ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಈಗ ಸದ್ಯ ಬಿಸಿ ಬಿಸಿ ಸುದ್ದಿಯಾಗಿದೆ. ಇಂತಹ ಸಂಧರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ಭಾರಿ ಚರ್ಚೆಗೆ ಕಾರಣವಾಗಿದೆ.

ನನ್ನ ಮೇಲೆ ವಿರೋಧಿಗಳು ನಡೆಸುತ್ತಿರುವ ಬಹುತೇಕ ದಾಳಿಗಳು, ಮಾಡುತ್ತಿರುವ ಟೀಕೆ-ಆರೋಪಗಳಿಗೆ ನಾನು ಹುಟ್ಟಿದ ಜಾತಿಯೂ ಒಂದು ಕಾರಣ. ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಕೆಲವು ಜನರ ಕಣ್ಣು ಕೆಂಪಾಗಲು ಕಾರಣ ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕುರಿಕಾಯುತ್ತಾ ಇರಬೇಕಾದವನು ಮುಖ್ಯಮಂತ್ರಿ ಆಗಿ, ಆರ್ಥಿಕ ತಜ್ಞರಿಗೆ ಸರಿಸಮನಾಗಿ ನಿಂತು ಸಾಲುಸಾಲು ಬಜೆಟ್ ಮಂಡಿಸಿ ಶಹಬ್ಬಾಸ್ ಗಿರಿ ಗಳಿಸುತ್ತಿದ್ದಾನಲ್ಲಾ ಎನ್ನುವ ಅಸಹನೆ, ಅವರೊಳಗೆ ದ್ವೇಷ, ಅಸೂಯೆ ಆಗಿದೆ. ಇವನೊಬ್ಬನನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ನಂತರ ಹಾದಿ ಸುಲಭವಾಗುತ್ತದೆ ಎನ್ನುವ ರಾಜಕೀಯ ದುರುದ್ದೇಶದ ಲೆಕ್ಕಾಚಾರ ಇವರ ಮನಸ್ಸಿನಲ್ಲಿದೆ ಎಂದು ಸಿಎಂ ಬರೆದುಕೊಂಡಿದ್ದಾರೆ..

ಸಾಮಾಜಿಕ ಬದಲಾವಣೆಗೆ ಕೈ ಹಾಕಿದವರೆಲ್ಲರ ವಿರುದ್ಧ ಇಂತಹ ಷಡ್ಯಂತ್ರಗಳು ನಡೆದಿರುವುದನ್ನು ಇತಿಹಾಸದ ಪುಟದಲ್ಲಿ ಕಾಣಬಹುದು. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಪೆರಿಯಾರ್, ನಾರಾಯಣ ಗುರು, ಕನಕದಾಸರಾದಿಯಾಗಿ ಸಾಮಾಜಿಕ ಪರಿವರ್ತನೆಗೆ ಹೋರಾಟ ನಡೆಸಿದವರೆಲ್ಲರನ್ನು ಹಣಿಯುವ, ದಮನಿಸುವ, ಮುಗಿಸುವ ಸಂಚು-ಒಳಸಂಚುಗಳು ನಡೆಯುತ್ತಲೇ ಬಂದಿದೆ.

ಬಸವಣ್ಣ ಏನು ತಪ್ಪು ಮಾಡಿದ್ದರು? ಜಾತಿ ವಿನಾಶಕ್ಕೆ ಪ್ರಯತ್ನ ಮಾಡಿದ್ದರು, ಅಂತರಜಾತಿ ಮದುವೆ ಮಾಡಿಸಿದ್ದರು, ಅವಕಾಶ ವಂಚಿತ ತಬ್ಬಲಿ ಜಾತಿಗಳಿಗೆ ಸ್ವಾಭಿಮಾನದ ದೀಕ್ಷೆ ಕೊಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸುವ ಪ್ರಯತ್ನ ಮಾಡಿದ್ದರು. ಈ ಕಾರಣಕ್ಕಾಗಿ ಅವರನ್ನು ವ್ಯವಸ್ಥಿತ ಸಂಚಿನ ಮೂಲಕ ಮುಗಿಸಲಾಯಿತು. ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದ್ದಾರೆ.






