ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿವೆ. ಈ ಬಾರೀ 5,174 ಕಾಲೇಜುಗಳ 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಎಲ್ಲಾ ಪರೀಕ್ಷಾ ಕೊಠಡಿಗಳಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು ಮತ್ತು ಜಿಲ್ಲಾ ಕೇಂದ್ರದಲ್ಲಿ ಯಾವುದೇ ಕೇಂದ್ರದ ಯಾವುದೇ ಕೊಠಡಿ ವ್ಯವಸ್ಥೆಯನ್ನು ವೀಕ್ಷಿಸಬಹುದಾದ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಈ ಬಾರಿಯೂ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಾದ್ಯಂತ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕಠಿಣ ಕ್ರಮ ಜರುಗಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಈಗಾಗಲೇ ನಿಗಾ ಇಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪರೀಕ್ಷಾ ಕೇಂದ್ರಗಳ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಆತಂಕವಿಲ್ಲದೆ ಪರೀಕ್ಷೆ ಬರೆಯುವಂತೆ ಅಗತ್ಯ ಭದ್ರತೆ ಒದಗಿಸಲಾಗಿದೆ.

ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ಜಾರಿಗೊಳಿಸಲಾಗಿದ್ದು, ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಜ್ಜಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ
ಫೆಬ್ರವರಿ 28- ಕನ್ನಡ, ಅರೇಬಿಕ್
ಮಾರ್ಚ್ 2- ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
ಮಾರ್ಚ್ 3- ಇಂಗ್ಲಿಷ್
ಮಾರ್ಚ್ 4- ತಮಿಳು,ತೆಲುಗು,ಮಲಯಾಳಂ, ಮರಾಠಿ,ಉರ್ದು,ಸಂಸ್ಕೃತ ಫ್ರೆಂಚ್
ಮಾರ್ಚ್ 5- ಇತಿಹಾಸ
ಮಾರ್ಚ್ 6- ಭೌತಶಾಸ್ತ್ರ
ಮಾರ್ಚ್ 7- ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ,ಭೂಗರ್ಭ ಶಾಸ್ತ್ರ
ಮಾರ್ಚ್ 9- ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾರ್ಚ್ 10- ಅರ್ಥಶಾಸ್ತ್ರ
ಮಾರ್ಚ್ 11- ತರ್ಕಶಾಸ್ತ್ರ,ವಿದ್ಯುನ್ಮಾನಶಾಸ್ತ್ರ,ಗೃಹ ವಿಜ್ಞಾನ
ಮಾರ್ಚ್ 12- ಹಿಂದಿ
ಮಾರ್ಚ್ 13- ರಾಜ್ಯಶಾಸ್ತ್ರ
ಮಾರ್ಚ್ 14- ಲೆಕ್ಕಶಾಸ್ತ್ರ, ಗಣಿತ
ಮಾರ್ಚ್ 16- ಸಮಾಜಶಾಸ್ತ್ರ,ಜೀವಶಾಸ್ತ್ರ,ಗಣಕ ವಿಜ್ಞಾನ
ಮಾರ್ಚ್ 17- ಹಿಂದುಸ್ತಾನಿ, ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ






