ಬೆಂಗಳೂರು: 9 ಡ್ರೀಮ್ಸ್ ಸಂಸ್ಥೆಯಿಂದ ಆಯೋಜನೆಯಾಗಿರುವ ಚೊಚ್ಚಲ ಆವೃತ್ತಿಯ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ (CM Cup Badminton Tournament) ನಿನ್ನೆಯಿಂದ ಆರಂಭವಾಗಿದೆ. ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಅಂಗಳದಲ್ಲಿ ಎಂಟು ತಂಡಗಳ ನಡುವೆ ಜಿದ್ದಾಜಿದ್ದಿಯ ಪಂದ್ಯಗಳು ನಡೆಯುತ್ತಿವೆ.
ಜನಪ್ರತಿನಿಧಿಗಳು, ಐಎಎಸ್-ಐಪಿಎಸ್ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ವೈದ್ಯರು, ಸ್ಯಾಂಡಲ್‌ವುಡ್ ತಾರೆಯರು ಹಾಗೂ ಪತ್ರಕರ್ತರು ಸೇರಿದಂತೆ 120ಕ್ಕೂ ಅಧಿಕ ಆಟಗಾರರು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ.
ಈ ಬಗ್ಗೆ ಪತ್ರಕರ್ತ ಸನತ್ ರೈ ಖುಷಿ ಹಂಚಿಕೊಂಡಿದ್ದು, ಅಂದುಕೊಂಡ ಕನಸು ನನಸಾಗಿ ಮೂಡಿದೆ ಒಂದು ಅವಿಸ್ಮರಣೀಯ ದೃಶ್ಯ ಕಾವ್ಯ. ಹತ್ತು ಮಂದಿ ಕನಸುಗಾರರ ಅವಿರತ ಶ್ರಮಕ್ಕೆ ಪ್ರತಿಫಲ ಸಿಕ್ಕಾಗ ಕಾಣುತ್ತಿದೆ ಸಾರ್ಥಕತೆಯ ಭಾವ. ಪ್ರೀತಿ, ವಿಶ್ವಾಸ, ನಂಬಿಕೆ, ಪಾರದರ್ಶಕತೆ, ಪ್ರಾಮಾಣಿಕತೆಯನ್ನೇ ಬಂಡವಾಳವನ್ನಾಗಿಸಿಕೊಂಡು ಇಟ್ಟ ಹೆಜ್ಜೆಯ ಸದ್ದು ಕೇಳುಗರಿಗೆ ಇಂಪಾಗಿ ಮಾರ್ದನಿಸುತ್ತಿದೆ. ನೋಡುಗರ ಕಣ್ಣು ತಂಪಾಗಿಸುತ್ತಿದೆ. ನಾಲಗೆಯಿಂದ ಹೊರಹೊಮ್ಮುವ ಮಾತುಗಳು ಹೃದಯಕ್ಕೆ ತಟ್ಟಿದಂತಿವೆ. ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.

ಯಾಕಂದ್ರೆ ಇಲ್ಲಿ ಒತ್ತಡಕ್ಕೆ ಪರಿಶ್ರಮವೇ ಮದ್ದಾಗಿದೆ. ಸವಾಲುಗಳಿಗೆ ಬದ್ದತೆಯೇ ಬೂಸ್ಟರ್ ಆಗಿದೆ. ಮುನ್ನಗ್ಗುವ ಹುಂಬುತನದ ಧೈರ್ಯಕ್ಕೆ ಆತ್ಮವಿಶ್ವಾಸವೇ ಇಂಜೆಕ್ಷನ್ ಆಗಿದೆ. ಪ್ರೀತಿ, ವಿಶ್ವಾಸವೇ ವಿಟಮಿನ್ ಆಗಿದೆ. ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯೇ ಯಶಸ್ಸಿನ ಗುಟ್ಟಾಗಿದೆ. ಕನಸು ನನಸಾಗಿಸಲು ಹೊರಟಾಗ ನಮ್ಮ ನಡುವಿನ ಯೋಚನೆಗಳು ಗೊಂದಲಗಳನ್ನು ಸೃಷ್ಟಿಸಿತ್ತು. ಯೋಜನೆ ಉಲ್ಟಾಪಲ್ಟಾ ಆದಾಗ ಗಲಿಬಿಲಿಗೊಳ್ಳುವಂತಾಗಿತ್ತಿತ್ತು. ಆದ್ರೆ ನಮ್ಮಲ್ಲರದ್ದು ಒಂದೇ ಧ್ಯೇಯ/ಒಂದೇ ಉದ್ದೇಶವಿತ್ತು. ಒಂದೇ ಗುರಿ ಇತ್ತು. ಹಾಗಾಗಿಯೇ ಇಂದು ಕನಸು.. ಗುರಿ ಮುಟ್ಟಿರುವ ಖುಷಿ, ಸಂತಸ, ಸಂಭ್ರಮದಿಂದ ನಲಿದಾಡುವಂತೆ ಮಾಡಿದೆ.
ಇದು 9 ಡ್ರೀಮ್ಸ್ ತಂಡದ ಶಕ್ತಿಯನ್ನು ಸಾರಿದೆ. ನಾಯಕರ ಆಟ.. ಸ್ನೇಹದ ಗೆಲುವಿನ ಕೂಟ. ಈ ಘೋಷ ವಾಕ್ಯ ಭಾಗವಹಿಸಿದ್ದ ಎಂಟು ಫ್ರಾಂಚೈಸಿಗಳ ತಂಡ ಹಾಗೂ ಪ್ರಾಯೋಜಕರಿಗೂ ಮನ ತಟ್ಟಿದೆ. ನಿಮಗೆಲ್ಲರಿಗೂ 9 ಡ್ರೀಮ್ಸ್ ತಂಡ ಅಭಾರಿಯಾಗಿದೆ. ನಿಮ್ಮ ಪ್ರೋತ್ಸಾಹ, ಬೆಂಬಲಕ್ಕೆ 9 ಡ್ರೀಮ್ಸ್ ತಂಡ ಚಿರಋಣಿಯಾಗಿದೆ. ಸಿಎಂ ಕಪ್ ಇದು ಆರಂಭ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.






