ಪ್ರತಿಧ್ವನಿ ವಿಶೇಷ ವರದಿ..
ಬೆಂಗಳೂರು : ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿವೆ. ಹೀಗಾಗಿ ಬೆಳಗಾವಿಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಫಲಿತಾಂಶ ಸುಧಾರಣೆಗೆ ಉಪನಿರ್ದೇಶಕರಾದ ಸೀತಾರಾಮ ಅವರು ವಿಶೇಷ ಪ್ರಯತ್ನದ ಜೊತೆಗೆ ಮಾದರಿ ನಡೆಗೆ ಮುಂದಾಗಿದ್ದಾರೆ.

ಮಾರ್ಚ್ 16ರಿಂದ ಆರಂಭವಾಗಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಈಗಿನಿಂದಲೇ ವಿದ್ಯಾರ್ಥಿಗಳ ತಯಾರಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ತಾವೇ ಖುದ್ದಾಗಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪರೀಕ್ಷೆ ಸಿದ್ಧತೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅವರಿಗೆ ಆತ್ಮಸ್ಥೈರ್ಯ ಹಾಗೂ ಪರೀಕ್ಷೆ ಎದುರಿಸುವ ಕುರಿತು ಮಾರ್ಗದರ್ಶನ ಮಾಡುತ್ತಿದ್ದಾರೆ. ಕಚೇರಿಯ ಅವಧಿಯ ಬಳಿಕವೂ ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ಮನೆ ಮನೆ ಭೇಟಿಯ ವಿನೂತನ ಕಾರ್ಯಕ್ರಮದಿಂದ ಸೀತಾರಾಮು ಎಲ್ಲರ ಗಮನ ಸೆಳೆಯುವಂತೆ ಮಾಡುತ್ತಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳ ಓದಿಗೆ ಅಡಚಣೆಯಾಗಬಾರದು ಹಾಗೂ ಸರಾಗವಾಗಿ ಓದಿಕೊಳ್ಳಲು ಸಾಧ್ಯವಾಗುವಂತೆ ವಿಶೇಷ ಕೊಠಡಿಗಳ ವ್ಯವಸ್ಥೆ ಮಾಡಿ, ಅಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರೆಸಲು ಅನುಕೂಲ ಮಾಡಿಕೊಡುತ್ತಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು ?
ಪ್ರಮುಖವಾಗಿ ಪ್ರತಿಯೊಂದು ಗ್ರಾಮದಲ್ಲಿಯೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲ ಉಂಟಾಗಬಾರದು ಎಂಬ ಉದ್ದೇಶದಿಂದ ಉಪನಿರ್ದೇಶಕರು ಈ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ. ವಿದ್ಯಾರ್ಥಿಗಳ ಪೋಷಕರನ್ನು ಭೇಟಿಯಾಗಿ ಅವರ ದಿನನಿತ್ಯದ ಚಟುವಟಿಕೆಗಳು, ಓದಿನ ಕುರಿತು ಸಂಪೂರ್ಣ ಮಾಹಿತಿ ಪಡೆದು ಉತ್ತಮ ಓದಿಗಾಗಿ ಮಕ್ಕಳನ್ನು ಪ್ರೇರೇಪಿಸಿ ಎಂದು ಸಲಹೆ ನೀಡುತ್ತಿದ್ದಾರೆ.







