ಹಾವೇರಿ: ಪೋಷಕರು ಕಾಲೇಜಿನ ಶುಲ್ಕ ಕಟ್ಟಿಲ್ಲ ಎನ್ನುವ ಕಾರಣಕ್ಕೆ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿನಿಗೆ ಹಾಲ್ ಟಿಕೆಟ್ ನೀಡದೆ ಸತಾಯಿಸಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದಿದೆ.

ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ರಾಣೆಬೆನ್ನೂರಿನ BAGSS ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯೊಬ್ಬರು 30,000 ರೂ. ಶುಲ್ಕ ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ ಇಂದು ಕನ್ನಡ ಭಾಷಾ ವಿಷಯದ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಗೆ ಶುಲ್ಕ ಬಾಕಿ ಇರುವುದರಿಂದ ಹಾಲ್ ಟಿಕೆಟ್ ನೀಡುವುದಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ ಎಂದು ವರದಿಯಾಗಿದೆ. ಇದರಿಂದ ವಿದ್ಯಾರ್ಥಿನಿ ಪರೀಕ್ಷಾ ಕೊಠಡಿಯ ಒಳಗೆ ಹೋಗಲಾಗದೆ ಪರದಾಡುವಂತಾಯಿತು.

ಈ ವೇಳೆ ಸಾಮಾಜಿಕ ಹೋರಾಟಗಾರ ಹನುಮಂತಪ್ಪ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿನಿಯ ಭವಿಷ್ಯದ ದೃಷ್ಟಿಯಿಂದ ಹಾಲ್ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಕಾಲೇಜಿನ ಸಿಬ್ಬಂದಿ ಎಲ್ಲಾ ಕಾಲೇಜಿನವರು ಫ್ರೀ ಕಲಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಎಷ್ಟೇ ಕೇಳಿಕೊಂಡರೂ ಕಾಲೇಜಿನ ಸಿಬ್ಬಂದಿ ಹಾಲ್ ಟಿಕೆಟ್ ನೀಡದೇ ಸತಾಯಿಸಿದ್ದಾರೆ. ಇತ್ತ ಪರೀಕ್ಷೆಗೆ ಸಿದ್ಧಳಾಗಿ ಬಂದ ವಿದ್ಯಾರ್ಥಿನಿ ಪರೀಕ್ಷೆ ಬರೆಯಲಾಗದೆ ಕೇಂದ್ರದ ಮುಂದೆ ನಿಂತು ಕಣ್ಣೀರು ಹಾಕಿದ್ದಾಳೆ.

ಕೇವಲ ಹಣಕ್ಕಾಗಿ ವಿದ್ಯಾರ್ಥಿನಿಯ ಭವಿಷ್ಯ ಹಾಳು ಮಾಡುತ್ತಿರುವ ಕಾಲೇಜು ಆಡಳಿತ ಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರು ಈ ಬಗ್ಗೆ ಗಮನ ಹರಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.







