ಬೆಂಗಳೂರು: ನಗರದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ವಿಕ್ಟೋರಿಯಾ (Victoria) ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಸ್ಥಗಿತಗೊಂಡಿದ್ದು, ರೋಗಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ಎಂಆರ್‌ಐ ಯಂತ್ರಗಳು ಕಾರ್ಯನಿರ್ವಹಿಸದೇ ಇರುವುದರಿಂದ ನೂರಾರು ರೋಗಿಗಳು ಆಸ್ಪತ್ರೆಯಲ್ಲೇ ಅಲೆದಾಡುವ ಸ್ಥಿತಿ ಎದುರಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಹಾಗೂ ಪಿಎಂಎಸ್‌ಎಸ್‌ವೈ ಸೇರಿದಂತೆ ಒಟ್ಟು ಮೂರು ಸ್ಕ್ಯಾನಿಂಗ್ ಯಂತ್ರಗಳಷ್ಟೇ ಲಭ್ಯವಿದ್ದು, ಅವುಗಳಲ್ಲಿ ಒಂದು ಎಸಿ ಸಮಸ್ಯೆಯಿಂದ ನಿಂತಿದೆ. ಉಳಿದ ಯಂತ್ರಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಸ್ಕ್ಯಾನಿಂಗ್ ವಿಳಂಬವಾಗುತ್ತಿದೆ ಎನ್ನಲಾಗಿದೆ.

ತುರ್ತು ಚಿಕಿತ್ಸೆಗೆ ಸ್ಕ್ಯಾನಿಂಗ್ ಅಗತ್ಯವಿರುವ ರೋಗಿಗಳಿಗೆ ವರದಿ ತಡವಾಗಿ ಸಿಗುತ್ತಿದೆ. ಎರಡು ದಿನಗಳಿಂದ ಕೌಂಟರ್‌ಗೆ ಬಂದು ಸ್ಕ್ಯಾನ್ ಆಗದೆ ಹಿಂತಿರುಗುತ್ತಿರುವ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ಒತ್ತಾಯಿಸಿದ್ದಾರೆ. ರಾಜ್ಯದ ಹಲವು ಜಿಲ್ಲಾಸ್ಪತ್ರೆಗಳಲ್ಲಿಯೂ ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸೇವೆಗಳು ಸ್ಥಗಿತಗೊಂಡಿದ್ದು, ಆರೋಗ್ಯ ಇಲಾಖೆ ತಕ್ಷಣವೇ ಈ ಬಗ್ಗೆ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.







