರಿಂದ ಈವರೆಗೆ ಇಸ್ರೇಲ್‌ ದಾಳಿಗೆ 70 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆ ನಿರ್ದಿಷ್ಟ ದಿನದಂದೇ ಹಮಾಸ್‌ ಗುಂಪಿನ ದಾಳಿಗೆ 1200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ದಾಳಿ-ಪ್ರತಿದಾಳಿಯ ಸಂಘರ್ಷದಲ್ಲಿ ಪ್ರಾಣ ಕಳೆದುಕೊಳ್ಳುವವರು ಸಾವಿರಾರು ಅನಾಥ ಕುಟುಂಬಗಳನ್ನು ಬಿಟ್ಟು ಹೋಗಿರುತ್ತಾರೆ. ಈ ನಿರ್ಗತಿಕ ಸಮಾಜಗಳು ಮತ್ತು ಅನಾಥ ಮಕ್ಕಳು ಯಾರಿಗೆ ಸಲ್ಲುತ್ತವೆ ?

Ukraine Battlefield Dead Could Reach 500,000 in Fifth Year, Estimates Suggest - The New York Times

ಕಾರಣ ಏನೇ ಇರಲಿ, ಮಾನವೀಯತೆಯನ್ನೇ ಮರೆತು ಅಮಾಯಕರ ಹತ್ಯೆ ಮಾಡುವಂತಹ ಹಿಂಸಾತ್ಮಕ ಮಾರ್ಗವನ್ನು ಹೇಗೆ ನಿರ್ವಚಿಸುವುದು ? ಈ ಪ್ರಶ್ನೆಗೆ ಭಯೋತ್ಪಾದಕ ಸಂಘಟನೆಗಳೂ ಉತ್ತರದಾಯಿಯಾಗುತ್ತವೆ.  ಕಾಶ್ಮೀರದ ಪೆಹಲ್ಗಾಮ್‌, ಪುಲ್ವಾಮಾದಲ್ಲಿ ಮಡಿದ ಯೋಧರು ಮತ್ತು ಅವರ ಕುಟುಂಬ ಸದಸ್ಯರು ಈ ಪ್ರಶ್ನೆ ಎತ್ತಿದರೆ, ಉತ್ತರಿಸುವವರಾರು ? ನಿರಂತರವಾಗಿ ನಡೆಯುತ್ತಲೇ ಇರುವ ಕೋಮು ಗಲಭೆಗಳಲ್ಲಿ ಶಾಶ್ವತವಾಗಿ ಕಳೆದುಹೋಗುವ ಪ್ರತಿಯೊಂದು ಜೀವವೂ ಈ ಪ್ರಶ್ನೆಗೆ ಉತ್ತರ ಬಯಸುತ್ತದೆ. ತತ್ವ, ಸಿದ್ದಾಂತ, ಬಂಡವಾಳ, ಮಾರುಕಟ್ಟೆ, ಸಂಪನ್ಮೂಲ, ಭೌಗೋಳಿಕ ಅಸ್ಮಿತೆ ಮತ್ತು ಜನಾಂಗೀಯ ಅಸ್ತಿತ್ವ ಹೀಗೆ ಹತ್ತು ಹಲವು ಕಾರಣಗಳಿಗಾಗಿ ಮಾನವ ಜಗತ್ತು ಯುದ್ಧ ಪರಂಪರೆಯನ್ನು ಪೋಷಿಸಿಕೊಂಡೇ ಬಂದಿದೆ.

 ಆಧುನಿಕತೆ ಮತ್ತು ಮಾನವೀಯತೆ

 ಆದರೂ ನಮ್ಮನ್ನು ನಾವು ʼಆಧುನಿಕ ನಾಗರಿಕತೆʼ (Modern Civilisation) ಎಂದೇ ಕರೆದುಕೊಳ್ಳುತ್ತಿದ್ದೇವೆ. ಈ ನಾಗರಿಕತೆಯನ್ನು ಕಾಪಾಡಲು ವಿಜ್ಞಾನ ಮತ್ತು ವೈಜ್ಞಾನಿಕ ಜ್ಞಾನ ಸಂಪತ್ತನ್ನು ಜೀವವಿರೋಧಿ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಬಳಕೆಗಾಗಿ ಯಾವುದೇ ಅಳುಕು, ಮುಜುಗರ, ಹಿಂಜರಿಕೆ ಇಲ್ಲದೆ ಬಳಸುತ್ತಿದ್ದೇವೆ. ಈ ವೈಜ್ಞಾನಿಕ ಮುನ್ನಡೆಯಿಂದ ಆಗುತ್ತಿರುವ ಅನಾಹುತಗಳಿಗೆ, ಸಾವು ನೋವುಗಳಿಗೆ ಪಶ್ಚಾತ್ತಾಪ ವ್ಯಕ್ತಪಡಿಸುವ ಕನಿಷ್ಠ ಸೂಕ್ಷ್ಮ ಪ್ರಜ್ಞೆಯನ್ನೂ ಮಾನವ ಸಮಾಜ ಕಳೆದುಕೊಂಡಿದೆ. ಈ ಸಮಾಜವೇ ಜೀವವಿರೋಧಿ ಯುದ್ಧಗಳನ್ನು ಸಂಭ್ರಮಿಸುತ್ತಾ, ಯುದ್ಧವಿರೋಧಿಗಳನ್ನು ಖಂಡಿಸುತ್ತಾ ಬಂದಿದೆ. ಇದು ಸಾರ್ವತ್ರಿಕ ಲಕ್ಷಣ. ಹಾಗಾಗಿಯೇ ಭಾರತದಲ್ಲೂ ಸಹ ʼ ಯುದ್ಧ ವಿರೋಧಿ ʼ ದನಿಗಳು ನಿಗಾ ಇಡಬೇಕಾದ, ದುಷ್ಟ ಶಕ್ತಿಗಳಾಗಿ ಪರಿಗಣಿಸಲ್ಪಡುತ್ತವೆ. ವಿಶಾಲ ಸಮಾಜದ ನೆಲೆಯಲ್ಲಿ ಭಯೋತ್ಪಾದನೆ, ಮತಾಂಧತೆಯನ್ನು ಸಾಪೇಕ್ಷವಾಗಿ ನೋಡುವಂತೆಯೇ ಯುದ್ಧಗಳನ್ನೂ ನೋಡಲಾಗುತ್ತದೆ.

The Most Remote and Simplest Village Away from Modern Civilization on Earth

ತನ್ನ ಸರ್ವಾಧಿಕಾರದ ಆಳ್ವಿಕೆಯಲ್ಲಿ ಸಾವಿರಾರು ಹೋರಾಟಗಾರರ, ಮಹಿಳೆಯರ, ಹಸುಳೆಗಳ, ಅಮಾಯಕ ಜನರ ಸಾವಿಗೆ ಕಾರಣವಾಗಿರುವ ಆಯೊತುಲ್ಲಾ ಖಮೇನಿ ಶಿಕ್ಷಾರ್ಹನೇ ಹೌದು. ಆದರೆ ಈ ಶಿಕ್ಷೆ ನೀಡುವ ಹಕ್ಕು ಮತ್ತು ಜವಾಬ್ದಾರಿ ಇರುವುದು ಇರಾನಿನ ಜನತೆಗೇ ಹೊರತು, ಅಮೆರಿಕ ಅಥವಾ ಇಸ್ರೇಲ್‌ಗೆ ಅಲ್ಲ. ಮತ್ತೊಂದು ಸಾರ್ವಭೌಮ ರಾಷ್ಟ್ರದ ನಾಯಕನನ್ನು ಅಪಹರಿಸುವ, ಹತ್ಯೆ ಮಾಡುವ ಹಕ್ಕನ್ನು ಯಾವ ಅಂತಾರಾಷ್ಟ್ರೀಯ ಕಾನೂನು ಸಂಹಿತೆಗಳೂ ಮಾನ್ಯ ಮಾಡುವುದಿಲ್ಲ. ಆದರೂ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ವಿಸ್ತರಣೆಯ ಹಾದಿಯಲ್ಲಿ ಇಂತಹ ಹಲವು ಹತ್ಯೆಗಳಿಗೆ ಕಾರಣವಾಗಿದೆ. ಇದನ್ನು ಪ್ರಶ್ನಿಸುವ ವಿವೇಕ ಮತ್ತು ವಿವೇಚನೆ ಮಾನವ ಸಮಾಜದಲ್ಲಿ ಇರಬೇಕಲ್ಲವೇ ?

 ಯುದ್ಧದ ಮಾದರಿಗಳು ಬದಲಾಗಿವೆ, ಶಸ್ತ್ರಾಸ್ತ್ರಗಳ ಪ್ರಯೋಗ ವಿಧಾನಗಳು ಬದಲಾಗಿವೆ. ಆದರೆ ಶಸ್ತ್ರಾಸ್ತ್ರ ಉತ್ಪಾದನೆ, ಸಂಗ್ರಹ ಮತ್ತು ಮಾರಾಟ ಇಲ್ಲದೆ ತನ್ನ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗದ ಅಮೆರಿಕದ ಯುದ್ಧಕೋರ ನೀತಿ ಬದಲಾಗಿಲ್ಲ. ಪ್ರತಿ ಹತ್ತು ವರ್ಷಗಳಿಗೊಂದು ದೊಡ್ಡ ಪ್ರಮಾಣದ ಯುದ್ಧ ನಡೆಯುತ್ತಲೇ ಇರುವುದನ್ನು 1960ರ ದಶಕದಿಂದಲೂ ಗುರುತಿಸಬಹುದು. ಇದರ ವರ್ತಮಾನದ ಆಯಾಮವನ್ನು ಇಡೀ ಜಗತ್ತು ಇರಾನ್‌, ಲೆಬನಾನ್‌, ಮಧ್ಯಪ್ರಾಚ್ಯ ದೇಶಗಳಲ್ಲಿ ನೋಡುತ್ತಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ವಿಶ್ವಸಮುದಾಯದ ಜೀವನ ವಿಧಾನವಾಗಿ ನೆಲೆಗೊಳ್ಳಬೇಕಾದರೆ, ಎಲ್ಲ ದೇಶಗಳಲ್ಲೂ ಸರ್ವಾಧಿಕಾರ, ನಿರಂಕುಶಾಧಿಕಾರ ಮತ್ತು ಯುದ್ಧಗಳಿಂದಲೇ ವಿಸ್ತರಿಸುವ ಸಾಮ್ರಾಜ್ಯಶಾಹಿಯನ್ನು ಕೊನೆಗಾಣಿಸಬೇಕಾಗುತ್ತದೆ.

Netanyahu in US: Meeting with Trump's envoy tonight, with Potus tomorrow on second phase of Gaza deal – Firstpost

 ಈ ದೃಷ್ಟಿಯಿಂದ ವಿಶ್ವ ಸಮುದಾಯದ ಪ್ರಜ್ಞಾವಂತ ಸಮಾಜಗಳು ಜಾಗತಿಕ ಮಟ್ಟದಲ್ಲಿ ಜಾಗೃತವಾಗಬೇಕಿದೆ. ಎಲ್ಲ ದೇಶಗಳಲ್ಲಿರುವ ಯುದ್ಧ ವಿರೋಧಿ ಮನಸ್ಸುಗಳು, ಪ್ರಜಾತಂತ್ರದ ದನಿಗಳು, ಮಾನವೀಯ ಮನಸ್ಸುಗಳು ಹಾಗೂ ವಿಶ್ವ ಶಾಂತಿ ಬಯಸುವ ಸಂಘಟನೆಗಳು ಒಕ್ಕೊರಲಿನ ದನಿಯೊಂದನ್ನು ಸೃಷ್ಟಿಸಬೇಕಿದೆ. ಇದು ಆಧುನಿಕ ನಾಗರಿಕತೆಯ ನೈತಿಕ ಕರ್ತವ್ಯ ಮತ್ತು ಮುಂದುವರೆದ ಸಮಾಜದ ಆದ್ಯತೆಯಾಗಬೇಕಿದೆ. ಮನುಕುಲ ಈ ಜಗತ್ತಿಗೆ ಸೇರಿದ ಆಸ್ತಿ. ಇಡೀ ಜಗತ್ತು ಮನುಕುಲದ ಆಸ್ತಿ. ಎರಡನ್ನೂ ಭವಿಷ್ಯದ ದಿನಗಳಿಗಾಗಿ ಸಂರಕ್ಷಿಸುವ ವಿವೇಕವನ್ನು ಮಾನವ ಸಮಾಜ ರೂಢಿಸಿಕೊಳ್ಳಬೇಕಿದೆ.

 ಈ ವಿವೇಕ-ಸೃಷ್ಟಿಗೆ ಅಡ್ಡಿಯಾಗುವ ಯುದ್ಧ ಪರಂಪರೆಯನ್ನು ಮತ್ತು ಯುದ್ಧಕೋರ ಮನಸ್ಥಿತಿಯನ್ನು ಕೊನೆಗಾಣಿಸುವುದು ನಾಗರಿಕತೆಯ (Civilisational) ಪ್ರಥಮ ಆದ್ಯತೆಯಾದಾಗ, ಇಡೀ ವಿಶ್ವವೇ ʼಸರ್ವ ಜನಾಂಗದ ಶಾಂತಿಯ ತೋಟʼ ಆಗುತ್ತದೆ. ಮಾನವ ಸಮಾಜವನ್ನು ಪ್ರತಿನಿಧಿಸುವವರು ʼ ವಿಶ್ವಮಾನವ ʼರಾಗುತ್ತಾರೆ. ಪ್ರಸ್ತುತ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಮತ್ತು ಇರಾನ್‌ ನಡುವಿನ ಸಂಘರ್ಷವನ್ನು ಈ ದೃಷ್ಟಿಯಿಂದಲೇ ಪರಾಮರ್ಶಿಸಬೇಕಿದೆ. ಇಲ್ಲಿ ಪರ-ವಿರೋಧ ಪ್ರಶ್ನೆ ಉದ್ಭವಿಸಿದರೆ ಅದು ಯಾವುದೇ ದೇಶ ಅಥವಾ ನಾಯಕ ಕಾಣಬೇಕಿಲ್ಲ. ಜೀವ ಪರ-ಜೀವ ವಿರೋಧ ಅಷ್ಟೇ ಕಾಣಬೇಕಿದೆ. ಈ ಔದಾತ್ಯಕ್ಕಾಗಿ ಶ್ರಮಿಸುವ ದೇಶಗಳನ್ನು ಗುರುತಿಸಲು ಸಾಧ್ಯವೇ ? ಅಸಾಧ್ಯವಾಗಿರುವುದೇ ನಮ್ಮ ಮುಂದಿರುವ ಜಟಿಲ ಸವಾಲು.

 (ಇಸ್ರೇಲ್-ಅಮೆರಿಕ ಮತ್ತು ಇರಾನ್‌ ಸಂಘರ್ಷದ ಆಂತರಿಕ ಸೂಕ್ಷ್ಮಗಳು – ಮುಂದಿನ ಭಾಗದಲ್ಲಿ)

 -೦-೦-೦-೦-

Tags: Capitalist MindsetDictatorshipdigital lifestyleDrone attackinternational newsIran israel conflictsiran israel warMiddle EastmissilesNa DivakarNaturalise warOil PurchasingPratidhvaniSpecial ArticleWar LossWar Tentions
Previous Post

ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

Next Post

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

Related Posts

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!
Top Story

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

by ಪ್ರತಿಧ್ವನಿ
March 4, 2026
0

ಬೆಂಗಳೂರು : ರೈತರು ತಮ್ಮ ಗಂಗಾ ಕಲ್ಯಾಣ ಯೋಜನೆ ಕುರಿತ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಗಂಗಾ ಕಲ್ಯಾಣ ಪೋರ್ಟಲ್‌ನಲ್ಲಿ ಬೆಸ್ಕಾಂ ವತಿಯಿಂದ ಹೊಸ ಆಯ್ಕೆ...

Read moreDetails
ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

March 4, 2026
ಅಸಭ್ಯವಾಗಿ ವೀಡಿಯೋ-ಫೋಟೋ ಚಿತ್ರೀಕರಿಸುವವರ ವಿರುದ್ಧ ನಟಿ ಸಪ್ತಮಿ ಗೌಡ ಆಕ್ರೋಶ..!

ಅಸಭ್ಯವಾಗಿ ವೀಡಿಯೋ-ಫೋಟೋ ಚಿತ್ರೀಕರಿಸುವವರ ವಿರುದ್ಧ ನಟಿ ಸಪ್ತಮಿ ಗೌಡ ಆಕ್ರೋಶ..!

March 4, 2026
Next Post
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada